ಗದಗ

ಮಹಿಳಾ ಸಬಲೀಕರಣಕ್ಕೆ ಕೌಶಲ್ಯಾಭಿವೃದ್ಧಿ ಅಗತ್ಯ

ಮಹಿಳಾ ಸಬಲೀಕರಣಕ್ಕೆ ಕೌಶಲ್ಯಾಭಿವೃದ್ಧಿ ಅಗತ್ಯ


ಗದಗ 19: ಸಾಂಪ್ರದಾಯಿಕ ಹಬ್ಬ-ಹರಿದಿನಗಳ ಆಚರಣೆಗಳನ್ನು ಮಹಿಳೆಯರ ಕೌಶಲ್ಯಾಭಿವೃದ್ಧಿ ಹಾಗೂ ಆರ್ಥಿಕ ಸ್ವಾವಲಂಬನೆಗೆ ಪೂರಕವಾಗಿ ಬಳಸಿಕೊಂಡಾಗ ನಿಜವಾದ ಮಹಿಳಾ ಸಬಲೀಕರಣ ಸಾಧ್ಯ ಎಂದು ದಾರೀದೀಪ ಮಹಿಳಾ ವಿವಿಧೋದ್ದೇಶ ಸಂಸ್ಥೆಯ ಅಧ್ಯಕ್ಷೆ ಶಕುಂತಲಾ ಮುಳುಗುಂದ ಹೇಳಿದರು. ನಗರದ ಸೂರ್ಯನಗರದಲ್ಲಿ ಗಜಾನನ ಯುವಕ ಮಂಡಳಿ ಹಾಗೂ ದಾರೀದೀಪ ಮಹಿಳಾ ವಿವಿಧೋದ್ದೇಶ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಗಜಾನನೋತ್ಸವದ ಅಂಗವಾಗಿ ಆಯೋಜಿಸಿದ್ದ ಮಹಿಳೆಯರ ವಿಶೇಷ ಸವಿರುಚಿ ಅಡುಗೆ ಸ್ಪರ್ಧೆ, ಲಲಿತಾ ಸಹಸ್ರನಾಮ ಪಠಣ ಹಾಗೂ ಭವ್ಯ ಉಡಿ ತುಂಬುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಂಕರ ಬದಿ ಮಾತನಾಡಿ, ಮಹಿಳೆಯರ ಕ್ರಿಯಾಶೀಲತೆಗೆ ವೇದಿಕೆ ಕಲ್ಪಿಸುತ್ತಿರುವ ಯುವಕ ಮಂಡಳಿ ಹಾಗೂ ದಾರೀದೀಪ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. ಅಡುಗೆ ಸ್ಪರ್ಧೆಯ ಮುಖ್ಯ ನಿರ್ಣಾಯಕಿ ಜ್ಯೋತಿ ದಾನಪ್ಪ ಗೌಡರ್ ಮಾತನಾಡಿ, ಅಡುಗೆ ಕೇವಲ ದೈನಂದಿನ ಕಾಯಕವಲ್ಲ; ಅದು ವಿಜ್ಞಾನ ಮತ್ತು ಕಲೆಯ ಸಮ್ಮಿಲನ. ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿರುವ ಆರೋಗ್ಯಕರ ಅಂಶಗಳನ್ನು ಮಹಿಳೆಯರು ಉದ್ಯಮಶೀಲತೆಯಾಗಿ ರೂಪಿಸಿಕೊಳ್ಳಬಹುದು ಎಂದರು. ಮತ್ತೊಬ್ಬ ನಿರ್ಣಾಯಕಿ ರೇಣುಕಾ ಅಮಾತ್ಯ ಮಾತನಾಡಿ, ಸ್ಪರ್ಧೆಯಲ್ಲಿ ಮಹಿಳೆಯರು ತೋರಿದ ಸೃಜನಶೀಲತೆ ಹಾಗೂ ಒಗ್ಗಟ್ಟು ಮೆಚ್ಚುವಂತಿತ್ತು. ವಿಜೇತರ ಆಯ್ಕೆ ನಿರ್ಣಾಯಕರಿಗೂ ಸವಾಲಾಗಿತ್ತು ಎಂದರು.

ಲಲಿತಾ ಸಹಸ್ರನಾಮ ಪಠಣ ಹಾಗೂ ಸಾಂಪ್ರದಾಯಿಕ ಉಡಿ ತುಂಬುವ ಕಾರ್ಯಕ್ರಮವು ಭಕ್ತಿಭಾವದಿಂದ ನಡೆಯಿತು. ದಾರೀದೀಪ ಸಂಸ್ಥೆಯ ನಿರ್ದೇಶಕಿ ದೀಪ ಉಘಲಾತ್ ಮಾತನಾಡಿ, ಧಾರ್ಮಿಕ ಆಚರಣೆಗಳು ಯುವ ಪೀಳಿಗೆಯಲ್ಲಿ ಸಂಸ್ಕಾರ ಹಾಗೂ ಸಾಮಾಜಿಕ ಒಗ್ಗಟ್ಟನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದರು. ಕಾರ್ಯಕ್ರಮದ ಯಶಸ್ಸಿಗೆ ಗಜಾನನ ಯುವಕ ಮಂಡಳಿಯ ಹಿರಿಯರಾದ ಚಂದ್ರಶೇಖರ ಬಾಗಲಕೋಟಿ, ಎಸ್‌.ಟಿ. ಪಾಟೀಲ್, ಸಿ.ಎಸ್‌. ನಾಗಾವಿ, ಕಂಟೆಪ್ಪಗೌಡ ಗಿರಡ್ಡಿ, ಕಿರಣ ಹಬೀಬ್, ಚೇತನ ಮಾನಳ್ಳಿ ಹಾಗೂ ಮುರಳಿಧರ್ ಕಾಟವ ಸೇರಿದಂತೆ ಹಲವರು ಮಾರ್ಗದರ್ಶನ ನೀಡಿದರು. ಸೂರ್ಯನಗರದ ನೂರಾರು ಮಹಿಳೆಯರು ಹಾಗೂ ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ