ಶಿವಶರಣರ ವಿಚಾರಗಳು ಬದುಕಿಗೆ ದಾರಿದೀಪ: ಗುರುಬಸವರಾಜ
ಬಳ್ಳಾರಿ 19: ಅಲ್ಲೀಪುರದ ಮಹಾದೇವತಾತ, ಚೆಳ್ಳಗುರ್ಕಿಯ ಎರ್ರಿತಾತ, ಸಕ್ಕರೆ ಕರಡೀಶ ಮೊದಲಾದವರು ಬಳ್ಳಾರಿ ಭಾಗದ ಪ್ರಸಿದ್ಧ ಅನುಭಾವಿಗಳಾಗಿದ್ದು, ತಮ್ಮ ಅನುಭಾವದ ಮೂಲಕ ಈ ಭಾಗದ ಜನರಲ್ಲಿ ಭಕ್ತಿಯನ್ನು ಬೆಳೆಸಿದ ಮಹಾಮಹಿಮರಾಗಿದ್ದಾರೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ಅಲ್ಲಂ ಗುರುಬಸವರಾಜ ಅಭಿಪ್ರಾಯಪಟ್ಟರು. ನಗರದ ಸರಳಾದೇವಿ ಪದವಿ ಕಾಲೇಜಿನಲ್ಲಿ ನಡೆದ ‘ಶರಣ ಸಂಗಮ’ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ‘ಶರಣ ಸಂಗಮ’ ರಂಗಕೃತಿಯು ಮಹಾದೇವತಾತ, ಎರ್ರಿತಾತ, ಸಕ್ಕರೆ ಕರಿಡೀಶ ಇವರುಗಳ ಪವಾಡಗಳನ್ನು ತಿಳಿಸುತ್ತದೆ. ಇವರು ಹೇಳಿದ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ. ಈ ಪವಿತ್ರ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದು ನನ್ನ ಪುಣ್ಯ ಎಂದು ತಿಳಿಸಿದರು.
ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ಲಕ್ಷ್ಮಿಕಿರಣ ಅವರು ‘ಶರಣ ಸಂಗಮ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಾ ಶಿವಶರಣರ ವಿಚಾರಗಳು ನಮ್ಮ ಮಾನವ ಜನಾಂಗಕ್ಕೆ ದಾರಿದೀಪವಿದ್ದಂತೆ. ನಮ್ಮ ಸಮಾಜವನ್ನು ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಕಾರಣೀಭೂತರಾಗಿದ್ದಾರೆ. ಹಲವು ಮಹತ್ವದ ಅಂಶಗಳನ್ನೊಳಗೊಂಡ ಈ ಕೃತಿ ಅಮೂಲ್ಯವಾದುದು ಎಂದು ತಿಳಿಸಿದರು.ಕೃತಿಯ ಲೇಖಕ ಅಭಿನಯ ಕಲಾಕೇಂದ್ರದ ಮುಖ್ಯಸ್ಥರಾದ ಜಗದೀಶ್ ‘ಸಿರಿಬಂದ ಕಾಲಕ್ಕೆ ಕರೆದು ದಾನವ ಮಾಡು’ ಎನ್ನುವ ಸರ್ವಜ್ಞನ ಮಾತಿನಂತೆ ನಾನು ರಚಿಸಿದ ಈ ಕೃತಿಯನ್ನು ಈ ಕಾಲೇಜಿನ ಪ್ರಾಂಶುಪಾಲರಾದ ಅಪ್ಪಾನಳ್ಳಿ ಹೇಮರೆಡ್ಡಿಯವರು ಪ್ರಕಟಪಡಿಸುತ್ತಿರುವುದು ಅಭಿನಂದನೀಯ ಕಾರ್ಯವಾಗಿದೆ. ನಾಟಕವು ಅಕ್ಷರಸ್ಥ ಮತ್ತು ಅನಕ್ಷಸ್ಥರಿಗೆ ಏಕಕಾಲಕ್ಕೆ ತಲುಪುವ ಮಾಧ್ಯಮವಾಗಿದ್ದು, ಈ ಕೃತಿಯು ಓದುಗರಿಗೆ ವಿಶೇಷ ಅನುಭವವನ್ನು ನೀಡುತ್ತದೆ ಎಂದು ತಿಳಿಸಿದರು.ಕೃತಿಯ ಪ್ರಕಾಶಕರು ಹಾಗೂ ಕಾಲೇಜಿನ ಪ್ರಾಂಶುಪಾಲ ಅಪ್ಪಾನಳ್ಳಿ ಹೇಮರೆಡ್ಡಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಶರಣರು ಜಾತಿ, ವರ್ಗ, ವರ್ಣ, ಲಿಂಗ ರಹಿತ ಸಮಾಜದ ನಿರ್ಮಾಣಕ್ಕೆ ಕಾರಣರಾಗಿದ್ದು, ಸಮಾಜದ ಪ್ರಗತಿಗೆ ತಮ್ಮ ನಡೆ-ನುಡಿಗಳಿಂದಲೇ ಮಾರ್ಗದರ್ಶನ ಮಾಡಿದ್ದಾರೆ. ಮಹಾದೇವ ತಾತ, ಸಕ್ಕರೆ ಕರಡೀಶ, ಎರ್ರಿತಾತ ಮೊದಲಾದ ಮಹಾಮಹಿಮರು ತ್ರಿಕಾಲಜ್ಞಾನಿಗಳಾಗಿದ್ದಾರೆ ಎಂದು ತಿಳಿಸಿದರು.ಡಾ.ಇಸ್ಮಾಯಿಲ್ ಮಕಾಂದಾರ್, ಡಾ.ಬಿ.ಶ್ರೀನಿವಾಸಮೂರ್ತಿ, ಚೆನ್ನಬಸಯ್ಯ ಹೆಚ್.ಎಂ., ಎಸ್.ಗುರುಬಸಪ್ಪ, ಡಾ.ಜ್ಯೋತಿ ಪಾಟೀಲ್, ಡಾ.ಬಿ.ಶಾಂತಲಾ ಮೊದಲಾದವರು ಭಾಗವಹಿಸಿದ್ದರು. ಡಾ.ಬಿ.ಜಿ.ಕಲಾವತಿ ಸ್ವಾಗತಿಸಿದರು. ಶೋಭಾರಾಣಿ ವಂದಿಸಿದರು. ಡಾ.ತಿಪ್ಪೇರುದ್ರ ಸಂಡೂರು ನಿರೂಪಿಸಿದರು.