ಶಿಗ್ಗಾವ್

ಸದವಕಾಶವನ್ನು ಸದ್ಬಳಕೆ ಮಾಡಿಕೊಂಡರೆ ಬದುಕು ಸಾರ್ಥಕ: ಕೆಂಪಯ್ಯ

ಸದವಕಾಶವನ್ನು ಸದ್ಬಳಕೆ ಮಾಡಿಕೊಂಡರೆ ಬದುಕು ಸಾರ್ಥಕ: ಕೆಂಪಯ್ಯ

ಶಿಗ್ಗಾವಿ17 :  ನಾವು ಭೂಮಿಗೆ ಬರುವುದು ಬರಿ ಗೈಯಲ್ಲಿ, ಮರಳಿ ಮಣ್ಣಿಗೆ ಬರೀ ಗೈಯಲ್ಲೆ ಹೋಗುತ್ತೇವೆ. ನಮ್ಮ ಬದುಕು ಆದರ್ಶನೀಯ ಆಗಿದ್ದರೆ ಎಲ್ಲರೂ ನಮ್ಮನ್ನು ಸ್ಮರಿಸುತ್ತಾರೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಕೆಂಪಯ್ಯ ಹೇಳಿದರು.

ತಾಲೂಕಿನ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್‍ನ ಜಾನಪದ ರಂಗಮಂದಿರದಲ್ಲಿ 1995 ರಲ್ಲಿ ತಮ್ಮ ಅಧಿಕಾರ ಅವಧಿಯಲ್ಲಿ ನೇಮಕಗೊಂಡ ಪೊಲೀಸ್ ಸಿಬ್ಬಂದಿಗಳು ಹಮ್ಮಿಕೊಂಡಿದ್ದ ಸಾರ್ಥಕ ಸೇವೆಯ ರಜತ ಮಹೋತ್ಸವ ಸಂಭ್ರಮ ಸಮಾರಂಭದಲ್ಲಿ ಮಾತನಾಡಿದರು. 

ಜೀವನದಲ್ಲಿ ಒಳ್ಳೇಯ ಅವಕಾಶಗಳು ಹಾಗೂ ಅಧಿಕಾರ ದೊರೆಯುತ್ತದೆ. ಇವೆರಡನ್ನು ಸದ್ಬಳಕ್ಕೆ ಮಾಡಿಕೊಂಡರೆ ಬದುಕು ಸಾರ್ಥಕ ಆಗುತ್ತದೆ ಎಂಬ ಮಾತು ಸಾರ್ವಕಾಲಿಕ ಸತ್ಯ ಎಂದು ನುಡಿದರು.

ರಾಕ್ ಗಾರ್ಡನ್ ಅಪರೂಪದ ಕಲಾ ಲೋಕ. ಇಲ್ಲಿನ ಪ್ರತಿಯೊಂದು ಶಿಲ್ಪಗಳು ನೈಜತೆಯಿಂದ ಕೂಡಿವೆ.ಇಂಥ ಸುಂದರ ತಾಣ ನಿರ್ಮಿಸಿರುವ ದಾಸನೂರ ಸಮೂಹ ಸಂಸ್ಥೆಯ ಕೆಲಸ ಮಾದರಿ ಆಗಿದೆ ಎಂದು ಹೇಳಿದರು.

ಕೆಂಪಯ್ಯರ ಸಾಧನೆಗಳ ಪಟ್ಟಿ ಬಹಳ ದೊಡ್ಡದಿದೆ. ಅವರು ದೇಶ ಕಂಡ ಶ್ರೇಷ್ಠ ಐಪಿಎಸ್ ಅಧಿಕಾರಿ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಲಾಂಬಾರಾಮ ಹೇಳಿದರು.ಇದೊಂದು ಸುಂದರ ಪ್ರವಾಸಿ ತಾಣ. ಇದರ ಪರಿಚಯ ವಿಶ್ವಕ್ಕೆ ಆಗುವಂತೆ ಮಾಡುವ ಕೆಲಸ ಆಗಬೇಕು ಎಂದು ಅವರು ಸಲಹೆ ನೀಡಿದರು.

ಕೆಂಪಯ್ಯನವರು ಸೇವೆ ಸಲ್ಲಿಸಿದ ಕೆಲವು ಜಿಲ್ಲೆಗಳಲ್ಲಿ ನಾನು ಸೇವೆ ಸಲ್ಲಿಸಿರುವೆ. ಎಲ್ಲಡೆಯೂ ಅವರ ಛಾಪು ಇನ್ನು ಹಸಿರಾಗಿದೆ ಎಂದು ಹಾವೇರಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ನಿರೀಕ್ಷಕ ಮಲ್ಲಿಕಾರ್ಜುನ್ ಬಾಳದಂಡಿ ಹೇಳಿದರು.

ತಮಗೆ ಅನ್ನಕ್ಕೆ ಮಾರ್ಗ ಮಾಡಿಕೊಟ್ಟ ‘ಕೆಂಪಯ್ಯ’ ಅವರ ಕುರಿತು ಹಾವೇರಿ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಶಿಕ್ಷಕ ನಾಗರಾಜ ನಡುವಿನಮಠ ನಿರೂಪಿಸಿದರು. ನಿಂಗಪ್ಪ ಶೆರೆವಾಡ ಸ್ವಾಗತಿಸಿದರು. ಎ.ಎ.ಮಿರ್ಜಿ ವಂದಿಸಿದರು.

ಸುದ್ದಿ ಓದಿ