ಖ್ಯಾತ ನೇತ್ರ ತಜ್ಞ ಡಾ. ಪ್ರಭುಗೌಡರಿಗೆ ರಜತ ಸಾಧಕರು ಪ್ರಶಸ್ತಿ
ತಾಳಿಕೋಟಿ 17: ನಾಡಿನ ಖ್ಯಾತ ನೇತ್ರ ತಜ್ಞ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಪ್ರಭುಗೌಡ. ಬ. ಲಿಂಗದಳ್ಳಿ (ಚಬನೂರ) ಇವರಿಗೆ “ಕನ್ನಡ ಪ್ರಭ” ಮತ್ತು “ಏಷ್ಯಾ ನೆಟ್ ಸುವರ್ಣ ನ್ಯೂಸ್ ಸಂಸ್ಥೆ” ವತಿಯಿಂದ 2022-23 ನೇ ಸಾಲಿನ ವೈದ್ಯಕೀಯ ಕ್ಷೇತ್ರದಲ್ಲಿನ ವಿಶಿಷ್ಟ ಸಾಧನೆಗಾಗಿ “ರಜತ ಸಾಧಕರು” ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲು ಆಯ್ಕೆ ಮಾಡಲಾಗಿದೆ.
ವಿಜಯಪುರ ಹಾಗೂ ಕಲಬುರ್ಗಿ ನಗರಗಳಲ್ಲಿ “ಅನುಗ್ರಹ” ಎಂಬ ಹೆಸರಿನಲ್ಲಿ 2001ರಲ್ಲಿ ಕಣ್ಣಿನ ಚಿಕಿತ್ಸಾಲಯ ಪ್ರಾರಂಭಿಸಿ ಇಲ್ಲಿಯವರೆಗೆ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರ ಕಣ್ಣಿನ ತಪಾಸಣೆ ನಡೆಸಿ 1.5 ಲಕ್ಷಕ್ಕೂ ಹೆಚ್ಚು ಉಚಿತ ನೇತ್ರ ಚಿಕಿತ್ಸೆಯನ್ನು ಮಾಡಿ ಕನಿಷ್ಟ 30 ಸಾವಿರಕ್ಕೂ ಹೆಚ್ಚು ಜನರಿಗೆ ಉಚಿತ ನೇತ್ರ ಶಸ್ತ್ರ ಚಿಕಿತ್ಸೆಯನ್ನು ಮಾಡಿದ ಇವರು ಆರ್ಥಿಕ ತೊಂದರೆಯಿಂದ ಯಾರೂ ದೃಷ್ಟಿ ಹೀನರಾಗಬಾರದೆಂಬ ಕಾರಣಕ್ಕಾಗಿ “ಅನುಗ್ರಹ ವಿಜನ್ ಫೌಂಡೇಶನ್” ಸ್ಥಾಪಿಸಿ ಉಚಿತ ಸೇವೆಯನ್ನು ಮಾಡುತ್ತಿದ್ದಾರೆ.
ಅಂಧರ ಬಾಳಿನ ಆಶಾಕಿರಣದಂತಿರುವ ಹಾಗೂ ಹೃದಯ ಶ್ರೀಮಂತಿಕೆಯನ್ನು ಹೊಂದಿರುವ ಡಾಽಽ ಪ್ರಭುಗೌಡರು ತಮ್ಮನ್ನು ಸಮಾಜದ ಸೇವೆಗಾಗಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. “ನಮ್ಮ ನಡಿಗೆ ದೃಷ್ಟಿಯೆಡೆಗೆ” ಎಂಬ ಧ್ಯೆಯ ವಾಕ್ಯದಡಿ ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಗೂ ತಲುಪಿ ಆರೋಗ್ಯ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
ಈಗಾಗಲೇ ಅವರ ಈ ಸೇವೆಗಾಗಿ ನೂರಾರು ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ. ಇದೀಗ ಅವರ ಅನನ್ಯ ವೈದ್ಯಕೀಯ ಸೇವೆಯನ್ನು ಗುರುತಿಸಿದ “ಕನ್ನಡ ಪ್ರಭ” ಮತ್ತು “ಏಷ್ಯಾ ನೆಟ್ ಸುವರ್ಣ ನ್ಯೂಸ್ ಸಂಸ್ಥೆ”ಯ “ಕನ್ನಡ ಪ್ರಭ” ಬೆಳಗಾವಿ ಆವೃತ್ತಿ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಬೆಳ್ಳಿ ಹಬ್ಬದ ಅಂಗವಾಗಿ ನವಂಬರ 21, 2022 ರಂದು ಬೆಂಗಳೂರಿನ ಪಂಚತಾರಾ ಹೊಟೇಲ್ ಆದ “ಫೋರ್ ಸೀಸನ್ಸ್”ನಲ್ಲಿ ಜರುಗುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರಿಗೆ “ರಜತ ಸಾಧಕರು” ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುವುದು.