ಲೇಖನಗಳು

ಮಂತ್ರಾಲಯದ ಶ್ರೀಗುರು ರಾಘವೇಂದ್ರ ರಾಯರು

ಮಂತ್ರಾಲಯದ ಶ್ರೀಗುರು ರಾಘವೇಂದ್ರ ರಾಯರು

ಮಂಚಾಲೆಯು ಈಗ ಮಂತ್ರಾಲಯ ಎನ್ನುವ ಹೆಸರನ್ನು ಪಡೆದಿದೆ. ಮೂರುವರೆ ಶತಮಾನಗಳಾದ ನಂತರವೂ ಈ ಸ್ಥಳ ಪರಮಪವಿತ್ರ ಸ್ಥಳವಾಗಿ ಕಂಗೊಳಿಸುತ್ತಿದ್ದು, ಪ್ರತಿವರ್ಷವೂ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದೆ. ಶ್ರೀ ರಾಘವೇಂದ್ರ ಸ್ವಾಮಿಗಳು ಅವರ ಇಷ್ಟಾರ್ಥಗಳನ್ನು ಈಡೇರಿಸಿಕೊಡುತ್ತಾರೆ ಮತ್ತು ಸಂಕಷ್ಟಗಳನ್ನು ದೂರ ಮಾಡುತ್ತಾರೆ ಎನ್ನುವದೇ ಭಕ್ತರ ನಂಬಿಕೆ. 

ಮಂತ್ರಾಲಯದ ಪ್ರಮುಖ ಸಂತರೆಂದರೆ ಶ್ರೀ ರಾಘವೇಂದ್ರ ಸ್ವಾಮಿಗಳು. ಮಧ್ವಾಚಾರ್ಯರಿಂದ ಕ್ರಿ.ಶ.13ನೆಯ ಶತಮಾನದಲ್ಲಿ ಸ್ಥಾಪಿಸಲಾದ ದ್ವೈತ ತತ್ವ ಸಿದ್ಧಾಂತವನ್ನು ಮುನ್ನಡೆಸುವಲ್ಲಿ ರಾಘವೇಂದ್ರ ಸ್ವಾಮಿಗಳ ಪಾತ್ರ ಪ್ರಮುಖವಾದುದು. ಶ್ರೀ ರಾಘವೇಂದ್ರ ಸ್ವಾಮಿಗಳು ಮಧ್ವಾಚಾರ್ಯರ ಪರಂಪರೆಯನ್ನು ಮುಂದುವರಿಸಿಕೊಂಡ ಹೋದ ಸಂತರು. ಒಂದು ಶ್ರೇಷ್ಠ ಚೈತನ್ಯವು ಯಾವ ರೀತಿ ಒಬ್ಬರ ಮೇಲೆ ಕೃಪೆ ಮಾಡಿ ಅವರಿಂದ ಉತ್ತಮ ಕೆಲಸವನ್ನು ಮಾಡಿಸುತ್ತದೆ ಎನ್ನುವದಕ್ಕೆ ಶ್ರೀ ರಾಘವೇಂದ್ರ ಸ್ವಾಮಿಗಳ ಜೀವನವೇ ಉತ್ತಮ ಉದಾಹರಣೆ. 

ವೈದಿಕ ಧರ್ಮದ ಉದ್ಧಾರಕ್ಕಾಗಿ ಈ ಪ್ರಪಂಚದಲ್ಲಿ ಆಗಾಗ್ಗೆ ಜನ್ಮತಾಳಬೇಕೆಂಬ ದಿವ್ಯ ಆದೇಶವನ್ನು ಪಡೆದ ಶಂಕುಕರ್ಣ ದೇವತೆಯ ಅವತಾರವೇ ಶ್ರೀ ರಾಘವೇಂದ್ರ ಸ್ವಾಮಿಗಳು ಎಂದು ನಂಬಲಾಗಿದೆ. ಮೊದಲನೆಯ ಅವತಾರವು ಹಿರಣ್ಯಕಶಿಪುವಿನ ಸಂಹಾರಕ್ಕಾಗಿ ಮಾಡಿದ ಪ್ರಹ್ಲಾದಾವತಾರ. ವಿಜಯನಗರದ ರಾಜಗುರು ವ್ಯಾಸರಾಜರದೇ ಎರಡನೆಯ ಅವತಾರ. ವ್ಯಾಸರಾಜರು ಮಾಧ್ವತತ್ವಗಳನ್ನು ಹರಡುವದರ ಜೊತೆಗೆ, ಪುರಂದರದಾಸ ಮತ್ತು ಕನಕದಾಸರೊಡನೆ ಸೇರಿ ಭಕ್ತಿ ಪಂಥವನ್ನು ಹುಟ್ಟು ಹಾಕಿದರು.  ಮೂರನೆಯ ಅವತಾರವೇ ಶ್ರೀ ರಾಘವೇಂದ್ರರದ್ದು. ಇದು ನಾನೂರು ವರ್ಷಗಳ ಹಿಂದೆ ಆಯಿತೆಂದು ಹೇಳಲಾಗಿದೆ. 

ಕ್ರಿ.ಶ.1565ರಲ್ಲಿ ವಿಜಯನಗರದಲ್ಲಿ ಮಾಧ್ವ ಸಂಪ್ರದಾಯಕ್ಕೆ ಸೇರಿದ ಶ್ರೀ ಮಠದಲ್ಲಿ ಸುಧೀಂದ್ರತೀರ್ಥರು ಸ್ವಾಮಿಗಳಾಗಿದ್ದರು. 1565ರಲ್ಲಿ ತಾಳಿಕೋಟೆಯ ಯುದ್ದದ ನಂತರ ವಿಜಯನಗರ ವರ್ಚಸ್ಸು ನಾಶವಾಗಿ, ವಿಜಯನಗರ ಆಸ್ಥಾನದ ತಿಮ್ಮಣ್ಣ ಭಟ್ಟರು ಶ್ರೀಮಠದಲ್ಲಿ ಆಶ್ರಯಪಡೆದರು. ಹಲವು ವರ್ಷಗಳ ನಂತರ ಶ್ರೀ ವಿಜಯೇಂದ್ರ ತೀರ್ಥರು ಕುಂಭಕೋಣಕ್ಕೆ ಮಠವನ್ನು ಬದಲಾಯಿಸಿದರು. ತಿಮ್ಮಣ್ಣ ಭಟ್ಟರು ಮತ್ತು ಪತ್ನಿ ಗೋಪಿಕಾಂಬಾ ಅವರಿಗೆ ವೆಂಕಟಾಂಬಾ ಎಂಬ ಪುತ್ರಿ ಹಾಗೂ ಗುರುರಾಜ ಎಂಬ ಮಗ ಜನಿಸಿದರು. ನಂತರ ಕ್ರಿ.ಶ.1595ರಲ್ಲಿ ವೆಂಕಟನಾಥ ಎಂಬ ಮಗನು ಜನಿಸಿದನು. ವೆಂಕಟನಾಥನಿಗೆ ಮಧ್ವಾಚಾರ್ಯರ ಬೋಧನೆಯನ್ನು ಒಳಗೊಂಡ ದ್ವೈತವನ್ನು ಅಭ್ಯಾಸ ಮಾಡಬೇಕೆಂಬ ಆಕಾಂಕ್ಷೆ ಉಂಟಾಗಿ, ಕುಂಬಕೋಣದ ಶ್ರೀ ಮಠದ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರಲ್ಲಿ ಶಿಷ್ಯರಾಗಿ ಸೇರಿದರು. ನಂತರ ಒಂದು ವರ್ಷದ ನಂತರ ವೆಂಕಟನಾಥನು ಭುವನಗಿರಿಗೆ ಹಿಂದುರಿಗಿ ಪತ್ನಿ ಸರಸ್ವತಿಯೊಡನೆ ಗೃಹಸ್ಥ ಜೀವನ ಅರಂಭಿಸಿದರು. ತೀರ ಬಡತನದ ಪರಿಸ್ಥಿತಿಯಲ್ಲಿ ಲಕ್ಷ್ಮೀನಾರಾಯಣ ಎಂಬ ಮಗನಿಗೆ ಜನ್ಮ ನೀಡಿದರು. 

ನಂತರ ವೆಂಕಟನಾಥನು ಶ್ರೀ ಮಠಕ್ಕೆ ಹಿಂದಿರುಗಿ ಧರ್ಮಗ್ರಂಥಗಳ ಅಧ್ಯಯನದಲ್ಲಿ ತೊಡಗಿದರು. ಶ್ರೀ ಸುಧೀಂದ್ರ ತೀರ್ಥರು ತಮ್ಮ ಧಾರ್ಮಿಕ ಪ್ರವಾಸದಲ್ಲಿ ವೆಂಕಟನಾಥರನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು. ಶ್ರೀಗಳು ವೆಂಕಟನಾಥರಿಗೆ ವೆಂಕಟಾಚಾರ್ಯ ಮತ್ತು ಮಹಾಭಾಷ್ಯಾಚಾರ್ಯ ಎಂಬ ಪ್ರಶಸ್ತಿಗಳನ್ನು ನೀಡಿದರು. ಸುಧೀಂದ್ರ ತೀರ್ಥರು ವಯಸ್ಸಾದ ನಂತರ ಉತ್ತರಾಧಿಕಾರಿಯಾಗಲು ವೆಂಕಟನಾಥರನ್ನು ಕೇಳಿದರು. ಅವರು ವಿನಯದಿಂದ ನಿರಾಕರಿಸಿದ್ದರಿಂದ ಯಾದವೇಂದ್ರ ತೀರ್ಥರಿಗೆ ಸನ್ಯಾಸವನ್ನು ನೀಡಿದರು. ಯಾದವೇಂದ್ರ ತೀರ್ಥರು ಯಾತ್ರಾರ್ಥಿಯಾಗಿ ದೂರದಲ್ಲಿದ್ದಕ್ಕಾಗಿ ಸುಧೀಂದ್ರ ತೀರ್ಥರಿಗೆ ಕನಸಿನಲ್ಲಿ ಮೂಲರಾಮನು ಕಾಣಿಸಿಕೊಂಡು ವೆಂಕಟನಾಥನು ಶ್ರೀ ಮಠದ ಗುರುವಾಗಬೇಕೆಂದು, ಸನ್ಯಾಸ ನಂತರ ಅವರ ಹೆಸರು ಶ್ರೀ ರಾಘವೇಂದ್ರ ಎಂಬುದಾಗಿ ಇರಬೇಕೆಂದು ತಿಳಿಸಿದರು. ಹಲವು ಘಟನೆಗಳನ್ನು ಎದುರಿಸಿಯೂ ದೇವರ ಅಪೇಕ್ಷೆಯಂತೆ ತಿಮ್ಮಣ್ಣ ಭಟ್ಟರ ಕಿರಿಯ ಮಗ ವೆಂಕಟನಾಥರು ತಂಜಾವೂರಿನಲ್ಲಿ 1624ರ ಫಾಲ್ಗುಣ ಶುದ್ಧ ದ್ವಿತೀಯ ದಿನದಂದು ಶ್ರೀ ರಾಘವೇಂದ್ರ ತೀರ್ಥರಾಗಿ ಸುಧೀಂದ್ರ ತೀರ್ಥರಿಂದ ಶ್ರೀಮಠದ ಆಧ್ಯಾತ್ಮಿಕ ಗುರುವಾಗಿ ಪವಿತ್ರ ಸನ್ಯಾಸ ದೀಕ್ಷೆಯನ್ನು ಪಡೆದರು. 

ಶ್ರೀ ರಾಘವೇಂದ್ರ ತೀರ್ಥರು ದ್ವೈತ ಸಿದ್ಧಾಂತದ ತಲಸ್ಪರ್ಶಿ ಅಧ್ಯಯವನ್ನು ಮುಂದುವರೆಸಿದರು. ಒಂದು ಸಂದರ್ಭದಲ್ಲಿ ಮದುವೆಯ ದಿನವೇ ಶಿಷ್ಯನೊಬ್ಬನು ಮರಣ ಹೊಂದಿದನು. ಶ್ರೀ ರಾಘವೇಂದ್ರರು ಕಮಂಡಲದಿಂದ ಅವನ ಮುಖಕ್ಕೆ ನೀರನ್ನು ಚಿಮುಕಿಸಿ ಅವನಿಗೆ ಜೀವದಾನ ಮಾಡಿದರು. ಕ್ರಿ.ಶ.1642ರಲ್ಲಿ ಚೋಳವಂಶದ ವಿಜಯರಾಘವ ನಾಯಕರಿಗೆ ಕಷ್ಟಗಳು ಒದಗಿ, ಕ್ಷಾಮ ಮತ್ತು ಬರಗಳಿಂದ ರಾಜ್ಯ ಪತನದ ಹಾದಿಯಲ್ಲಿತ್ತು.  ಶ್ರೀ ರಾಘವೇಂದ್ರರು ಅವರ ರಾಜಧಾನಿ ತಂಜಾವೂರಿಗೆ ಹೋಗಿ ಪೂಜೆ ಮತ್ತು ಯಜ್ಞಗಳನ್ನು ನೆರವೇರಿಸಿದರು. ರಾಜ್ಯವು ಸಂಕಷ್ಟಗಳಿಂದ ಮುಕ್ತವಾಯಿತು. ಶ್ರೀ ರಾಘವೇಂದ್ರರು ರಾಮೇಶ್ವರಂ, ತಿರುವನಂತರಪುರಂ, ಮಧುರೈ, ಶ್ರೀರಂಗಂ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ಉಡುಪಿಯ ಕೃಷ್ಣನ ವಿಗ್ರಹದಿಂದ ಪುಳಕಿತರಾಗಿ, ಅಲ್ಲಿ ಹೆಚ್ಚಿನ ಕಾಲ ವಾಸವಾಗಿ ಚಂದ್ರಿಕ ಪ್ರಕಾಶಿಕ ಮತ್ತು ಸುಧಾ-ಪರಿಮಳ ಮುಂತಾದ ಗ್ರಂಥಗಳನ್ನು ರಚಿಸಿದರು. ಶ್ರೀ ರಾಘವೇಂದ್ರರು ಮೈಸೂರು, ಶ್ರೀರಂಗಪಟ್ಟಣ, ಚಿತ್ರದುರ್ಗಗಳನ್ನು ಸಂದರ್ಶಿಸಿ ಕೀರೀಟಗಿರಿಗೆ ಆಗಮಿಸಿದರು. ಆ ಗ್ರಾಮದ ಮುಖಂಡ ವೆಂಕಟದೇಸಾಯಿಯವರ ಪ್ರಾರ್ಥನೆಯಂತೆ ಈ ರಾಘವೇಂದ್ರರು ಆತಿಥ್ಯವನ್ನು ಸ್ವೀಕರಿಸಿದರು. ಈ ಸಮಯದಲ್ಲಿ ದೇಸಾಯಿಯವರ ಪುಟ್ಟ ಬಾಲಕ ಮಾವಿನ ಹಣ್ಣಿನ ರಸದ ದೊಡ್ಡ ಜಾತ್ರೆಯಲ್ಲಿ ಬಿದ್ದು ಮೃತನಾದನು. ಶ್ರೀ ರಾಘವೇಂದ್ರರು ಬಾಲಕನ ಶರೀರದ ಮೇಲೆ ಪವಿತ್ರ ನೀರನ್ನು ಚಿಮುಕಿಸಿದರು. ಕೂಡಲೇ ಬಾಲಕ ಮೇಲೆದ್ದು ಏನೂ ಆಗಿಲ್ಲವೆಂಬಂತೆ ಓಡಾಡಲು ಆರಂಬಿಸಿದನು. ಇದರಿಂದ ಸಂತೋಷಗೊಂಡ ದೇಸಾಯಿಯವರು ಕೀರೀಟಗಿರಿ ಗ್ರಾಮವನ್ನು ಶ್ರೀ ರಾಘವೇಂದ್ರ ಮಠಕ್ಕೆ ದಾನವಾಗಿ ನೀಡಿದರು. ಹುಬ್ಬಳ್ಳಿ, ಸವಣೂರು, ಪಂಡರಪುರ ಮತ್ತು ಕೊಲ್ಲಾಪುರದ ಮಾರ್ಗವಾಗಿ ಶ್ರೀ ರಾಘವೇಂದ್ರರು ನಾಸಿಕದವರೆಗೆ ಪ್ರಯಾಣ ಬೆಳೆಸಿದರು. ದಾರಿಯುದ್ದಕ್ಕೂ ಪವಾಡಗಳೆ ನಡೆಯುತ್ತಿದ್ದವು. 

ಶ್ರೀ ರಾಘವೇಂದ್ರರು ಕುಂಭಕೋಣದಿಂದ ಆದೋನಿಯ ಕಡೆಗೆ ಹೊರಟರು. ಅನಾಥ ಬಾಲಕನಾಗಿದ್ದ ವೆಂಕಣ್ಣನು ಶ್ರೀ ರಾಘವೇಂದ್ರ ಅನುಗ್ರಹದಿಂದ ಆದೋನಿಯ ನವಾಬರಲ್ಲಿ ದಿವಾನರಾಗದಿದ್ದರು. ನವಾಬನಾದ ಸೀರಿ ಮಸೂದ್‌ಖಾನ ಶ್ರೀ ರಾಘವೇಂದ್ರ ವ್ಯಕ್ತಿತ್ವದಿಂದ ಪ್ರಭಾವಿತರಾಗಿ ತುಂಗಭದ್ರಾ ನದಿಯ ದಡದಲ್ಲಿರುವ ಮಂಚಾಲೆ ಎಂಬ ಗ್ರಾಮವನ್ನು ದಾನವಾಗಿ ನೀಡಿದರು. ಈ ಗ್ರಾಮದಲ್ಲಿ ಕೃತಯುಗದಲ್ಲಿ ಪ್ರಹ್ಲಾದನು ಹಾಗೂ ದ್ವಾಪರಯುಗದಲ್ಲಿ ಪಾಂಡವರು ಯಜ್ಞಯಾಗಾದಿಗಳನ್ನು ಮಾಡಿದ್ದರು. ಅಲ್ಲದೇ ಇಲ್ಲಿ ಮಂಚಾಲಮ್ಮನ ದೇವಾಲಯವು ಇತ್ತು. ತಮ್ಮ ಹಿಂದಿನ ಅವತಾರದಲ್ಲಿ ಶ್ರೀ ರಾಘವೇಂದ್ರರು ಪ್ರಹ್ಲಾದರಾಗಿ, ಮಂಚಾಲಮ್ಮನನ್ನು ದುರ್ಗಾ ಎಂದು ಪೂಜಿಸಿದ್ದರು. ಶ್ರೀ ರಾಘವೇಂದ್ರರಿಗೆ ಭೌತಿಕ ಶರೀರವನ್ನು ತ್ಯಜಿಸುವ ಕಾಲ ಬಂದಿತೆಂದು ಭಾಸವಾಗಿದೆ. ತಮ್ಮ ಬೃಂದಾವನಕ್ಕೆ ಮಂಚಾಲೆಯೇ ಸರಿಯಾದ ಸ್ಥಳವೆಂದು ನಿರ್ಧರಿಸಿದರು. ಈ ಬೃಂದಾವನ ನಿರ್ಮಾಣಕ್ಕೆ ಬೇಕಾದ ಶಿಲೆಯನ್ನು ದಿವಾನ ವೆಂಕಣ್ಣರು ಮಧ್ವರ ಎಂಬ ಗ್ರಾಮದಿಂದ ತರಿಸಿ ನಿರ್ಮಿಸಿದರು.  

ಶ್ರೀ ರಾಘವೇಂದ್ರರ ಜೀವನದ ಕೊನೆಯ ಘಳಿಗೆಯ ಕಾರ್ಯವು 1761ರ ಶ್ರಾವಣ ಕೃಷ್ಣ ದ್ವಿತೀಯ, ಗುರುವಾರ ನಡೆಯಿತು. ಶ್ರೀ ರಾಘವೇಂದ್ರರು ಮೂಲರಾಮನಿಗೆ ಪೂಜೆಯನ್ನು ಮಾಡಿ ತಮ್ಮ ಸುತ್ತಲಿದ್ದ ಭಕ್ತರನ್ನು ಉದ್ದೇಶಿಸಿ ಕೊನೆಯ ಪ್ರವಚನ ನೀಡಿದರು. ಅವರು ಶಾಂತಿಯಿಂದ ಬೃಂದಾವನವನ್ನು ಪ್ರವೇಶಿಸಿ, ತುಳಸಿ ಮಣಿಯ ಮಾಲೆಯನ್ನು ಬಲಗೈಯಲ್ಲಿ ಹಿಡಿದುಕೊಂಡು ಮಧ್ಯದಲ್ಲಿ ಕುಳಿತರು. ಸುತ್ತ ನೆರೆದಿದ್ದ ಭಕ್ತರು ಕಂಬನಿಯನ್ನು ಸುರಿಸುತ್ತಿದ್ದಂತೆ, ತುಳಸಿಮಣಿಯ ಮಾಲೆಯು ಅವರ ಕೈಯಿಂದ ಕೆಳಗೆ ಬಿದ್ದಿತು. ತಮ್ಮ ಬೃಂದಾವನದ ಸಮಾಧಿಯನ್ನು ಮುಚ್ಚಿಬಿಡಬೇಕೆಂದು ಈ ರೀತಿ ಸೂಚನೆ ನೀಡಿದರು. 

ಮಂತ್ರಾಯದ ಶ್ರೀರಾಘವೇಂದ್ರ ಸ್ವಾಮಿಗಳವರ 352ನೆಯ ಆರಾಧನಾ ಮಹೋತ್ಸವವು ಅಗಸ್ಟ 29 ರಿಂದ ಸೆಪ್ಟೆಂಬರ 4ರವರೆಗೆ ಸಪ್ತರಾತ್ರೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಅಗಸ್ಟ್‌ 31ರಂದು ಶ್ರೀರಾಘವೇಂದ್ರ ಸ್ವಾಮಿಗಳವರ ರಜತ ಸಿಂಹ ವಾಹನೋತ್ಸವ, ಸೆಪ್ಟೆಂಬರ 1ರಂದು ಮಧ್ಯಾರಾದನೆ ಅಂಗವಾಗಿ ಬೆಳಿಗ್ಗೆ ತಿರುಪತಿ ತಿರುಮಲ ದೇವಸ್ಥಾನದಿಂದ ಬರುವ ಶ್ರೀನಿವಾಸದೇವರ ಶೇಷವಸ್ತ್ರಗಳನ್ನು ಶ್ರೀ ರಾಯರ ಮೂಲ ಬೃಂದಾವನಕ್ಕೆ ಸಮರೆ​‍್ಣ ಹಾಗೂ ಮಹಾ ಪಂಚಾಮೃತಾಭಿಷೇಕ ಹಾಗೂ ಗಜ ರಜತ ಸ್ವರ್ಣ ರಥೋತ್ಸವ ನಡೆಯಲಿವೆ. ಸೆಪ್ಟೆಂಬರ 2ರಂದು ಉತ್ತರಾಧನೆ ಅಂಗವಾಗಿ ರಾಯರ ಉತ್ಸವ ಮೂರ್ತಿಯೊಂದಿಗೆ ಮಹಾರಥೋತ್ಸವ ನಡೆಯಲಿದೆ. 

ಶ್ರೇಷ್ಠ ಸಂತ ಶ್ರೀ ರಾಘವೇಂದ್ರ ಸ್ವಾಮಿಗಳ ಭೌತಿಕ ಶರೀರ ಈಗ ಇಲ್ಲ. ಆದರೆ ಭಕ್ತರಿಗೆ ಅವರ ಚೈತನ್ಯವು ಕ್ರಿಯಾಶೀಲವಾಗಿ ಮಂಚಾಲೆಯ ಬೃಂದಾವನದಲ್ಲಿ ಇಂದಿಗೂ ಜೀವಂತವಾಗಿದೆ. ಮಂತ್ರಾಲಯವು ಆಂಧ್ರ​‍್ರದೇಶದಲ್ಲಿ ತುಂಗಭದ್ರಾ ನದಿಯ ದಡದಲ್ಲಿ, ರಾಯಚೂರ ನಗರದಿಂದ 45 ಕಿ.ಮೀ. ದೂರದಲ್ಲಿದೆ. ಮಂತ್ರಾಲಯಕ್ಕೆ ವ್ಯವಸ್ಥಿತ ರೈಲು ಸಂಪರ್ಕವಿದೆ. 

- ಸುರೇಶ ಗುದಗನವರ 

         ಧಾರವಾಡ      

     ಮೊ: 9449294694 


- * * * - 


ಸುದ್ದಿ ಓದಿ