ವಿವಿಧ ಕಾಮಗಾರಿಗಳಿಗೆ ಸಚಿವರಾದ ಬಿ.ಶ್ರೀರಾಮುಲು ಭೂಮಿ ಪೂಜೆ
ಬಳ್ಳಾರಿ,ಡಿ.8 : ಕೃಷಿ ಮಾರಾಟ ಇಲಾಖೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಹೊನ್ನಳ್ಳಿ ತಾಂಡದಲ್ಲಿರುವ ಹಮಾಲರ ವಸತಿ ಬಡಾವಣೆಯಲ್ಲಿ ಸಮಿತಿಯಿಂದ 275 ಹಮಾಲರಿಗೆ ನಿವೇಶನದ ಹಕ್ಕು ಪತ್ರ ವಿತರಣೆ ಹಾಗೂ 2022-23ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಮಂಜೂರಾಗಿರುವ ವಿವಿಧ ಕಾಮಗಾರಿಗಳ ಭೂಮಿ ಪೂಜೆ ಸಮಾರಂಭವನ್ನು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಬುಧವಾರ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು 2003-2004ರಲ್ಲಿ ಸುಮಾರು 21.30ಎಕರೆ ಪ್ರದೇಶ ಗುರುತಿಸಿ 334 ಹಮಾಲರಿಗೆ ಸೈಟ್ ಹಂಚಿಕೆ ಮಾಡಿ 275 ಹಮಾಲರಿಗೆ ನಿವೇಶನದ ಹಕ್ಕು ಪತ್ರ ಕೊಡುವ ವ್ಯವಸ್ಥೆ ಮಾಡಲಾಗಿದೆ. ಇನ್ನು ಎರಡು ತಿಂಗಳೊಳಗೆ ಉಳಿದ 160 ಜನರಿಗೆ ನಿವೇಶನ ಕೊಡಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಲೈಸನ್ಸ್ ಇಲ್ಲದಿರುವ ಹಮಾಲರಿಗೆ 15 ದಿನದೊಳಗಡೆ ಸಭೆ ಕರೆದು ಬಿಲ್ ಕೊಡುವ ವ್ಯವಸ್ಥೆ ಮಾಡುವಂತೆ ಎಪಿಎಂಸಿ ಅಧ್ಯಕ್ಷರಿಗೆ ಸೂಚಿಸಿದರು.
*ಎಪಿಎಂಸಿ ಮಾರುಕಟ್ಟೆಗೆ 5.5 ಕೋಟಿ ಅಭಿವೃದ್ಧಿ ಕಾಮಗಾರಿ: ಎಪಿಎಂಸಿ ಮಾರುಕಟ್ಟೆಯಲ್ಲಿ ಸುಮಾರು 5.50 ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, 1.10 ಕೋಟಿ ರೂಪಾಯಿ ವೆಚ್ಚದಲ್ಲಿ ಎಪಿಎಂಸಿ ಮಾರುಕಟ್ಟೆಯಲ್ಲಿ ಅಂಡರ್ ಗ್ರೌಂಡ್ ಕೇಬಲ್ ದುರಸ್ಥಿ,
1.15 ಕೋಟಿ ರೂ. ವೆಚ್ಚದಲ್ಲಿ ರಸ್ತೆ ದುರಸ್ತಿ ಮತ್ತು ಒಳಚರಂಡಿ ಕಾಮಗಾರಿ, 90ಲಕ್ಷ ರೂ. ವೆಚ್ಚದಲ್ಲಿ ಕುರುಗೋಡು, ಮೋಕ ಉಪ ಮಾರುಕಟ್ಟೆಯಲ್ಲಿ ಕಾಂಪೌಂಡ್ ವಾಲ್ ಮತ್ತು ಗೇಟ್ ವ್ಯವಸ್ಥೆ, ಮುಖ್ಯ ದ್ವಾರ ಮತ್ತು ತರಕಾರಿ ಮಾರುಕಟ್ಟೆಗೆ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಅದೇ ರೀತಿಯಾಗಿ 76ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ, 45ಲಕ್ಷ ರೂಪಾಯಿ ಭಾನುವಾರ ಸಂತೆ ಅಭಿವೃದ್ಧಿ, 50ಲಕ್ಷ ಮುಖ್ಯ ದ್ವಾರ ಅಭಿವೃದ್ಧಿ, 26ಲಕ್ಷ ಡಾಂಬರೀಕರಣಕ್ಕೆ, 30ಲಕ್ಷ ರೂಪಾಯಿ ಕುಡಿಯುವ ನೀರು ವ್ಯವಸ್ಥೆಗೆ, ತರಕಾರಿ ಮಾರುಕಟ್ಟೆಯಲ್ಲಿ ಹೈ ಮಾಸ್ಕ್ ಬೀದಿ ದೀಪಕ್ಕೆ 10 ರೂಪಾಯಿ ಅನುದಾನ ಸೇರಿ ಒಟ್ಟು ಐದು ಕೋಟಿ ಐವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಎಪಿಎಂಸಿ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಗೆ ಒದಗಿಸಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ 100 ಕೋಟಿ ವೆಚ್ಚದಲ್ಲಿ ಜೀನ್ಸ್ ಫ್ಯಾಕ್ಟರಿ ನಿರ್ಮಾಣ ಮಾಡುವುದಕ್ಕೆ ಸರ್ಕಾರ ಅನುಮೋದನೆ ನೀಡಿದೆ ಎಂದು ತಿಳಿಸಿದರು.
ಬಳ್ಳಾರಿ ನಗರ ಶಾಸಕರಾದ ಸೋಮಶೇಖರ ರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು, ಜವಳಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗುತ್ತಿಗನೂರು ವಿರುಪಾಕ್ಷಿ ಗೌಡ, ಮಾಜಿ ಸಂಸದೆ ಜೆ.ಶಾಂತ, ಬುಡಾ ಅಧ್ಯಕ್ಷರಾದ ಮಾರುತಿ ಪ್ರಸಾದ್, ಎಪಿಎಂಸಿ ಅಧ್ಯಕ್ಷರಾದ ಬಸವಲಿಂಗಪ್ಪ ಸೇರಿದಂತೆ ಇತರರು ಇದ್ದರು.