ಬಳ್ಳಾರಿ

ಶ್ರಾವಣ ಸಂಜೆ ಕಾರ್ಯಕ್ರಮ

ಶ್ರಾವಣ ಸಂಜೆ ಕಾರ್ಯಕ್ರಮ

ಬಳ್ಳಾರಿ 10: ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ ಇವರಿಂದ ವೈ.ಕಗ್ಗಲ್ಲು ಗ್ರಾಮದ ಈಶ್ವರ ದೇವಸ್ಥಾನದ ಆವರಣದಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  

ಈ ಕಾರ್ಯಕ್ರಮವನ್ನು ಪಿ.ಡಿ.ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಲಿಂಗಪ್ಪ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಶಿಸಿ ಹೋಗುತ್ತಿರುವ ಜಾನಪದ ಕಲೆಗಳನ್ನು ಮತ್ತೆ ಹೊಸ ಮೆರಗು ನೀಡಿ ಯುವಜನತೆಯತ್ತ ಕೊಂಡೊಯ್ಯುತ್ತಿರುವುದು ತುಂಬಾ ಹರ್ಷದಾಯಕ ಸಂಗತಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಊರಿನ ಮುಖಂಡರಾದ ಗಾದಿಲಿಂಗಪ್ಪ ಅವರು ಮಾತನಾಡುತ್ತಾ, ಗ್ರಾಮಾಂತರ ಪ್ರದೇಶಗಳಲ್ಲಿ ತೊಗಲುಗೊಂಬೆ ಕಲೆಯನ್ನು ನಡೆಸುತ್ತಿರುವುದು ಸಂತಸದ ವಿಷಯ. ಇದೇ ರೀತಿ ಎಲ್ಲಾ ಗ್ರಾಮಗಳಲ್ಲೂ ಸಹ ನಡೆಸಬೇಕೆಂದರು.  

ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡದ ಅಧ್ಯಕ್ಷರಾದ ಕೆ.ಹೊನ್ನೂರುಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ತಂಡದ ವತಿಯಿಂದ ಬಾಲ್ಯ ವಿವಾಹ ಬೇಡ, ಬಾ ಬಾಲೆ ಮರಳಿ ಶಾಲೆ, ಕೊರೊನಾ ಜಾಗೃತಿ ಅಭಿಯಾನದ ತೊಗಲುಗೊಂಬೆ ಕಥಾ ರೂಪಕಗಳನ್ನು ನಡೆಸಿಕೊಟ್ಟರು.  

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಬಸವನಗೌಡ, ಶಂಕರಗೌಡ, ಪದ್ಮಾವತಿ ಬಸವನಗೌಡ, ಲಕ್ಷ್ಮಿ ಮಹಾಲಿಂಗ, ಲಕ್ಷ್ಮಿ ದೇವನ್ನ, ಲಿಂಗನ್ನ ಪೂಜಾರಿ ಮುಖಂಡರಾದ ಲೋಕನಗೌಡ, ಬಿ.ಹಗರಿಗೌಡ, ತಿರುಮಲೇಶ, ಭರತ್, ಮಲ್ಲಿಕಾರ್ಜುನ, ಸುಮಿತ್, ಅಭಿಷೇಕ್, ತಂಡದ ಕಾರ್ಯದರ್ಶಿ ಲಕ್ಷ್ಮಿದೇವಿ ಹೊನ್ನೂರುಸ್ವಾಮಿ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ