ಓವರ್ ಸ್ಮಾರ್ಟ್ ಬೇಡ ಲೈವ್ ಟಿವಿ ಶೋದಲ್ಲಿ ಶೋಯೆಬ್ ಅಖ್ತರ್ ಗೆ ಗೆಟ್ ಔಟ್!
ಇಸ್ಲಾಮಾಬಾದ್, ಅ 27: ಟೀಮ್ ಇಂಡಿಯಾ ವಿರುದ್ಧ ಗೆದ್ಮೇಲೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಟಿವಿ ಶೋಗಳಲ್ಲಿ ಠಿಕಾಣಿ ಹೂಡಿದ್ದಾರೆ. ಲೈವ್ ಕಾರ್ಯಕ್ರಮಗಳಲ್ಲಿ ತಾವೇ ದೊಡ್ಡ ಸ್ಟಾರ್ ಗಳು ಅನ್ನೋ ಕೊಂಬುಗಳು ಅವರಿಗೆ ಬಂದ್ಬಿಟ್ಟಿವೆ. ಭಾರತದ ಕೊಹ್ಲಿ ಪಡೆ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.
ಹೌದು., ಅಕ್ಟೋಬರ್ 24ರಂದು ಭಾರತ ಕ್ರಿಕೆಟ್ ತಂಡವನ್ನು ಬಾಬರ್ ನೇತೃತ್ವದ ಕ್ರಿಕೆಟ್ ತಂಡ ಹೀನಾಯವಾಗಿ ಸೋಲಿಸಿತು. ಭಾರತದ ಆ ಸೋಲನ್ನು ನಾಲ್ಕು ದಿನ ಕಳೆದ್ರೂ ಪಾಕಿಸ್ತಾನ ನ್ಯೂಸ್ ಗಳು ಸುದ್ದಿ ಮಾಡೋದನ್ನು ಬಿಡ್ತಿಲ್ಲ. ಹೀಗಾಗಿ, ಟಿ-20 ವಿಶ್ವಕಪ್ ಕುರಿತು ಚರ್ಚೆಗಳು ಎಗ್ಗಿಲ್ಲದೆ ಪಾಕ್ ಟಿವಿ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿವೆ.
ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್, ಪಾಕಿಸ್ತಾನದ ಖ್ಯಾತ ನ್ಯೂಸ್ ಚಾನೆಲ್ ಪಿಟಿವಿಯಲ್ಲಿ ಮಾಜಿ ಕ್ರಿಕೆಟಿಗರೊಂದಿಗೆ ಚರ್ಚೆಯಲ್ಲಿ ಭಾಗವಹಿಸಿದ್ದರು. ಈ ಚರ್ಚೆಯಲ್ಲಿ ಶೋಯೆಬ್ ಅಖ್ತರ್ ಜೊತೆ ವಿವಿಯನ್ ರಿಚರ್ಡ್ಸ್, ಸನಾ ಮೀರ್ ಸೇರಿದಂತೆ ಅನೇಕ ಕ್ರಿಕೆಟಿಗರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಖ್ಯಾತ ನಿರೂಪಕ ಡಾ.ನೌಮಾನ್ ನಡೆಸಿಕೊಡುತ್ತಿದ್ದರು.
ಟಿವಿ ಶೋನಲ್ಲಿ ಆಗಿದ್ದೇನು ಗೊತ್ತಾ?
ಈ ಡಿಬೇಟ್ ನಲ್ಲಿ ಶೋಯೆಬ್ ಅಖ್ತರ್, ಶಾಹಿನ್ ಅಫ್ರಿದಿ ಹಾಗೂ ಹಾರಿಸ್ ರೌಫ್ ಕುರಿತು ಕೆಲವೊಂದು ಪಾಯಿಂಟ್ ಗಳನ್ನು ಮುಂದಿಟ್ಟರು. ಈ ವೇಳೆ ಸಿಟ್ಟಾದ ಆಂಕರ್ ನೌಮಾನ್, ಕ್ರಿಕೆಟಿಗರ ಬಗ್ಗೆ ನೀವು ಅಸಭ್ಯವಾಗಿ ಮಾತನಾಡುತ್ತಿದ್ದೀರಿ. ನೀವು ಓವರ್ ಸ್ಮಾರ್ಟ್ ಆಗಿ ಮಾತನಾಡುತ್ತಿರುವುದು ಪ್ರೇಕ್ಷಕರಿಗೆ ಗೊತ್ತಾಗುತ್ತಿದೆ. ಆದ್ದರಿಂದ ನೀವು ಇಲ್ಲಿಂದ ಎದ್ದು ಹೋಗಬಹುದು ಅಂತಾ ಖಡಕ್ ಆಗಿ ಹೇಳಿಬಿಟ್ಟರು. ಇದರಿಂದ ಅವಮಾನಗೊಂಡ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಲೈವ್ ಕಾರ್ಯಕ್ರಮ ಬಿಟ್ಟು ಅಲ್ಲಿಂದ ಕಾಲ್ಕಿತ್ತರು.
ನಂತರ ಶೋಯೆಬ್ ಅಖ್ತರ್ ಹೇಳಿದ್ದೇನು?
ಲೈವ್ ಡಿಬೇಟ್ ನಲ್ಲಿ ವಿದೇಶಿ ಮಾಜಿ ಆಟಗಾರರ ಮುಂದೆ ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಯಿತು. ನಾನೊಬ್ಬ ರಾಷ್ಟ್ರೀಯ ಮಾಜಿ ಆಟಗಾರ. ನನ್ನನ್ನು ಈ ರೀತಿಯಾಗಿ ಕೆಟ್ಟದಾಗಿ ನಡೆಸಿಕೊಂಡಿದ್ದು ಸರಿಯಲ್ಲ. ಈ ಬಗ್ಗೆ ನಿರೂಪಕನಿಗೆ ಕ್ಷಮೆ ಕೇಳಲು ತಿಳಿಸಿದ್ದೆ ಅಂತಾ ಹೇಳಿಕೊಂಡಿದ್ದಾರೆ.