ಶಿವಶರಣೆ, ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ
ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ, ಪರಸ್ಪರ ನಂಬಿಕೆ, ವಿಶ್ವಾಸ, ಕ್ಷಮಿಸುವ ಗುಣ, ಪ್ರತಿಯೊಬ್ಬರಿಗೂ ಒಳಿತನ್ನು ಬಯಸಿದ್ದ ಹೇಮರೆಡ್ಡಿ ಮಲ್ಲಮ್ಮ ಕರುಣಾಮಯಿ ಹಾಗೂ ದಾಸೋಹಿಯಾಗಿದ್ದರು.
ಶ್ರೀಶೈಲದ ದಕ್ಷಿಣಕ್ಕಿರುವ ವೆಲ್ಲಟೂರು ಜಿಲ್ಲೆಗೆ ಸೇರಿದ ರಾಮಾಪುರದ ನಾಗಾರೆಡ್ಡಿ ಗೌರಮ್ಮ ದಂಪತಿಗಳು ಸಂತಾನ ಭಾಗ್ಯವಿಲ್ಲದೇ ಪರಿತಪಿಸುತ್ತಿರುವಾಗ ಜಂಗಮರೊಬ್ಬರ ಆಶಿರ್ವಾದದಿಂದ ಶ್ರೀಶೈಲ ಮಲ್ಲಿಕಾರ್ಜುನನ ವರ್ರಸಾದವಾಗಿ ಜನಿಸಿದ ಮಗುವೇ ಹೇಮರೆಡ್ಡಿ ಮಲ್ಲಮ್ಮ.
ಹೇಮರೆಡ್ಡಿ ಮಲ್ಲಮ್ಮ ಸಾಮಾನ್ಯ ವರ್ಗದ ಕುಟುಂಬದಲ್ಲಿ ಜನಿಸಿದವರು. ಬಾಲ್ಯದಿಂದಲೂ ಶ್ರೀಶೈಲ ಮಲ್ಲಿಕಾರ್ಜುನನ್ನೇ ಆರಾಧ್ಯದೈವವೆಂದು ಭಾವಿಸಿ ದೇವರನ್ನೇ ಸಾಕ್ಷಾತ್ಕರಿಸಿಕೊಂಡವಳು. ಮಲ್ಲಿಕಾರ್ಜುನನ ಅನುಗ್ರಹದಿಂದ ಆದರ್ಶ ಶರಣೆಯಾಗಿ ರೂಪುಗೊಂಡವರು.
ಹೇಮರೆಡ್ಡಿ ಮಲ್ಲಮ್ಮ ಬೆಳೆದಾಗ ಅವಳನ್ನು ಸಮೀಪದ ಸಿದ್ದಾಪುರದ ಕುಮಾರಗಿರಿ ವೇಮರೆಡ್ಡಿಯ ಮಗ ಭರಮರೆಡ್ಡಿಗೆ ಮದುವೆ ಮಾಡಿಕೊಡುತ್ತಾರೆ. ಬರಮರೆಡ್ಡಿ ಅವರನ್ನು ಜನರು ಹುಚ್ಚನಂತೆ ಪರಿಭಾವಿಸುತ್ತಿದ್ದರು. ಆದರೆ ಮಲ್ಲಮ್ಮ ಪತಿಯ ಮುಗ್ಧತೆ, ಸ್ವಭಾವವನ್ನು ಕಂಡು ದೇವರಂತೆ ಉಪಚರಿಸಿದಳು. ಮನೆಯಲ್ಲಿ ಅತ್ತೆ, ನೆಗೆಣ್ಣಿಯರ ಕಾಟ ಸಹಿಸಿಕೊಂಡು ಮಲ್ಲಿಕಾರ್ಜುನನ ಪೂಜೆಯಲ್ಲಿ ನಿರತರಾದರು.
ವಿವಾಹಕ್ಕಿಂತ ಮೊದಲೇ ಶರಣೆಯಾಗಿದ್ದ ಮಲ್ಲಮ್ಮ ನಂತರ ಸಂಸಾರದಲ್ಲಿ ಅನೇಕ ಕಿರುಕುಳ, ಕಷ್ಟಕೋಟಲೆಗಳನ್ನು ಸಹಿಸಿಕೊಂಡು ಪತಿವ್ರತೆಯ ಧರ್ಮ ಪಾಲಿಸುತ್ತಾ ನೋವು ನಲಿವುಗಳನ್ನು ಸಮನಾಗಿ ಸ್ವೀಕರಿಸಿದವರು. ತನ್ನ ತಪದ ಫಲವನ್ನೆಲ್ಲಾ ಸಮಾಜೋದ್ಧಾರಕ್ಕೆ ಧಾರೆ ಎರೆದು ತಾಳ್ಮೆಯ ಅಧಿದೇವತೆಯಾಗಿ ಇಡೀ ಪ್ರಪಂಚಕ್ಕೆ ಭಕ್ತಿ, ಜ್ಞಾನ, ಜಾತ್ಯತೀತ, ಅನುಕಂಪ ಮುಂತಾದ ಮೌಲ್ಯಗಳನ್ನು ನೀಡಿದ್ದಾರೆ.
ವ್ಯಭಿಚಾರಿಯಾದ ಮೈದುನ ವೇಮನನ್ನು ತಿದ್ದಿ, ತೀಡಿ, ಮಹಾತತ್ವಜ್ಞಾನಿಯಾಗಿ ರೂಪಿಸಿದ ಶ್ರೇಯಸ್ಸು ಮಲ್ಲಮ್ಮನಿಗೆ ಸಲ್ಲುತ್ತದೆ.
ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದರೂ ಸನ್ಯಾಸಿನಿ ಆಗದೇ ಸಾಂಸಾರಿಕ ಜೀವನ ನಡೆಸುತ್ತಲೂ ಸಾಧನೆ ಮಾಡಬಹುದು ಎಂದು ತೋರಿಸಿಕೊಟ್ಟರು. ಕಾಯಕದಿಂದಲೇ ಮುಕ್ತಿ ಎಂಬ ಶರಣ ಸಿದ್ಧಾಂತದಂತೆ ಕೃಷಿ ಕಾಯಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸಾಂಸಾರಿಕ ಬದುಕನ್ನು ಜಯಿಸಿದ ಮಹಾಶರಣೆ. ತಾಳ್ಮೆ, ಸಹನೆಯ ಸ್ಫೂರ್ತಿಯಾಗಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಾವಿರಾರು ಸಮಸ್ಯೆಗಳನ್ನು ಎದುರಿಸಿ ಬದುಕುವುದೇ ನಿಜವಾದ ಬದುಕು ಎಂಬುದನ್ನು ಈ ಸಮಾಜಕ್ಕೆ ತೋರಿಕೊಟ್ಟವರು.
ಪೂಜಾರಿಗಳ ಮಧ್ಯಸ್ಥಿಕೆಯಿಲ್ಲದೇ ದೇವರನ್ನು ಪೂಜಿಸಿ ಎಂದು ಜನರಿಗೆ ತಿಳುವಳಿಕೆ ನೀಡಿದವರು. ಅಕ್ಕಮಹಾದೇವಿ ಶ್ರೀಶೈಲ ಮಲ್ಲಿಕಾರ್ಜುನನ್ನು ಪತಿ ಎಂದರೆ, ಹೇಮರೆಡ್ಡಿ ಮಲ್ಲಮ್ಮ ತಂದೆ ಎಂದರು. ಇಬ್ಬರ ದೃಷ್ಟಿ ಭಿನ್ನವಾಗಿ ಕಂಡರೂ ಆಶಯ, ಆದರ್ಶಗಳು ಸಮಾಜಕ್ಕೆ ಪೂರಕವಾಗಿವೆ.
ನಿಧನದ ಸಮಯದಲ್ಲಿ ಮಲ್ಲಿಕಾರ್ಜುನ ಕೇಳಿದ ವರಕ್ಕೆ ಪ್ರತಿಯಾಗಿ ಹೇಮರೆಡ್ಡಿ ಮಲ್ಲಮ್ಮ ತನ್ನ ಬಳಗಕ್ಕೆಂದು ಬಡತನ ಬಾರದಿರಲಿ ಎಂದು ಬೇಡಿದವರು. ಸಂಪತ್ತಿಗೆ ಸೊಕ್ಕಬೇಡಿ, ಸಿರಿ ಬಂದ ಕಾಲಕ್ಕೆ ಮೈಮರೆತು ಹಿಗ್ಗದೇ, ದಾನಧರ್ಮ ಮಾಡುವುದರ ಮೂಲಕ ದಾನಗುಣವನ್ನು ಬೆಳೆಸಿಕೊಳ್ಳಬೇಕು ಎಂದು ತನ್ನ ಬಳಗದವರಿಗೆ ತಿಳುವಳಿಕೆ ನೀಡಿದವರು.
ಕಷ್ಟದಲ್ಲೂ ಎಲ್ಲರ ಒಳಿತನ್ನು ಬಯಸಿದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಆದರ್ಶ ಜೀವನವನ್ನು ನಡೆಸಿ ಇಡೀ ಲೋಕಕ್ಕೆ ಮಾದರಿಯಾಗಿದ್ದಾಳೆ. ಅವರ ಜೀವನ ಮೌಲ್ಯಗಳು ಮನುಕುಲಕ್ಕೆ ಅದರಲ್ಲೂ ಸ್ತ್ರೀಕುಲಕ್ಕೆ ಅಮೂಲ್ಯ ಕಾಣಿಕೆಗಳಾಗಿವೆ.
- ಗಿರಿಜಾ ಶಿ. ಭಜಂತ್ರಿ
ಧಾರವಾಡ
- * * * -