ಸಂಭ್ರಮದಿಂದ ಶೀಗೆ ಹುಣ್ಣಿಮೆ ಹಬ್ಬ ಆಚರಣೆ
ಶಿಗ್ಗಾವಿ 09: ತಾಲೂಕಿನಲ್ಲಿ ಸತತ ಮಳೆಯಾಗಿ ಅತಿ ಹೆಚ್ಚು ಬೆಳೆಗಳು ಹಾನಿ ನಡುವೆಯೂ ರೈತರು ಭಕ್ತಿಭಾವದಿಂದ ಭಾನುವಾರ ಹಿರೇಮಣಕಟ್ಟಿ ಗ್ರಾಮದ ರಾಮನಗೌಡ ಪಾಟೀಲ ಇವರ ಜಮಿನಿನಲ್ಲಿ ಶೀಗೆ ಹುಣ್ಣಿಮೆನ್ನು ಹಬ್ಬದ ಸಂಭ್ರಮದಂತೆ ಆಚರಿಸಿದರು.
ಶೀಗೆ ಹುಣ್ಣಿಮೆಯಂದು ರೈತ ಕುಟುಂಬ ಸದಸ್ಯರೆಲ್ಲರೂ ಬೆಳಗಿನ ಜಾವ ಸಿದ್ಧರಾಗಿ ಚಕ್ಕಡಿ ಗಾಡಿಗಳ ಮೂಲಕ ಹೊಲಗದ್ದೆಗಳಿಗೆ ತೆರಳುತ್ತಾರೆ. ಕುಟುಂಬದ ಯಜಮಾನ ಬೆಳೆದ ಬೆಳೆಯ ಸುತ್ತಲೂ ನಾಲ್ಕು ದಿಕ್ಕಿನಲ್ಲಿ ಚರಗ ಚೆಲ್ಲಿ ವರ್ಷ ಪೂರ್ತಿ ಬೆಳೆದ ಬೆಳೆಯನ್ನು ಕಣ್ತುಂಬಿ ಕೊಳ್ಳುತ್ತಾನೆ. ನಂತರ ಕುಟುಂಬ ಸದಸ್ಯರೆಲ್ಲರೂ ಹೊಲಗದ್ದೆಯ ಸುತ್ತಲೂ ಅಡ್ಡಾಡುತ್ತ ಹೊಲಗದ್ದೆಯಲ್ಲಿರುವ ಮರದ ನೆರಳಿನಡಿ ಕುಳಿತು ಮಳೆ, ಬೆಳೆಯ ಕುರಿತು ಚರ್ಚಿಸುತ್ತಾರೆ. ಸಾಂಪ್ರದಾಯಿಕ ಪೂಜೆ ಪುನಸ್ಕಾರದ ನಂತರ ತಮ್ಮ ಆಪ್ತರ ಜೊತೆ ಕುಳಿತು ಊಟ ಮಾಡಿ ಕೆಲ ಹೊತ್ತು ಅಲ್ಲಿಯೇ ವಿಶ್ರಾಂತಿ ಪಡೆಯುತ್ತಾರೆ.
ಸೂರ್ಯ ಅಸ್ತನಾಗುವ ಪೂರ್ವದಲ್ಲಿ ಬೆಳೆಯ ಕಡೆ ಮತ್ತೊಂದು ನೋಟವನ್ನು ಹಾಕಿ ಮನೆಗೆ ಮರಳುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ ಎಂದು ರೈತರು ಹೇಳುತ್ತಾರೆ. ಮಳೆ ಉತ್ತಮವಾಗಿ ಆದರೆ ಮಾತ್ರ ಎಲ್ಲ ಹಬ್ಬ ಹರಿದಿನಗಳು ಸಂಭ್ರಮದಿಂದ ಆಚರಿಸಲ್ಪಡುತ್ತವೆ. ಇಲ್ಲವಾದರೆ ಸಾಂಪ್ರದಾಯಿಕ ಪೂಜೆಯೊಂದಿಗೆ ಹಬ್ಬ ಮಾಡಬೇಕಾಗುತ್ತದೆ ಎಂದು ಅಸಹಾಯಕತೆಯಿಂದ ಹೇಳಿದರು.
ಈ ಸಂದರ್ಭದಲ್ಲಿ ಬಸವರಾಜ ತಿತ್ತಿ, ಉಮೇಶ ಮಣ್ಣುರ, ಸುಜಾತಾ ಜವಳಗೆರಿ, ರೇಣುಕಾ ಪಾಟೀಲ, ಮಮತಾ ತಿತ್ತಿ, ಪವಿತ್ರಾ ಪಾಟೀಲ, ಕವಿತಾ ಬಂಡಿವಡ್ಡರ ಹಾಗೂ ಅಪಾರ ಬಂಧು ಮಿತ್ರರು ಉಪಸ್ಥಿತರಿದ್ದರು.