ವ್ಯಥೆಯುಂಡು ಕಥೆಯಾದವಳು
ಇನ್ನೂ ಎಷ್ಟು ದಿನ ಅಂತ ಹೀಗೆ ಕೊರುಗ್ತಾ ಕೂತಿರುತ್ತಿಯಾ!, ನಿನ್ನ ಬದುಕಿನ ಬಗ್ಗೆಯೂ ಸ್ವಲ್ಪ ಯೋಚನೆ ಮಾಡು ಮಗಳೇ!! ಅಮ್ಮ ಯೋಚನೆ ಮಾಡ್ಲಿಕ್ಕೆ ಏನು ಉಳಿದಿದೆಯಮ್ಮ ಎಲ್ಲಾ ಮುಗಿದ ಅಧ್ಯಾಯ, ನಿಟ್ಟುಸಿರು ಕಣ್ಣೀರು ಬಿಟ್ಟರೆ ನಂಗೆ ಅಂತ ಏನು ಇಲ್ಲ ಬಿಡಮ್ಮ. ಹೌದು! ಅಷ್ಟು ಅವಸರ ಏನಿತ್ತಮ್ಮ ನನ್ನ ಮದುವೆ ಮಾಡ್ಲಿಕ್ಕೆ ಹೋಗ್ಲಿ ಮದುವೆ ಸಮಯದಲ್ಲಿ ಆ ಹುಡುಗ ನಿಂಗೆ ಇಷ್ಟನಾ ಮದುವೆ ಆಗ್ತಿಯಾ ಅಂತ ಒಂದು ಮಾತು ಏಕೆ ಕೇಳ್ಲಿಲ್ಲ?? ನಾನು ಪದವೀಧರೆ ನಂಗೆ ನನ್ನದೆ ಆದ ಗೌರವ ಪ್ರತಿಷ್ಠೆ ಎಲ್ಲಾ ಇರುತ್ತೆ ಅಂತ ನೀನು ಯ್ಯಾಕೆ ಯೋಚನೆ ಮಾಡ್ಲಿಲ್ಲಮ್ಮ, ನಿನ್ನ ಪ್ರತಿಷ್ಠೆಗೆ, ನಿನ್ನ ಗೌರವಕ್ಕೆ ನಿನ್ನ ಹತ್ತಿರದ ಸಂಬಂಧಿ ಅಂತ ನಿನ್ನ ಕಣ್ಣಿಗೂ ಚುಚ್ಚಿಕ್ಕೊಂಡು ನನ್ನ ಕಣ್ಣಿಗೂ ಬಂಗಾರದ ಸೂಜಿ ಅಂತ ಚುಚ್ಚಿ ಬಿಟ್ಟಿಯಲ್ಲಮ್ಮ. ಈಗ ಯ್ಯಾಕೆ ಯೋಚ್ನೆ ಮಾಡ್ತಿಯಾ ಅಂತ ಕೇಳ್ತಿಯಾ ನಂಗೆ? ಅಂತ ಪದ್ಮ ರೋಷ ಅವೇಶದಿಂದ ಗದ್ಗತೀತವಾದ ಸ್ವರದಲ್ಲಿ ಅಮ್ಮನಲ್ಲಿ ಕೇಳಿದ ಪ್ರಶ್ನೆಗೆ ಪದ್ಮಳ ಅಮ್ಮನಿಂದ ಮೌನದ ಕಣ್ಣೀರಿನ ಉತ್ತರವೇ ಬಿಟ್ಟರೆ ಬೇರೆ ಮಾತು ಹೊರಬರಲಿಲ್ಲ.
ಚಟಗಳ ದಾಸನಾದ ವಸಂತನಿಗೆ ಖಾಯಿಲೆಗಳು ಸಹ ವರವಾಗಿ ಬಳುವಳಿಯಂತೆ ಒಂದೊಂದಾಗಿ ಬರಲಾರಂಭಿಸಿದವು. ಹೇಳಿಕೇಳಿ ಮೊದಲೆ ಸೋಮಾರಿ, ಯಾವುದರ ಜವಾಬ್ದಾರಿಯನ್ನು ತೆಗೆದುಕೊಳ್ಳಲಾರದವ, ಪದ್ಮ ಅಲ್ಪಸ್ವಲ್ಪ ದುಡಿಯುತ್ತಾಳೆ ಅಂತ ಗೊತ್ತಾದ ಮೇಲೆ ತಾನಾಯಿತು ತನ್ನ ಪಾಡಾಯಿತು ಅವನ ದುಡಿಮೆಯಲ್ಲಾ ಕೇವಲ ಅವನ ಕುಡಿತಕ್ಕೆ ಮಾತ್ರ ಸೀಮಿತವಾಗಿರುತ್ತಿತ್ತು, ಯಾಕ್ರಿ ಹೀಗೆ ಮಾಡ್ತಿರಾ? ಅಂತ ಕೇಳ್ದಾಗ ವಸಂತ ಮಾತ್ರ ನಿರ್ಲಿಪ್ತನಾಗಿ ನಾನು ಏನು ಮಾಡ್ದೆ? ನಾನು ಕುಡ್ದಿಲ್ಲಪ್ಪ ಅಂತ ಹಾರಿಕೆಯ ಉತ್ತರ ಕೊಡುತ್ತಿದ್ದ ಪದ್ಮಳಿಗೂ ಹೇಳಿ ಹೇಳಿ ಸಾಕಾಗಿತ್ತು. ರೀ,, ಈ ತರ ಕುಡಿದ್ರೆ ನಿಮ್ಮ ಆರೋಗ್ಯದ ಕಥೆ ಏನು ನಾಳೆ ನಮಗೆ ಮಕ್ಳು ಮರಿ ಆದ್ರೆ ಅದರ ಖರ್ಚು ವೆಚ್ಚ ಎಷ್ಟು ಆಗುತ್ತೆ ಅಂತ ಗೊತ್ತಾ, ನೀವು ಹೀಗೆ ಅರ್ಥನೆ ಇಲ್ದೆ ಕುಡಿತಾ ಇದ್ದರೆ ನಮ್ಮ ಬದುಕು ಮೂರಾಬಟ್ಟೆ ಆಗುತ್ತೆ, ಪ್ಲೀಸ್ ರೀ,, ಬಿಟ್ಟು ಬಿಡಿ ಅಂತ ಕಣ್ಣೀರು ಸುರಿಸಿದರು ವಸಂತ ಮಾತ್ರ ತನಗೆ ಸಂಬಂಧನೆ ಇಲ್ಲ ಅನ್ನೊ ತರ ಮೋಜು ಮಸ್ತಿಯಲ್ಲಿ ಕಾಲ ಕಳಿತಾ ಇರ್ತಿದ್ದ, ದಿನ ಕಳೆದಂತೆ ಮದುವೆ ಆಗಿ ಆರು ತಿಂಗಳಲ್ಲೆ ವಸಂತನ ಆರೋಗ್ಯ ಸ್ಥಿತಿ ಹದಗೆಡುತ್ತಾ ಬಂತು.ವಸಂತನ ದುಡಿಮೆನು ಇಲ್ದೆ ಆಸ್ಪತ್ರೆಯ ಖರ್ಚು ವೆಚ್ಚ ಮನೆ ಬಾಡಿಗೆ ಕರೆಂಟ್ ಬಿಲ್ ದಿನಸಿ ಹೀಗೆ ಒಂದರ ಮೇಲೆ ಒಂದು ಅಂತ ದುಡ್ಡು ಕಳೆದು ಹೋಗ್ತಾನೆ ಇತ್ತು, ಇದರ ಜೊತೆಗೆ ವಸಂತನ ಆರೈಕೆ ಪದ್ಮ ಕೇವಲ ಒಂದು ಗಾಣದೆತ್ತಿನ ರೂಪದಲ್ಲಿ ಸಂಸಾರಕ್ಕಾಗಿ ದುಡಿತಾನೆ ಇದ್ಲು ಅವನಿಂದ ಯಾವ ಸುಖ ಶಾಂತಿ ನೆಮ್ಮದಿನೂ ಇಲ್ಲದೆ, ನರ್ಸ ತರ ಒಂದು ಮಗು ತರ ಸೇವೆ ಮಾಡ್ತಾನೆ ಇದ್ಲು, ಕುಡಿತ ಬಿಡಿಸ್ಲಿಕ್ಕೆ ಬೇಕಾದಷ್ಟು ಕಡೆ ಸೇರ್ಸಿದ್ರು ವಸಂತ ಮಾತ್ರ ತನ್ನ ಚಟ ಬಿಡಲೆ ಇಲ್ಲ, ಪದ್ಮಳ ಬದುಕಿಗೆ ಸುಖ ಅನ್ನೊದು ಕೇವಲ ಮರೀಚಿಕೆ ಆಯ್ತು, ನನ್ನ ಅಕ್ಕ ತಂಗಿ ಎಲ್ಲಾ ಎಷ್ಟು ಚೆನ್ನಾಗಿದ್ದಾರೆ ಆದರೆ ನನ್ನ ಬದುಕು ಮಾತ್ರ ಹೀಗೆ ಛೇ... ಅಂತ ಒಳಗೊಳಗೆ ನೊಂದು ದಿನವೂ ಸಂಕಟ ಪಡುತಿದ್ಲು ಅಬ್ಬಾ!! ಮದುವೆ ಆಗಿ ಹತ್ತು ವರ್ಷ ಆಯ್ತಾ?? ಆದರೆ ಕೈಯಲ್ಲಿ ಒಂದು ಮಗು ಸಹ ಇಲ್ಲ, ಕುಡಿತ ಆಸ್ಪತ್ರೆ ಆರೈಕೆ ಇಷ್ಷರಲ್ಲೆ ದಿನಗಳು ಉರುಳುತಿದ್ದವು, ಪದ್ಮಳ ನೋವು ಸಂಕಟ ಕೇವಲ ಅರಣ್ಯರೋದನವಾಗಿತ್ತು, ವಸಂತ ತನ್ನ ಅನಾರೋಗ್ಯದ ಗುಟ್ಟುನ್ನು ಮುಚ್ಚಿಟ್ಟು ಪದ್ಮಳ ಮೇಲೆ ಸದಾ ಗೂಬೆ ಕೂರಿಸುತ್ತಿದ್ದ. ಇದರಿಂದ ರೋಸಿ ಹೋದ ಪದ್ಮ ಅವನ ಕುಡಿತದ ಚಟದಿಂದ ಬಿಪಿ ಶುಗರ್ ಇವುಗಳಿಂದ ಬಹು ಅಂಗಾಂಗ ವೈಪಲ್ಯದಿಂದ ಬಳಲುತ್ತಿದ್ದಾನೆ ಎಂಬ ಸತ್ಯವನ್ನು ಹತ್ತಿರದ ಸಂಬಂಧಿಕರಿಗೆ ಹೇಳುತ್ತಾ ಬಂದಳು, ಪದ್ಮ ಏನೇ ಸತ್ಯ ಹೇಳಿದ್ರು ವಸಂತನ ಕೆಟ್ಟ ಹಟದ ಚಟದಿಂದಾಗಿ ಪದ್ಮಳ ಬದಕನ್ನು ಹೀನಾಯವಾಗಿ ಹಾಳು ಮಾಡಿ ಕಣ್ಮುಚ್ಚಿಬಿಟ್ಟ. ತನ್ನ ಮೋಜಿನಿಂದಾಗಿ ಅಮಾಯಕ ಪದ್ಮಳ ಬದುಕನ್ನು ಸರ್ವನಾಶ ಮಾಡಿ ಹೊರಟುಹೋದ.
ಪದ್ಮ 35 ಸಂವತ್ಸರ ಕಳೆದ ಅವಳ ಜೀವನಕ್ಕೆ ಆಧಾರವೇ ಇಲ್ಲದೆ ಪರಿತಪಿಸುವಂತಾಯಿತು. ಪದ್ಮ ತನ್ನಷ್ಟಕ್ಕೆ ತಾನು ಅಂದುಕೊಳ್ಳುತ್ತಿದ್ದಾಳೆ, ಇದು ನನ್ನೊಬ್ಬಳ ಪರಿಸ್ಥಿತಿ ಅಲ್ಲ ನನ್ನಂತಹ ಅದೆಷ್ಟೋ ಮಹಿಳೆಯರು ಇಂದು ಇಂತಹ ನೋವು ಅನುಭವಿಸುತ್ತಿದ್ದಾರೆ, ಅಂತವರ ಕಣ್ಣೀರು ಒರೆಸಬೇಕು ಏನಾದರೂ ಸಾಧನೆ ಮಾಡಲೆ ಬೇಕು ಎಂದುಕೊಳ್ಳುತ್ತಾ ನೋವು ಆಯಾಸಗೊಂಡ ಮನಸ್ಸಿನಿಂದ ಋ ಛಿಚಿಟಿ ಜಠ ಣ ಎನ್ನುತ್ತಾ ಹತಾಶೆ ಮನದಿಂದ ಹೊರಬರಲು ಪ್ರಯತ್ನಿಸಿದಳು ಪದ್ಮ, ಆಗಲೆ ಅಮ್ಮ ಕೈಯಲ್ಲಿಟ್ಟಿದ್ದ ಕಾಫಿ ತಣ್ಣಗಾಗಿ ಪದ್ಮಳ ಕಣ್ಣೀರಿನಿಂದ ತುಂಬಿ ಕಾಫಿಯು ತನ್ನ ರುಚಿಯನ್ನು ಕಳೆದುಕೊಂಡಿತ್ತು.
- * * * -