ತೊಟ್ಟಿಲು ಇದು ಜೀವನದ ಪ್ರಥಮ ಮೆಟ್ಟಿಲು: ಸಂಪಾದನಾ
ಚಿಕ್ಕೋಡಿ 17: ತೊಟ್ಟಿಲು ಇದು ಜೀವನದ ಪ್ರಥಮ ಮೆಟ್ಟಿಲು, ಹುಟ್ಟಿದ ಪ್ರತಿಯೊಬ್ಬರಿಗೂ ತೊಟ್ಟಿಲ ಕಟ್ಟು ಇದ್ದದ್ದೆ ಇದರಿಂದ ಹೊರತಾದವರು ಯಾರು ಇಲ್ಲ ಎಂದು ಪಟ್ಟಾಧಿಕಾರ ರಜತ ಮಹೋತ್ಸವ ಹಾಗೂ ಷಷ್ಠಿಪೂರ್ತಿ ಸಮಾರಂಭದ ಗೌರವಾಧ್ಯಕ್ಷ ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಸಂಪಾದನಾ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಚಿಂಚಣಿ ಗ್ರಾಮದ ಸಿದ್ದಪ್ರಭು ಸಂಸ್ಥಾನ ಮಠದ ಮಹಾದಾಸೋಹ ಅಂಗವಾಗಿ ಅಲ್ಲಮಪ್ರಭು ಸ್ವಾಮೀಜಿ ಪೀಠಾಧಿಕಾರಿಗಳಾಗಿ 25 ವರ್ಷಗಳು ತುಂಬಿರುವ ಹಿನ್ನಲೆ ಅವರ ಪಟ್ಟಾಧಿಕಾರ ರಜತ ಮಹೋತ್ಸವ ಹಾಗೂ ಷಷ್ಠಿಪೂರ್ತಿ ಸಮಾರಂಭದ ಅಂಗವಾಗಿ ಒಂದು ತಿಂಗಳ ಕಾಲ ಆಯೋಜಿಸಿದ ಬಸವ ಪುರಾಣ ಪ್ರಚನದಲ್ಲಿ ಬಸವಣ್ಣನವರ ನಾಮಕರಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಗುವಾಗಿದ್ದಾಗ ಪ್ರತಿಯೊಬ್ಬರಿಗೂ ತೊಟ್ಟಿಲಲ್ಲಿ ಮಲಸಿ ಹೆಸರು ಇಡುವ ಸಂಸ್ಕೃತಿ ನಮ್ಮಲ್ಲಿ ಬೆಳೆದು ಬಂದಿದೆ ಎಂದರು.
ಚಿಂಚಣಿ ಸಿದ್ದಸಂಸ್ಥಾನ ಮಠದ ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ, ತೊಟ್ಟಿಲಿಗೆ ಕಟ್ಟಿದ ನಾಲ್ಕು ಹಗ್ಗಗಳೇ ಮಾನವನು ಸಾಧಿಸಬೇಕಾದ ಪುರುಷಾರ್ಥಗಳು ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷ ಇವುಗಳಲ್ಲಿ ಅರ್ಥ ಮತ್ತು ಕಾಮಗಳಿಗೆ ಹಿಂದೆ ಮುಂದೆ ಇರುವ ಧರ್ಮ ಮತ್ತು ಮೋಕ್ಷಗಳು ಪೂರಕ ತತ್ವಗಳಾಗಿವೆ ಎಂದು ತಿಳಿಸಿದರು.
ಬಸವದರ್ಶನ ಪ್ರವಚನ ನುಡಿ ಸೇವೆಯನ್ನು ಮುದಗಲ್ಲ ತಿಮ್ಮಾಪುರ ಕಲ್ಯಾಣಾಶ್ರಮದ ಮಹಾಂತ ಸ್ವಾಮಿಗಳು ನೀಡಿ ಬಸವಣ್ಣ ಮನುಕುಲದ ಉದ್ಧಾರಕ್ಕಾಗಿ ಹುಟ್ಟಿ ಬಂದವನು, ಬಸವಣ್ಣ ಜನನವಾದಾಗ ದಲಿತ ಯುವಕನಿಗೆ ಶಿಕ್ಷೆಯಾಗುವುದು ನಿಂತಿತು ಎಂದು ಹೇಳಿದರು.
ಬಸವದರ್ಶನ ಪ್ರವಚನ ಸಮಾರಂಭದಲ್ಲಿ 16 ಕೂಸುಗಳಿಗೆ ಬಸವಣ್ಣವರ ನಾಮಕರಣ ಸಮಾರಂಭ ಏಕಕಾಲದಲ್ಲಿ ನಡೆದಿರುವುದು ವಿಶೇಷವಾಗಿತ್ತು.
ಪವಚನಕಾರರಿಗೆ ಸಂಗೀತ ಸೇವೆಯನ್ನು ಬಾಗಲಕೋಟ ಶಂಕರಯ್ಯಾ ಗುರುಮಠ, ತಬಲಾ ವಾದನ ಗದಗನ ಬಸವರಾಜ ಹೊನ್ನಿಗನೂರ, ವಯೋಲಿನ ವಾದನವನ್ನು ಗದಗನ ಗಿರೀಶ ಕೋಳಾಳ ನೀಡಿದರು.
ತಾ.ಪಂ. ಸದಸ್ಯರಾದ ಅಭಯ ಪಾಟೀಲ, ಸೌರಭ ಪಾಟೀಲ, ಬಸವರಾಜ ಪಾಟೀಲ,ರಾಮಗೌಡ ಧರನಗುತ್ತಿ, ಅರುಣ ಕರ್ಯಾಪ್ಪಗೋಳ, ಸಂಜು ಪರೀಟ,ರಮೇಶ ಪಾಟೀಲ, ದೀಪಕ ಮುದ್ದಪ್ಪಗೋಳ,ಸುಭಾಷ ಚೌಗಲಾ,ಸಂಜಯ ಬೇರಡ, ಸೇರಿದಂತೆ ಗ್ರಾ.ಪಂ. ಸದಸ್ಯರು,ಗಣ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.