ನವರಾತ್ರಿ ನಾಡಹಬ್ಬ: ವೈಚಾರಿಕತೆ, ಕೃಷಿ ಹಾಗೂ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಿದ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ
ಸವದತ್ತಿ 16 : ನಗರದ ಗಾಂಧಿ ಚೌಕದಲ್ಲಿ ನಾಗರಿಕ ಸೇವಾ ವೇದಿಕೆಯ ಆಶ್ರಯದಲ್ಲಿ ಆಯೋಜಿಸಲಾದ ನವರಾತ್ರಿ ನಾಡಹಬ್ಬದ 5ನೇ ದಿನದ ಚಿಂತನ ಕಾರ್ಯಕ್ರಮವು ಅತ್ಯಂತ ಸಡಗರ, ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಜರುಗಿತು. ಸಂಜೆ 7:00 ಗಂಟೆಗೆ ಶಕ್ತಿದೇವಿಗೆ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸುವುದರೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ತದನಂತರ ನಾಗಲಿಂಗೇಶ್ವರ ಭಜನಾ ಮಂಡಳಿಯ ಸದಸ್ಯರಿಂದ ಭಕ್ತಿಪೂರ್ವಕ ಭಜನೆಗಳು ಜರುಗಿದವು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಶೀಲ್ದಾರ್ ಹಾಗೂ ಅಸಿಸ್ಟೆಂಟ್ ಕಮಿಷನರ್ ಮಲ್ಲಿಕಾರ್ಜುನ ಹೆಗ್ಗನ್ನವರ ಅವರು, ನವರಾತ್ರಿ ಹಬ್ಬವು ನಮ್ಮ ನಾಡಿನ ಸಂಸ್ಕೃತಿ, ವೈಭವಯುತ ಪರಂಪರೆ ಮತ್ತು ಸಾಮಾಜಿಕ ಸೌಹಾರ್ದತೆಯ ಜೀವಂತ ಸಂಕೇತವಾಗಿದೆ. ಸಮಾಜದಲ್ಲಿ ವೈಚಾರಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾಗರಿಕ ಸೇವಾ ವೇದಿಕೆಯು ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ನಿಜಕ್ಕೂ ಅಭಿನಂದನೀಯ ಎಂದರು. ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುತ್ತಾ,
ನಾನೂ ಕೂಡ ಒಬ್ಬ ರೈತನ ಮಗ. ಕೃಷಿಯಲ್ಲಿ ಸುಧಾರಣೆ ಬರಬೇಕಾದರೆ ರೈತರು ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಿ, ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ಕೃಷಿ ಮಾಡಬೇಕು. ಇದರಿಂದ ಇಳುವರಿ ಹೆಚ್ಚುವುದರ ಜೊತೆಗೆ ಮಣ್ಣಿನ ಫಲವತ್ತತೆಯೂ ಉಳಿಯುತ್ತದೆ ಎಂದು ರೈತರಿಗೆ ಕರೆ ನೀಡಿದರು. ಶಿಕ್ಷಣ ಮತ್ತು ಸಾರ್ವಜನಿಕ ಸೇವೆಯ ಕುರಿತು ಅವರು, ನಮ್ಮ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇಶ-ವಿದೇಶಗಳ ಉತ್ತಮ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆಯಬೇಕು.
ಉನ್ನತ ಶಿಕ್ಷಣದ ಮೂಲಕ ಉತ್ತಮ ಉದ್ಯೋಗ ಕಂಡುಕೊಳ್ಳುವುದರ ಜೊತೆಗೆ ಪ್ರತಿಯೊಬ್ಬರಲ್ಲೂ ಸಾರ್ವಜನಿಕ ಸೇವಾ ಮನೋಭಾವನೆ ಬೆಳೆಯುವುದು ಇಂದಿನ ಅಗತ್ಯವಾಗಿದೆ ಎಂದರು.ಸವದತ್ತಿ ಕೋಟೆಯ ಅಭಿವೃದ್ಧಿಯ ಬಗ್ಗೆ ಪ್ರಸ್ತಾಪಿಸಿದ ಅವರು, ಕೋಟೆಗೆ ಇತ್ತೀಚೆಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ನಡೆಸಿದ್ದು, ಕೋಟೆಯ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಈ ಅಭಿವೃದ್ಧಿ ಕಾರ್ಯಗಳಿಗೆ ತಾವು ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸೇತುವೆಯಾಗಿ ಕೆಲಸ ಮಾಡಲು ಸಂಪೂರ್ಣ ಬದ್ಧರಾಗಿರುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕಲಬುರ್ಗಿ ವಿಶ್ವವಿದ್ಯಾಲಯದ ಕುಲಪತಿ ಡಾ. ಶಶಿಕಾಂತ ಉಡಕೇರಿ ಅವರು ಸಹ ಉಪಸ್ಥಿತರಿದ್ದು ಪ್ರಾಸಂಗಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ತಾಪಂ ಇಒ ಆನಂದ ಬಡಕುಂದ್ರಿ, ಬಿಇಒ ಎ.ಎ.ಖಾಜಿ,ಅಮೃತ ಸಾಣಿಕೊಪ್ಪ, ದಾವಸಾಬ ಶಿಂದೋಗಿ, ಶಿವಪ್ರಕಾಶ್ ಪಾಟೀಲ, ಬಸವರಾಜ ಪುರದಗುಡಿ, ಶಿವಕುಮಾರ್ ಇಟ್ನಾಳ, ಹಾಗೂ ಪದಾಧಿಕಾರಿಗಳು, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.