ಸಂಭ್ರಮಾಚರಣೆ ಪರಿಸರಸ್ನೇಹಿಯಾಗಿರಲಿ: ಬಸವರಾಜ ಸನದಿ
ಬೆಳಗಾವಿ 16: ಪ್ರತಿಯೊಂದು ಮನೆಯಲ್ಲೂ ಹುಟ್ಟುಹಬ್ಬ ಸೇರಿದಂತೆ ಎಲ್ಲ ಸಂಭ್ರಮಾಚರಣೆಗಳು ಪರಿಸರಸ್ನೇಹಿಯಾಗಿರಬೇಕು. ಪಟಾಕಿ, ಪ್ಲಾಸ್ಟಿಕ್ ಚೀಲ, ಬಾಟಲಿ ಸೇರಿದಂತೆ ವಿಷಕಾರಿ ತ್ಯಾಜ್ಯಗಳ ಬಳಕೆಯಿಂದ ಪರಿಸರ ಮತ್ತು ವನ್ಯಜೀವಿಗಳಿಗೆ ಹಾನಿಯಾಗುತ್ತದೆ.
ಆದ್ದರಿಂದ ಇಂತಹ ವಸ್ತುಗಳ ಬಳಕೆಗೆ ಕಡಿವಾಣ ಹಾಕಬೇಕು ಎಂದು ಕಾಕತಿ ವಲಯ ಅರಣ್ಯಾಧಿಕಾರಿ ಬಸವರಾಜ ಸನದಿ ಹೇಳಿದರು. ರಾಮತೀರ್ಥನಗರದ ಕಾರ್ಯಸಿದ್ಧಿ ಆಂಜನೇಯಸ್ವಾಮಿ ದೇವಸ್ಥಾನ ಟ್ರಸ್ಟ್ ಕಮಿಟಿ ವತಿಯಿಂದ ದಸರಾ ಹಬ್ಬದ ನಿಮಿತ್ತ ಗುರುವಾರ ಸಂಜೆ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಹಾಗೂ ಮೊಮ್ಮಕ್ಕಳ ಹುಟ್ಟುಹಬ್ಬದ ಸಂದರ್ಭದಲ್ಲಿ ಕೇಕ್ ಸಂಸ್ಕೃತಿಗೆ ಸೀಮಿತವಾಗದೆ, ಗುರುಹಿರಿಯರ ಹೆಸರಿನಲ್ಲಿ ಗಿಡ ನೆಟ್ಟು ಪೋಷಿಸುವ ಸಂಪ್ರದಾಯ ಬೆಳೆಸಬೇಕು. ಹಿರಿಯರನ್ನು ಗೌರವಿಸುವ ಇಂತಹ ಕಾರ್ಯಕ್ರಮಗಳಿಂದ ಪರಿಸರ ಸಂರಕ್ಷಣೆಯೊಂದಿಗೆ ಭಾರತೀಯ ಸಂಸ್ಕೃತಿಯನ್ನೂ ಉಳಿಸಿದಂತಾಗುತ್ತದೆ.
ರಾಮತೀರ್ಥನಗರದಲ್ಲಿ ಹೆಚ್ಚಿನ ಗಿಡಗಳನ್ನು ಬೆಳೆಸುವುದರಿಂದ ಪರಿಸರ ಸ್ವಚ್ಛತೆ ಹೆಚ್ಚಲಿದೆ. ಗಿಡಗಳ ಅಗತ್ಯವಿದ್ದಲ್ಲಿ ತಾವೇ ಪೂರೈಸುವುದಾಗಿ ತಿಳಿಸಿದ ಅವರು, ಸಂಘ-ಸಂಸ್ಥೆಗಳು ಆಗಾಗ ಪರಿಸರಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರಕೃತಿಯ ಸೇವೆ ಮಾಡಬೇಕು ಎಂದು ಕರೆ ನೀಡಿದರು.