ಶರಣು ಶರಣಾರ್ಥಿ ಜಾಥಾಕ್ಕೆ ಭವ್ಯ ಸ್ವಾಗತ
ಹುನಗುಂದ 19: ಶರಣು ಶರಣಾರ್ಥಿ ಸಂದೇಶ ಜಾಥಾ ಪಟ್ಟಣಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮಿಗಳು ಮತ್ತು ಪಂಚಮಸಾಲಿ ಮುಖಂಡ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಅವರನ್ನು ಮಹಿಳೆಯರು ಆರತಿ ಬೆಳಗುವ ಮೂಲಕ ಬರಮಾಡಿಕೊಂಡರು.
ಇದೆ ವೇಳೆ ಶ್ರೀಗಳು ಮಾತನಾಡಿ ಅಖಂಡ ಪಂಚಮಸಾಲಿ ಸಮಾಜ ಬಾಂಧವರು ಪಾದಯಾತ್ರೆಗೆ ಬೆಂಬಲ ನೀಡಿದಕ್ಕೆ ನಾನು ತುಂಬಾ ಅಬಾರಿಯಾಗಿದ್ದೇನೆ. ಸಾಮಾಜಿಕ ನ್ಯಾಯಕ್ಕಾಗಿ ಧರ್ಮ ಗುರುಗಳು ಹಮ್ಮಿಕೊಂಡ ಪ್ರಪ್ರಥಮ ಪಾದಯಾತ್ರೆ ಇತಿಹಾಸದಲ್ಲಿ ಇದೆ ಮೊದಲು ಎಂದರೂ ತಪ್ಪಲ್ಲ. ರಾಜಧಾನಿಯಲ್ಲಿ ಅತಿ ದೊಡ್ಡ ಹೋರಾಟ ಮಾಡಿದ ಕೀರ್ತಿ ವೀರಶೈವ ಪಂಗಡದ ಪಂಚಮಸಾಲಿ ಸಮಾಜಕ್ಕೆ ಸಲ್ಲುತ್ತದೆ. ಅವೇಶನದಲ್ಲಿ ಚರ್ಚೆಯಾಗಿ ಆರು ತಿಂಗಳ ಕಾಲ ಕಾಲಾವಕಾಶ ಕೇಳಿರುವ ಮುಖ್ಯಮಂತ್ರಿಗಳ ಮಾತು ನನಗೆ ಅರ್ಧ ಜಯ ಸಿಕ್ಕಂತಾಗಿದೆ ಎಂದು ಶ್ರೀಗಳು ಹೇಳಿದರು.
ರಾಷ್ಟ್ರೀಯ ವೀರಶೈವ ಪಂಚಮಸಾಲಿ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ ಹೋರಾಟವನ್ನು ಸಪ್ಟಂಬರ 15ರವರೆಗೆ ಮಾಡಬೇಕಾಗಿತ್ತು. ಪಾದಯಾತ್ರೆ ತಾತ್ಕಾಲಿಕವಾಗಿ ಸತ್ಯಾಗ್ರಹವನ್ನು ನಿಲ್ಲಿಸಲಾಗಿದೆ. ಸರ್ಕಾರಕ್ಕೆ ಗೌರವ ಕೊಟ್ಟು ಸಮಾಜ ಬಾಂಧÀವರ ಸಚಿವರಿಗೆ ಗೌರವ ನೀಡಿ ಅವರು ನೀಡಿದ ಭರವಸೆ ಮೇಲೆ ತಾತ್ಕಾಲಿಕವಾಗಿ ಹೋರಾಟ ನಿಲ್ಲಿಸಲಾಗಿದೆ ಎಂದು ಕಾಶಪ್ಪನವರ ತಿಳಿಸುತ್ತ, ಮುಂದಿನ ದಿನಗಳಲ್ಲಿ ಮೀಸಲಾತಿ ಸಿಗದಿದ್ದರೆ ಮತ್ತೆ ಹೋರಾಟ ಪ್ರಾರಂಭಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಪಾದಯಾತ್ರೆಗೆ ಶ್ರಮಿಸಿದ ಸಮಾಜದ ಮುಖಂಡರನ್ನು ಸನ್ಮಾನಿಸಲಾಯಿತು.
ಸಮಾಜದ ಮುಖಂಡರಾದ ಶಂಕ್ರಪ್ಪ ನೇಗಲಿ, ಸುಭಾಸ ತಾಳಿಕೋಟಿ, ಸಂಗಣ್ಣ ಗಂಜಿಹಾಳ, ರಾಜಕುಮಾರ ಬಾದವಾಡಗಿ, ಶಿವಾನಂದ ಕಂಠಿ, ಮಹಾಂತಪ್ಪ ಪಲ್ಲೇದ, ಶೇಖರಪ್ಪ ಬಾದವಾಡಗಿ, ಬಸವರಾಜ ಗೊಣ್ಣಾಗರ, ರವಿ ಹುಚನೂರ, ಮುತ್ತು ಹುನ್ನಳಿ, ಬಸವರಾಜ ಹೊಸೂರ, ಅಮರೇಶ ನಾಗೂರ, ಶಂಕರಪ್ಪ ತಾಳಿಕೋಟಿ, ಮಹಾಂತೇಶ ಸುಂಕದ, ದೀಪಾ ಸುಂಕದ, ಅನ್ನಪೂರ್ಣಾ ಹೊಸೂರ, ಮಹಾಂತೇಶ ಮದರಿ ಉಪಸ್ಥಿತರಿದ್ದರು.