ಸಂಸ್ಕೃತಿ, ಪರಂಪರೆಯ ಮಹಾನ್ ಚೇತನ ಶಂಕರಾಚಾರ್ಯರು: ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು
ಬಳ್ಳಾರಿ 06: ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಮತ್ತು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಸಂಗನಕಲ್ಲು ರಸ್ತೆಯ ಶೃಂಗೇರಿ ಶ್ರೀ ಶಾರದ ಶಂಕರ ಮಠದಲ್ಲಿ ಆದ್ಯ ಗುರು ಶ್ರೀ ಶಂಕರಚಾರ್ಯರ ಜಯಂತ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಜಯಂತ್ಯೋತ್ಸವಕ್ಕೆ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಆದ್ಯ ಗುರು ಶ್ರೀ ಶಂಕರಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಜ್ಞಾನವೇ ಬೆಳಕು, ಜ್ಞಾನದಿಂದಲೇ ಸಾಕ್ಷಾತ್ಕಾರ, ಜ್ಞಾನದಿಂದಲೇ ಮುಕ್ತಿ ಎಂಬ ಸತ್ಯ ಜಗತ್ತಿಗೆ ಹೇಳಿಕೊಟ್ಟವರು ಶಂಕರರು. "ಆತ್ಮವೇ ಪರಮಾತ್ಮ" ನೆಂಬ ಸತ್ಯ ಮನುಕುಲಕ್ಕೆ ತೋರಿದವರು ಅವರು. ಯಾರು ಸಮಸ್ತ ಸೃಷ್ಟಿಗೆ ಒಳಿತು ಮಾಡುತ್ತಾನೋ ಆತನೇ ಶಂಕರ ಎನ್ನುವ ಮೂಲಕ ಇಡೀ ಮನುಕುಲದ ಶ್ರೇಯಸ್ಸಿನಲ್ಲೇ ಶಂಕರನು ಇದ್ದಾನೆ ಎಂದು ತೋರಿಸಿ ಕೊಟ್ಟ ಗುರುಗಳು ಶಂಕರಾಚಾರ್ಯರು ಎಂದರು.
ಶ್ರೀ ಆದಿ ಶಂಕರಾಚಾರ್ಯ ಅವರು ಮನುಕುಲಕ್ಕೆ ಬೆಳಕು, ಭವ್ಯ ಭಾರತದ ಸನಾತನ ಸಂಸ್ಕೃತಿಯ ಶಕ್ತಿ ಮತ್ತು ನಮ್ಮ ಧರ್ಮ, ನಮ್ಮ ಸಂಸ್ಕೃತಿ, ನಮ್ಮ ಪರಂಪರೆಯ ಮಹಾನ್ ಚೇತನ ಆಗಿದ್ದರು ಮತ್ತು ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಆಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಭಾರತದ 4 ದಿಕ್ಕುಗಳಲ್ಲಿ ಅಂದರೆ ಉತ್ತರದಲ್ಲಿ ಬದರಿ ಪೀಠ, ದಕ್ಷಿಣದಲ್ಲಿ ಶೃಂಗೇರಿ ಪೀಠ, ಪೂರ್ವದಲ್ಲಿ ಪುರಿ ಪೀಠ, ಪಶ್ಚಿಮದಲ್ಲಿ ದ್ವಾರಕಾ ಪೀಠ ಹೀಗೆ 4 ಪೀಠಗಳು ಸ್ಥಾಪಿಸಿದ ಶಂಕರಾಚಾರ್ಯರು, ಅವುಗಳು ಇಂದಿಗೂ ಮನುಕುಲಕ್ಕೆ ಆಧಾರಸ್ತಂಭವಾಗಿ, ಧರ್ಮಜ್ಯೋತಿ, ಜ್ಞಾನಜ್ಯೋತಿಗಳಾಗಿ ಬೆಳಗುತ್ತಿವೆ ಎಂದರು.
ಕೇವಲ 32 ವರ್ಷದ ಅವರ ಜೀವಿತಾವಧಿಯಲ್ಲಿ ಜಾತಿ, ಮತ, ಪಂಥಗಳಿಗೆ ಸೀಮಿತವಾಗದೆ ಇಡೀ ಮನುಕುಲದ ಒಳಿತಿಗೆ ಅವರು ಹಾಕಿಕೊಟ್ಟ ಬುನಾದಿ, ಸೂರ್ಯ-ಚಂದ್ರರು ಇರುವವರೆಗೂ ಮನುಕುಲವನ್ನ ಬೆಳಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನ್ಕುಮಾರ್ ಮಾಲಪಾಟಿ, ಜಿಪಂ ಸಿಇಒ ಲಿಂಗಮೂರ್ತಿ.ಜೆ, ಎಸ್ಪಿ ಸೈದುಲು ಅಡಾವತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ್ ಕೆ.ರಂಗಣ್ಣವರ, ತಹಶೀಲ್ದಾರ ವಿಶ್ವನಾಥ, ಬುಡಾ ಅಧ್ಯಕ್ಷ ಪಾಲನ್ನ, ಎಪಿಎಂಸಿ ಅಧ್ಯಕ್ಷ ಉಮೇಶ್ ಹಾಗೂ ಕಾರ್ೋರೇಟ್ ಸುರೇಖಾ ಮಲ್ಲನಗೌಡ ಸೇರಿದಂತೆ ಸಮುದಾಯದ ಬಾಂಧವರು ಇದ್ದರು.