ಶಮ್ಮಿ ಕಪೂರ್ ಮರೆಯಲಾಗದ 'ವಿಚಿತ್ರ ಮ್ಯಾನರಿಸಮ್'
ಬೆಂಗಳೂರು, ಆಗಸ್ಟ್ 14 : ಬಾಲಿವುಡ್ ಗೆ ಕಪೂರ್ ಖಾನ್ ದಾನ್ ನೀಡಿರುವ ಕೊಡುಗೆ, ಹಾಗೂ ಪಡೆದ ಜನಪ್ರಿಯತೆ ಅಪಾರ. ರಾಜ್ ಕಪೂರ್ ಲವಲವಿಕೆಯ ಅಭಿನಯವನ್ನು ಮೆಚ್ಚಿಕೊಂಡಂತೆಯೇ ಶಮ್ಮಿ ಕಪೂರ್ ನ ವಿಚಿತ್ರ ಮ್ಯಾನರಿಸಂ, ರೊಮ್ಯಾಂಟಿಕ್ ಕೂಡ ರಸಿಕರಿಗೆ ಇಷ್ಟವಾಯಿತು.
ಜಂಗ್ಲಿ ಚಿತ್ರದ 'ಚಾಹೆ ಕೋಯಿ ಮುಝೆ ಜಂಗ್ಲಿ ಕ ಹೆ' ಹಾಡು ನೆನಪಿದೆಯಲ್ಲವೇ? 60ರ ದಶಕದಲ್ಲಿ ತಮ್ಮ ವಿಚಿತ್ರ ಮ್ಯಾನರಿಸಮ್ ನಿಂದ ಜನಮನ ರಂಜಿಸಿ ಶಮ್ಮಿಕಪೂರ್ ಹಾಗೂ ಬೆಳ್ಳಿತೆರೆಯಲ್ಲಿನ ಅವರ ಅಭಿನಯ ಖಂಡಿತಾ ರಸಿಕರ ಹೃದಯದಲ್ಲಿ ಅಜರಾಮರ.
‘ಚಾಹೆ ಕೋಯಿ ಮುಝೆ ಜಂಗ್ಲಿ ಕ ಹೆ...., ಯಾಹೂ...’ ಎಂಬ ಜಂಗ್ಲಿ ಚಿತ್ರದ ಪ್ರಸಿದ್ಧ ಹಾಡನ್ನು ಕೇಳಿದಾಗ, ಹಿಂದಿನ ತಲೆಮಾರಿನ ಚಿತ್ರರಸಿಕರಿಗೆ ಶಮ್ಮಿ ಕಪೂರ್ ನೆನಪಿಗೆ ಬಾರದೇ ಇರಲಾರರು. ಹಿಮದ ರಾಶಿಯಲ್ಲಿ ಉರುಳುತ್ತಾ, ಜಾರುತ್ತಾ ನಾಯಕಿಯನ್ನು ಛೇಡಿಸುವ ರೋಮ್ಯಾಂಟಿಕ್ ಪಾತ್ರಗಳಿಂದ ಯುವಜನತೆಯನ್ನು ಹುಚ್ಚೆಬ್ಬಿಸಿದ್ದರು.
ಸೂಪರ್ ಸ್ಟಾರ್ ಗಳ ಮಧ್ಯೆ . . .
ಪೃಥ್ವಿರಾಜ್ ಕಪೂರ್ ಪುತ್ರನಾದರೂ ಹಿಂದಿ ಚಿತ್ರರಂಗದಲ್ಲಿ ತನಗೊಂದು ವಿಶಿಷ್ಟವಾದ ಸ್ಥಾನವನ್ನು ಸ್ಥಾಪಿಸುವುದು ಶಮ್ಮಿಕಪೂರ್ಗೆ ಅಷ್ಟು ಸುಲಭ ಸಾಧ್ಯವಾಗಿರಲಿಲ್ಲ. ಅದು ದಿಲೀಪ್ ಕುಮಾರ್, ದೇವಾನಂದ್ ರಂತಹ ಘಟಾನುಘಟಿಗಳ ಕಾಲ. ಶಮ್ಮಿಕಪೂರ್ ಸಹೋದರ ರಾಜ್ಕಪೂರ್ ಆ ಕಾಲದ ಸೂಪರ್ಸ್ಟಾರ್ ಮಾತ್ರವಲ್ಲ ಅದ್ದೂರಿ ಚಿತ್ರಗಳ ನಿರ್ಮಾಪಕ ಸಹ ಆಗಿದ್ದರು. ಹಿಂದಿ ಚಿತ್ರರಂಗದಲ್ಲಿ ತಾನೂ ಯಶಸ್ವಿಯಾಗಬೇಕಾದರೆ, ಸೋದರ ರಾಜ್ಕಪೂರ್ಗಿಂತ ಸಾಧ್ಯವಿದ್ದಷ್ಟು ವಿಭಿನ್ನವಾದ ಇಮೇಜ್ ಸ್ಥಾಪಿಸಲೇಬೇಕೆಂಬುದನ್ನು ಶಮ್ಮಿಕಪೂರ್ ಮನಗಂಡಿದ್ದರು.
1931ರ ಅಕ್ಟೋಬರ್ 21ರಂದು ಜನಿಸಿದ ಶಮ್ಮಿ ಕಪೂರ್ ಮೂಲ ಹೆಸರು ಶಮ್ಶೇರ್ ಕಪೂರ್. ಉತ್ತಮ ಗುಣ ಸೌಂದರ್ಯ, ಹಸಿರು ಕಂಗಳು, ಎತ್ತರ, ದೇಹದಾರ್ಢ್ಯ ಕೂಡ ಇವರ ಜನಪ್ರಿಯ ಉತ್ತುಂಗತೆಗೆ ಮತ್ತೊಂದು ಕಾರಣವಾಗಿದ್ದವು.
ಸೂಪರ್ ಸ್ಟಾರ್ ಪಟ್ಟ. . .
1953ರಲ್ಲಿ ಹಿಂದಿ ಚಿತ್ರರಂಗ ಪ್ರವೇಶಿಸಿದ ಶಮ್ಮಿ ಕಪೂರ್ ‘ರೈಲ್ ಕಾ ಡಿಬ್ಬಾ’, ‘ಚೋರ್ ಬಝಾರ್’, ‘ಶರ್ಮಾ ಪರ್ವಾನ’, ‘ಹಮ್ ಸಬ್ ಚೋರ್ ಹೈ’, ‘ಮೇಮ್ ಸಾಬ್’ ಹಾಗೂ ‘ಮಿಸ್ ಕೋಕಾ ಕೋಲಾ’ ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳಿಂದ ನಟಿಸಿದ್ದರಾದರೂ, ಆವ್ಯಾವುದೂ ಅವರಿಗೆ ಹೆಸರನ್ನು ತಂದುಕೊಡುವಲ್ಲಿ ವಿಫಲವಾದವು. ಆದರೆ 1957ರಲ್ಲಿ ತೆರೆಕಂಡ ನಸೀರ್ ಹುಸೇನ್ರ ‘ತುಮ್ಸಾ ನಹೀ ದೇಖಾ’ ಚಿತ್ರದ ಮೂಲಕ ಶಮ್ಮಿಕಪೂರ್ ಯಶಸ್ಸಿನ ರುಚಿಯನ್ನು ಕಂಡರು. ಆ ದಶಕದ ಜನಪ್ರಿಯ ಹಾಲಿವುಡ್ ತಾರೆ ಜೇಮ್ಸ್ ಡೀನ್ ಹಾಗೂ ಪಾಪ್ ಗಾಯಕ ಎಲ್ವಿಸ್ ಪ್ರಿಸ್ಲಿ ಶೈಲಿಯಲ್ಲಿ ಕಪೋಲಕೇಶವನ್ನು ನುಣ್ಣಗೆ ಬೋಳಿಸಿ ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡ ಶಮ್ಮಿ ಕಪೂರ್ ಕೊನೆಗೂ ಹಿಂದಿಚಿತ್ರರಂಗದ ಸೂಪರ್ಸ್ಟಾರ್ ಪಟ್ಟ ಅಲಂಕರಿಸಿದರು.
ಆ ಕಾಲದಲ್ಲಿ ಹಿಂದಿ ಚಿತ್ರರಂಗದ ಅನಭಿಷಕ್ತ ಚಕ್ರವರ್ತಿಗಳೆನಿಸಿದ ರಾಜ್ಕಪೂರ್, ದೇವ್ಆನಂದ್ ಹಾಗೂ ದಿಲೀಪ್ ಕುಮಾರ್ ಸಾಲಿನಲ್ಲಿ ಶಮ್ಮಿ ಕಪೂರ್ ಕೂಡಾ ಸ್ಥಾನ ಗಿಟ್ಟಿಸಿಕೊಂಡರು.
-:ಬಾಳಸಂಗಾತಿಯಾಗಿ ಗೀತಾ ಬಾಲಿ:-
ಶಮ್ಮಿ ಕಪೂರ್ ಅವರು, ಮೊದಲು ಗೀತಾ ಬಾಲಿಯವರನ್ನು ಭೇಟಿಯಾದದ್ದು 1955 ರಲ್ಲಿ. "ರಂಗೀನ್ ರಾತೇ" ಚಿತ್ರೀಕರಣದ ಸಂದರ್ಭದಲ್ಲಿ. ಇವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸಂದರ್ಭದಲ್ಲಿ ಗೀತಾರವರು ಸಣ್ಣ ಪಾತ್ರವೊಂದರಲ್ಲಿ ನಟಿಸುತ್ತಿದ್ದರು. ಅದೇ ಸಂದರ್ಭದಲ್ಲಿ ಅವರಿಬ್ಬರ ಮಧ್ಯೆ ಪ್ರೇಮಾಂಕುರವಾಯಿತು. ಆದರೆ ಗೀತಾರವರು ಶಮ್ಮಿ ಕಪೂರ್ ಇವರಿಗಿಂತ ಒಂದು ವರ್ಷ ದೊಡ್ಡವರಾಗಿದ್ದು ತಂದೆಯೊಂದಿಗೆ ಮತ್ತು ಅಣ್ಣನೊಂದಿಗೆ ನಟಿಸಿದ್ದರು. ಆದ್ದರಿಂದ ಮನೆಯಲ್ಲಿ ಗೀತಾರವರನ್ನು ಮದುವೆಯಾಗಲು ಶಂಕೆ ವ್ಯಕ್ತಪಡಿಸಿದರು. ನಾಲ್ಕು ತಿಂಗಳನಂತರ ಅವರು ಒಬ್ಬರಿಗೊಬ್ಬರು ಭೇಟಿಯಾದಾಗ ಮದುವೆಯಾಗಬೇಕೆಂದು ನಿರ್ಧರಿಸಿದರು. ಮತ್ತು ಮುಂಬೈದಲ್ಲಿರುವ ನೇಪಿಯನ್ ರಸ್ತೆಯಲ್ಲಿರುವ ಬಾನಗಂಗಾ ದೇವಸ್ಥಾನಕ್ಕೆ ಹೋಗಿ ಹರಿವಾಲಿಯಾರವರ ಸಮ್ಮುಖದಲ್ಲಿ ಮದುವೆಯಾದರು. ನಂತರ ತಮ್ಮ ಕುಟುಂಬವರ್ಗದವರಿಗೆ ವಿಷಯವನ್ನು ತಿಳಿಸಿದರು. ಈ ಜೋಡಿಯ ಸುಂದರ ದಾಂಪತ್ಯಕ್ಕೆ ಎರಡು ಮಕ್ಕಳು ಸಾಕ್ಷಿಯಾದವು. ಆದರೆ 1966ರಲ್ಲಿ ‘ತೀಸರಿ ಮಂಜಿಲ್ ‘ ಚಿತ್ರದ ಚಿತ್ರಿಕರಣದ ಸಂದರ್ಭದಲ್ಲಿ ಗೀತಾ ಬಾಲಿ ಸಿಡುಬಿನಿಂದಾಗಿ ಪತಿ ಹಾಗೂ ಮಕ್ಕಳಿಬ್ಬರನ್ನು ಅಗಲಿ ತೀರಿಕೊಂಡರು. ಈ ನೋವೇ 1968 ರ ‘ಬ್ರಹ್ಮಚಾರಿ’ ಚಿತ್ರದಲ್ಲಿ ಮಮ್ತಾಜ್ರ ಜೊತೆಗೆ ಕಪೂರ್ರವರನ್ನು ನಟಿಸಲು ಪ್ರೆರೇಪಿಸಿತು.
-:ಕೊನೆಯ ಚಿತ್ರ ಸ್ಯಾಂಡ್ವಿಚ್:-
ಗೀತಾಬಾಲಿ ಮರಣದ ನಂತರ ಗುಜರಾತಿನ ಬಾವನಗರದ ಉಚ್ಚಕುಟುಂಬದ ನೀಲಾದೇವಿ ಗೋಹಿಲ್ ಎರಡನೇ ಹೆಂಡತಿಯಾದರು. ಬಳಿಕ ರೊಮ್ಯಾಂಟಿಕ್ ಪಾತ್ರಗಳು 1970ರ ದಶಕದ ಜನಪ್ರಿಯ ಚಿತ್ರ ಅಂದಾಜ್ ನೊಂದಿಗೆ ಕೊನೆಗೊಂಡಿತು.
ನಂತರ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು. ಜಂಗ್ಲಿ ಚಿತ್ರದಲ್ಲಿ ತನಗೆ ನಾಯಕಿಯಾಗಿ ನಟಿಸಿದ ಸಾಯಿರಾಬಾನುರವರ ತಂದೆಯಾಗಿ ಜಮೀರ್ ಚಿತ್ರದಲ್ಲಿ ನಟಿಸಿದರು. ಪರ್ವಾರಿಶ್ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ರ ತಂದೆಯಾಗಿ ನಟಿಸಿದರು. 1982 ರಲ್ಲಿ ವಿಧಾತಾ ಚಿತ್ರದ ನಟನೆಗಾಗಿ ಫಿಲ್ಮ್ಫೇರ್ ಉತ್ತಮ ಪೋಷಕ ನಟ ಪ್ರಶಸ್ತಿಗೂ ಭಾಜನರಾದರು. ಆದರೆ ಇವರ ಜನಪ್ರಿಯತೆ 1990ರ ಉತ್ತರಾರ್ಧದನಂತರ ಕುಸಿಯಲಾರಂಭಿಸಿತು. 2005ರಲ್ಲಿ ಇವರ ಕೊನೆಯ ಚಿತ್ರ ಸ್ಯಾಂಡ್ವಿಚ್ ಬಿಡುಗಡೆಯಾಯಿತು.
ಜಂಗ್ಲಿ ಚಿತ್ರದ ಮೂಲಕ ಯಶಸ್ಸಿನ ತುತ್ತತುದಿಗೇರಿ ದಿಲ್ ತೇರಾ ದಿವಾನಾ, ಪ್ರೊಫೆಸರ್, ಚೀನಾ ಟೌನ್, ರಾಜ್ಕುಮಾರ್, ಕಾಶ್ಮೀರ್ ಕಿ ಕಲಿ, ಜಾನ್ವರ್, ತೀಸ್ರಿ ಮಂಝಿಲ್ ಮತ್ತು ಆ್ಯನ್ ಇವ್ನಿಂಗ್ ಇನ್ ಪ್ಯಾರಿಸ್ ಮೊದಲಾದ ಚಿತ್ರಗಳ ಮೂಲಕ ಭಾರಿ ಜನಪ್ರಿಯತೆಯನ್ನು ಪಡೆದ ಶಮ್ಮಿ ಕಪೂರ್ 2011ರ ಆಗಸ್ಟ್14ರಂದು ಇಹಲೋಕವನ್ನಗಲಿದರು. ಅಗಲಿಕೆಗೆ ದಶಕ ಉರುಳಿದ ಈ ಸಂದರ್ಭದಲ್ಲಿ ಅವರನ್ನು ಸ್ಮರಿಸುವುದೇ ನಿಜವಾದ ಶ್ರದ್ಧಾಂಜಲಿ.. . .ಅಲ್ಲವೇ?