ಲೇಖನಗಳು

ಏಳು ಸುತ್ತಿನ ಕೋಟೆಯ “ಕಿಲ್ಲಾ ತೊರಗಲ್ಲ”

ಏಳು ಸುತ್ತಿನ ಕೋಟೆಯ “ಕಿಲ್ಲಾ ತೊರಗಲ್ಲ”

ವಿಶ್ವದ ಅತ್ಯಂತ ಸುಂದರ ದೇಶಗಳಲ್ಲೊಂದಾದ ಭಾರತ ಐದು ಸಾವಿರ ವರ್ಷಗಳಿಗೂ ಹಿಂದಿನ ಪುರಾತನ ಸಂಸ್ಕೃತಿಯನ್ನು ಹೊಂದಿರುವ ದೇಶ. ಇಲ್ಲಿನ ಪರ್ವತ, ಮರಳುನಾಡು, ಸಮುದ್ರ ತೀರಗಳು, ನದಿಗಳು, ಓಗು ಪ್ರದೇಶಗಳು, ಕಾಡು, ಅರಣ್ಯ ಪ್ರದೇಶಗಳು ಮತ್ತು ನೈಸರ್ಗಿಕ ಪರಿಸರದಿಂದಾಗಿ ಈ ದೇಶ ಜಗತ್ತಿನಲ್ಲಿಯೇ ಒಂದು ಅನನ್ಯ ಸ್ಥಾನ ಪಡೆದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಸಂಸ್ಥಾನಗಳನ್ನು ಅವುಗಳೊಂದಿಗೆ ಹಲವಾರು ಭಾಷೆ-ಸಂಸ್ಕೃತಿ, ಧರ್ಮಾಚರಣೆಗಳಿಂದ ಕೂಡಿತ್ತು. ಈಗಲೂ ಕೂಡ ಸಾಮರಸ್ಯದಿಂದ ತುಂಬಿಕೊಂಡಿದೆ. ಭಾರತದ ಅನೇಕಾನೇಕ ಸಂಸ್ಥಾನಗಳು ನಿಜವಾಗಲೂ ಪ್ರವಾಸೀ ಆಕರ್ಷಣೆಗಳನ್ನು ಹೊಂದಿವೆ. ಆದರೆ ದುರದೃಷ್ಟವಷಾತ ಬಹುಪಾಲು ಪ್ರವಾಸಿಗರಿಗೆ ಅವು ಅಪರಿಚಿತವಾಗಿ ಉಳಿದಿವೆ. ಅನಾದಿ ಕಾಲದಿಂದಲೂ ಭಾರತದ ಆಳರಸರು ವಿವಿಧ ಸ್ಥಳಗಳಲ್ಲಿ ವೈಭವದ ಅರಮನೆಗಳು, ಭವ್ಯವಾದ ದೇವಾಲಯಗಳು, ಬೃಹತ್ ಕೋಟೆ-ಕೊತ್ತಲುಗಳು, ಸಮಾಧಿಗಳು, ಸ್ಮಾರಕಗಳು ಇತ್ಯಾದಿ ನಿರ್ಮಿಸಿದ್ದಾರೆ, ಈ ಎಲ್ಲ ಕಟ್ಟಡಗಳು ಅವರ ಸಾಂಸ್ಕ್ರತಿಕ ಭಾವನೆಗಳ ಆಳವನ್ನು ಪ್ರತಿಬಿಂಬಿಸುತ್ತಿವೆ. ಈ ಸ್ಮಾರಕಗಳು ಈಗಲೂ ಕೂಡ ದೇಶದ ಶ್ರೀಮಂತ ಪರಂಪರೆಯ ಹಾಗೂ ಪೂರ್ವಜರ ಕಲಾಪ್ರತಿಭೆಯ ದ್ಯೋತಕವಾಗಿ ಉಳಿದುಕೊಂಡಿವೆ. ಇವುಗಳ ನಿರ್ಮಾಣದಲ್ಲಿ ಕಂಡುಬರುವ ವೈವಿಧ್ಯರೋಚಕವಾಗಿದೆ. ಭವ್ಯತೆ ನೋಡುಗರನ್ನು ಮಂತ್ರ ಮುಗ್ದರನ್ನಾಗಿಸುತ್ತದೆ. ಭಾರತದ ಸಾಂಸ್ಕೃತಿಕ ಪರಂಪರೆಯ ಸೌಂದರ್ಯ ಮತ್ತು ಪ್ರಾಕೃತಿಕ ಕೊಡುಗೆಯ ಸಿರಿವಂತಿಕೆಯಿಂದಾಗಿಯೇ ಭಾರತ ಇಂದು ಪ್ರವಾಸಿಗರ ಸ್ವರ್ಗವೆನಿಸಿದೆ. 

ನಮ್ಮ ಘನವಾದ ಪರಂಪರೆಯ ಸಂಕೇತವಾಗಿರುವ ಸಹಸ್ರಾರು ಸ್ಥಳಗಳು ನಮ್ಮ ದೇಶದಲ್ಲಿವೆ. ಈ ಅಮೂಲ್ಯ ಸ್ಮಾರಕಗಳ, ಕೋಟೆ-ಕೊತ್ತಲುಗಳ, ಜೀರ್ಣೋದ್ದಾರ ಹಾಗೂ ಸಂರಕ್ಷಣೆಯೂ ಸೇರಿದಂತೆ ಈ ಎಲ್ಲ ಸ್ಥಳಗಳಲ್ಲಿ ಸುಧಾರಣೆಗೆ ಹಂತ ಹಂತವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ. ಇಂದಿನ ಸರಕಾರ ಇಂಥ ಪ್ರವಾಸೀ ಯೋಗ್ಯ ತಾಣಗಳನ್ನು ಹುಡುಕಿ ಪರಿಚಿಯಿಸುವಲ್ಲಿ ಹಲವಾರು ಕ್ರಮ ಕೈಗೊಳ್ಳುತ್ತಿದೆ. ಆದರೆ ಆ ಕ್ರಮ ಸಾವಧಾನವಾದರೆ ಆ ವೇಳೆಗಾಗಲೇ ಈಗಲೇ ಶಿಥಿಲಾವಸ್ಥೆಯಲ್ಲಿರುವ ಅನೇಕಾನೇಕ ಅವಶೇಷಗಳು ಕಾಲಗರ್ಭದೊಳಗೆ ಸೇರಿಕೊಳ್ಳುತ್ತವೆ. ಅಂಥದೇ ಅದ ಪ್ರಚಾರ ಸಿಗದ ಐತಿಹಾಸಿಕ ತಾಣಗಳಲ್ಲಿ ಈ ಕಿಲ್ಲಾ ತೊರಗಲ್ಲವೂ ಒಂದು. ಮೇಲ್ನೋಟಕ್ಕೆ ಎದ್ದು ತೋರುವ ಬಂಡೆಗಲ್ಲುಗಳಿಂದಲೇ ಕೂಡಿರುವ ಈ ತೊರಗಲ್ಲ ಗ್ರಾಮವು ರಾಮದುರ್ಗ-ಬೆಳಗಾವಿ ಮುಖ್ಯರಸ್ತೆಗೆ ಹೊಂದಿಕೊಂಡು ರಾಮದುರ್ಗದಿಂದ ಸುಮಾರು 11 ಕಿ.ಮಿ. ಅಂತರದಲ್ಲಿದೆ. ಸುಂದರವಾದ ಪ್ರವಾಸೀ ತಾಣಕ್ಕೆ ಮತ್ತು ಐತಿಹಾಸಿಕ ಸ್ಥಳಕ್ಕೆ ಬೇಕಾಗುವ ರಮ್ಯ ನಿಸರ್ಗ, ಸ್ವಚ್ಛಂದ, ನಿಶ್ಯಬ್ದತೆ, ನಿರ್ಮಲತೆ, ಹಾಗೂ ಕೋಟೆ-ಕೊತ್ತಲುಗಳು, ಪುರಾತನ ಸ್ಮಾರಕ ದೇಗುಲ-ಮಸೀದಿಗಳು, ಆಶ್ರಮಗಳು. ಈ ತೋರಗಲ್ಲಕ್ಕೆ ಇತಿಹಾಸ ನೀಡಿರುವ ಒಂದು ಅಮೂಲ್ಯ ಆಸ್ತಿ. 

ಬಂಡೆಗಲ್ಲುಗಳ ಮೇಲೇರಿ ಕೆಳಗಿಳಿಯುತ್ತ ಬದಿಯ ಬಂಡೆಗಳೊಡನೆ ಚಿನ್ನಾಟವನ್ನಾಡುತ್ತ ಮಲಪ್ರಭೆಯು ತೊರಗಲ್ಲದ ಕೋಟೆ-ಕೊತ್ತಲುಗಳನ್ನು ಸುತ್ತಿ ಬಳಿಸಿ ಉತ್ತರಾಭಿಮುಖವಾಗಿ ಹರಿದು ಮುಂದೆ ಸಾಗಿದ್ದಾಳೆ. ಅವಳ ಈ ಆಟವನ್ನು ನೋಡುತ್ತ ಶತ-ಶತಮಾನಗಳಿಂದ ಕೋಟೆಗಳು ಗಂಭೀರವಾಗಿ ಆಗಸಕ್ಕೇರಿ ನಿಂತಿವೆ. ಅಲ್ಲಲ್ಲಿ ಕೆಲವಡೆ ಕಾಲಿನ ತುಳಿತಕ್ಕೆ  ಒಳಗಾಗಿ ಬಿರುಕು ಬಿಟ್ಟಿವೆ. ನೆಲಕ್ಕುರುಳಿವೆ. 

ಹಿಂದೂ-ಮುಸ್ಲಿಂ-ಜೈನ-ಮರಾಠಾ ಹೀಗೆ ಅನೇಕ ರಾಜರುಗಳಾಗಿ ಹೋದರೂ ಜಾಸಾಮರಸ್ಯವನ್ನು ಕಾಪಾಡಿಕೊಂಡು ಬಂದಿರುವ ತೊರಗಲ್ಲ ಕಿಲ್ಲಾ. ಒಂದು ಕಾಲದಲ್ಲಿ ಐವತ್ತು ಸಾವಿರಕ್ಕೂ ಮಿಕ್ಕಿ ಜನಸಂಖ್ಯೆಯನ್ನು ಕೊಲ್ಲಾಪೂರ ರಾಜ್ಯದ ಅತಿದೊಡ್ಡ ಸಂಸ್ಥಾನವಾಗಿದ್ದಾಗ ಹೊಂದಿತ್ತು. ಏಳು ಸುತ್ತಿನ ಕೋಟೆಯು ಇಂದು ಅಲ್ಲಲ್ಲಿ ಸರಿದು ಒಳಗಿನ ಜನ ಪಲಾಯಣ ಮಾಡಿದ್ದರಿಂದಾಗಿ, ಇಂದು ಈ ಗ್ರಾಮದಲ್ಲಿ ಸುಮಾರು ಸಾವಿರದಷ್ಟೇ ಮಾತ್ರವೇಜನ ಸಂಖ್ಯೆಯಿದೆ. ಆದರೂ ಶತಮಾನಗಳ ಹಿಂದಿನ ಸಾಮರಸ್ಯ, ನೆಮ್ಮದಿ, ಭಾವ್ಯೆಕ್ಯತೆ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. 

ಪುರಾಣ ಕಾಲದಲ್ಲಿ ಋಷಿಗಳ ಋಷಿಗಳೆನಿಸಿದ್ದ ಶ್ರೀ ವಶಿಷ್ಟ ಮಹರ್ಷಿಗಳು ಈ ಸ್ಥಾನಕ್ಕೆ ಆಗಮಿಸಿ ಇಲ್ಲಿನ ಪ್ರಶಾಂತತೆಗೆ ಮನಸೋತು ತಮ್ಮ ಶಿಷ್ಯ ವೃಂದದೊಂದಿಗೆ ಮಲಪ್ರಭೆಯ ದಡದೊಳಗೆ ತಮ್ಮತಪಸ್ಸು ಮಾಡಿದರು. ಇಂದಿಗೂ ಆಸ್ಥಳ ತನ್ನ ಪವಿತ್ರತೆ ನಿಸರ್ಗದತ್ತ ಸೌಂದರ್ಯ, ನಿರ್ಮಲತೆ ಹಾಗೂ ಏಕಾಂತತೆಯ ಕಾಯ್ದುಕೊಂಡು ಒಂದು ‘ವಶಿಷ್ಟಾಶ್ರಮ’- ವೆಂದೇ ಹೆಗ್ಗಳಿಕೆ ಹೊಂದಿದೆ. 

ತೊರಗಲ್ಲದ ಸಮಗ್ರ ಇತಿಹಾಸವನ್ನು ಒದಗಿಸುವ ಯಾವುದೇ ಶಾಸನ ಅಥವಾ ಗ್ರಂಥಗಳು ನಮಗೆ ದೊರೆಯದಿದ್ದರೂ ಅಲ್ಲಲ್ಲಿ ದೊರೆಯುವ ಕೆಲವು ಮಾಹಿತಿಗಳಿಂದ ಅನೇಕ ವಿಷಯಗಳು ತಿಳಿದುಬರುತ್ತವೆ. ಅವುಗಳಲ್ಲಿ ಮುಖ್ಯವಾದವು. ಪ್ರಚಂಡಕೋಟೆಯ ನಿರ್ಮಾಣ ಹಾಗೂ ತೊರಗಲ್ಲದ ಮುಕುಟದಂತಿರುವ ಪುರಾತನ ಶ್ರೀ ಭೂತನಾಥ ದೇವಾಲಯ ನಿರ್ಮಾಣ. 

ಪ್ರಾಚೀನ ಕಾಲದಲ್ಲಿ ಇಂದಿನ ತೊರಗಲ್ಲ ‘ದುಹಾಡಪುರ’ ಎಂದು ಪ್ರಚಲಿತವಾಗಿತ್ತೆಂದು ತಿಳಿದುಬರುತ್ತದೆ. ಕ್ರಿ.ಶ 12ನೆಯ ಶತಮಾನದಲ್ಲಿ ಭೂತಂಕುಶನೆಂಬ ಒಬ್ಬ ರಾಜ ಈ ಪ್ರದೇಶವನ್ನು ಗೆದ್ದುಕೊಂಡು, ಇಲ್ಲಿನ ಪ್ರಶಾಂತತೆಗೆ ಹಾಗೂ ರಮ್ಯ ನಿಸರ್ಗ ಮತ್ತು ಪವಿತ್ರತೆ ಅವನ ಮನಸ್ಸು ಸೊರೆಗೊಂಡಂತೆ ಕಾಣುತ್ತದೆ. ಮುಂದೆ ಅವನೆ ಈ ದುಹಾಡಪುರಕ್ಕೆ ಏಳು ಸುತ್ತಿನಕೋಟೆ (ಏಳು ಅಗಸೆ ಬಾಗಿಲು ಒಳಗೊಂಡು) ಕಟ್ಟಿಸಿದ. ಅಲ್ಲದೇ ಕ್ರಿ.ಶ. 1184ರಲ್ಲಿ ಗ್ರಾಮದೊಳಗೆ ಒಂದು ಭವ್ಯವಾದ ಶಿಲ್ಪಕಲಾ ವೈಭವ ಹೊಂದಿರುವ ಭೂತನಾಥ ದೇವಾಲಯ ಕಟ್ಟಿಸಿದ. 

ಭೂತನಾಥ ದೇವಾಲಯ ಒಂದು ವಿಶಿಷ್ಟ ಶಿಲ್ಪಕಲಾ ಕೌಶಲ್ಯವನ್ನು ತೋರುವ ದೇವಾಲಯ. ಇದು ವಿಜಾಪುರದ ವಾಸ್ತು ಶಿಲ್ಪವನ್ನು ಹೊಂದಿದ ಚಾಲುಕ್ಯರ ಶಿಲ್ಪಕಲೆಯನ್ನು ಹೋಲುವ ಭವ್ಯ ಕಟ್ಟಡ. ಭವ್ಯವಾದ ಮಹಾದ್ವಾರವನ್ನು ದಾಟಿ ಒಳ ಬಂದೊಡನೆ ಕಾಣುವ ವಿಶಾಲವಾದ ಪ್ರಾಂಗಣ, ಮಧ್ಯದೊಳಗೆ ಗರ್ಭಗುಡಿಗೆದುರು 12 ಕಂಬಗಳ ವಿಸ್ತಾರದ ಒಂದು ನವರಂಗ, ಬಲ ಭಾಗದಲ್ಲಿ ‘ಗಣೇಶನಗುಡಿ’. ಮತ್ತೇ ಒಂದು ‘ದೇವಿಯಮಂದಿರ’ ಹಾಗೂ 40 ಕಂಬಗಳನ್ನು, ಸುಖಾಸನಗಳನ್ನೂ ಹೊಂದಿರುವ ಸಭಾ ಮಂಟಪವಿದೆ. 

ಭೂತನಾಥನು ಮಂದಿರವಲ್ಲದೇ, ಪ್ರಾಚೀನ ಕಾಲದ ಸಾಂಬನಗುಡಿ, ವಿಠ್ಠಲ ಮಂದಿರ, ಕಲ್ಹಾರಿ ಮಹಾಂತೇಶ್ವರ ಮಠ, ರೇಣುಕಾಯಲ್ಲಮ್ಮನ ಗುಡಿ, ರಾಚನ್ನ ದೇವರು, ಪಂಚಲಿಂಗೇಶ್ವರ ದೇವಸ್ಥಾನ, ಸಂಗಮನಾಥ ದೇವಾಲಯ, ಪವಾಡಿ ಬಸವೇಶ್ವರ ದೇವಾಲಯ, ನಾರಾಯಣ ದೇವರಗುಡಿ, ಜಲಾಲಗಿರಿ ಬಾವಾನ ಗದ್ದುಗೆ 15ನೇಯ ಶತಮಾನದ ತೊರಗಲ್ಲ ಪಟ್ಟದೇವರ ಗಚ್ಚಿನ ಹಿರೇಮಠ, ದತ್ತಾತ್ರೇಯ ಗುಡಿ, ವೆಂಕಟೇಶ್ವರ ದೇವಸ್ಥಾನ, ಶೆಟ್ಟೆಮ್ಮನ ಗುಡಿ ಹಾಗೂ ಇತ್ತೀಚಿನ ಶ್ರೀ ದುರ್ಗಾದೇವಿಯ ದೇವಸ್ಥಾನಗಳು ತೊರಗಲ್ಲಕ್ಕಿರುವ ಆಸ್ತಿಗಳಾಗಿವೆ. 

ಇಷ್ಟು ಮಾತ್ರವಲ್ಲದೇ ಮುಸ್ಲಿಂ ಧರ್ಮದವರ ಜಾಪರಷಾವಲಯವರ ಮಸೀದಿ, ಲಾಕ್‌ದಿನ್ ದಿವಾನ ಜಿಂದೇ ಮದಾರ ಶಾವಲಿಯರ ಮಸೀದಿ, 17ನೇಯ ಶತಮಾನದಲ್ಲಿ ವಿಜಾಪುರದ ಆಳರಸ ಅಲಿ ಆದಿಲ್‌ಶಾಹಿ ಕಟ್ಟಿಸಿದ ವೈಷ್ಟಿಮಯ ಜಾಮೀಯಾ ಮಸೀದಿಗಳು ಇಲ್ಲಿವೆ. ಹೀಗೆ ರಮ್ಯ ನಿಸರ್ಗ, ಪ್ರಬಲ ಇತಿಹಾಸದ ಈ ತೊರಗಲ್ಲ ಗ್ರಾಮ ಸಂಸ್ಥಾನಿಕರಿದ್ದಾಗ ಇನ್ನೂ ಹೆಚ್ಚಿನ ಪ್ರಚಾರಕ್ಕೆ ಇತ್ತು. ಆದರೆ ಸ್ವಾತಂತ್ರ್ಯ ನಂತರ ದೇಶದಲ್ಲಿನ ಆಳರಸರ ಆಳ್ವಿಕೆಯು ಕೊನೆಗೊಂಡು ಸಂಸ್ಥಾನಗಳು ವೀಲೀನಗೊಂಡಾಗ ಇಲ್ಲಿನ ಮರಾಠಾ ಅರಸರಾದ ಶ್ರೀಮಂತ ನರಸೋಜಿರಾವ್ ಶಿಂಧೆ ಮಹಾರಾಜರು ಕೂಡ ಸಂಸ್ಥಾನವನ್ನು ದೇಶಕ್ಕೆ ಅರ​‍್ಿಸಿದರು. 

ಸರಕಾರ ಕಣ್ಣು ತೆರೆದರೆ ಈ ಸ್ಥಳ ಮತ್ತೆ ಹಿಂದಿನ ವೈಭವ ಮರುಕಳಿಸಿ ನಂದನವನವಾಗುತ್ತದೆ. ಈಗಲೇ ಶಿಥಿಲಾವಸ್ಥೆ ತಲುಪಿರುವ ಐತಿಹಾಸಿಕ ಸ್ಮಾರಕಗಳಾದ ಇಲ್ಲಿನ ಬೃಹದಾಕಾರದ ಕೋಟೆ-ಕೊತ್ತಲು, ಬತೇರಿಗಳು, ಊರ ಅಗಸೆಯ 7 ಬಾಗಿಲುಗಳು ಅರಮನೆಗಳ ಅನೇಕ ಅವಶೇಷಗಳು ಕಾಲ ಗರ್ಭದೊಳು ಸೇರಿ ಮಣ್ಣ ಮುಕ್ಕುವ ಮೊದಲೇ ತಡೆದು ಸಂರಕ್ಷಿಸಿದರೆ ನಮ್ಮ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಿತು. ವೈಭವ ಪಡುವುದಾಗದಿದ್ದರೂ ಗತ ವೈಭವವನ್ನಾದರೂ ಉಳಿಸೋಣವೆ? ದೇಶದ ಎಲ್ಲೆಡೆಗಳಲ್ಲಿ ರೋದಿಸುವ ಇಂಥ ಅದೆಷ್ಟೋ ತೋರಗಲ್ಲಗಳು ಸರಕಾರದ ಪಂಚತಾರಾ ಬಿಳಿಯಾನೆಗಳಿಗೆ ಕಾಣಿಸುವವೇ? ಕಂಡರೆ ಇಲ್ಲಿನ ಶಿಲಾಬಾಲಿಕೆಯರು ನರ್ತಿಸುತ್ತಾರೆ, ಶಿಲ್ಪಗಳು ಮೌನ ಮುರಿದು ಮಾತನಾಡುತ್ತವೆ. ಇಲ್ಲವಾದರೆ ಮುಂದಿನ ಪೀಳಿಗೆ ನಮ್ಮನ್ನು ಖಂಡಿತಾ ಶಪಿಸುತ್ತದೆ. 

- ಮಹಾಂತೇಶ ಬ. ಶಿದ್ದಿಭಾವಿ 

ರಾಮದುರ್ಗ 

- * * * -  

                           



ಸುದ್ದಿ ಓದಿ