ಅಧಿಕಾರವಲ್ಲ, ಜನರ ಸೇವೆ ಮುಖ್ಯ: ಶಾಸಕ ರಾಜುಗೌಡ
ತಾಳಿಕೋಟಿ 24: ಜನಪ್ರತಿನಿಧಿ ಗಳಾದವರಿಗೆ ಯಾವತ್ತೂ ಅಧಿಕಾರ ಮುಖ್ಯವಾಗಬಾರದು ಅಧಿಕಾರವೆಂಬದು ಜನರ ಸೇವೆಗಾಗಿ ಸಿಕ್ಕ ಅವಕಾಶ ಮಾತ್ರ ಯಾರು ಅದನ್ನು ಸದ್ಬಳಕೆ ಮಾಡಿಕೊಂಡು ಜನರ ಸೇವೆಯನ್ನು ಮಾಡುತ್ತಾರೆ ಜನ ಅಂತವರನ್ನು ಸದಾ ಸ್ಮರಿಸುತ್ತಾರೆ ಎಂದು ದೇವರ ಹಿಪ್ಪರಗಿ ಶಾಸಕ ರಾಜು ಗೌಡ ಪಾಟೀಲ( ಕು. ಸಾಲವಾಡಗಿ) ಹೇಳಿದರು.
ತಾಳಿಕೋಟಿ ತಾಲೂಕಿನ ದೇವರ ಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಕೆಸರಟ್ಟಿ ಗ್ರಾಮದಲ್ಲಿ ಸುಮಾರು 106 ಲಕ್ಷ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ನಂತರ ಗ್ರಾಮಸ್ಥರು ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾನು ಶಾಸಕನಾಗಿ ಇನ್ನೂ ಕೇವಲ ಆರು ತಿಂಗಳಾಗುತ್ತಿವೆ ಈಗಾಗಲೇ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳ ಕುರಿತು ಸಮಗ್ರ ವರದಿಯನ್ನು ಪಡೆದಿದ್ದೇನೆ ಇದಕ್ಕಾಗಿ ಕ್ರಿಯಾಯೋಜನೆ ರೂಪಿಸಿ ಅನುದಾನ ಬಿಡುಗಡೆಯಾದ ನಂತರ ಕೆಲಸ ಆರಂಭಿಸುತ್ತೇನೆ. ಈಗಾಗಲೇ ಕ್ಷೇತ್ರದಲ್ಲಿ ಕೆಲವು ಕಾಮಗಾರಿಗಳು ಆರಂಭವಾಗಿವೆ. ಅನುದಾನದ ಕೊರತೆ ಇದೆ ನಮ್ಮ ಪಕ್ಷದ ಸರ್ಕಾರ ರಾಜ್ಯದಲ್ಲಿ ಇಲ್ಲ ತಾವೆಲ್ಲರೂ ಈ ನಿಟ್ಟಿನಲ್ಲಿ ನನಗೆ ಸಹಕರಿಸಬೇಕು. ನಿಮ್ಮ ಮಧ್ಯದಲ್ಲಿ ಇದ್ದುಕೊಂಡೇ ಶಕ್ತಿಮೀರಿ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ ಈ ಕ್ಷೇತ್ರ ಒಂದು ಮಾದರಿ ಕ್ಷೇತ್ರವನ್ನಾಗಿ ಮಾಡುವುದು ನನ್ನ ಆಸೆಯಾಗಿದೆ ಇದು ಸಾಧ್ಯವಾಗಬೇಕಾದರೆ ನನಗೆ ನಿಮ್ಮೆಲ್ಲರ ಆಶೀರ್ವಾದ ಮತ್ತು ಸಹಕಾರ ಬೇಕು ಎಂದರು.
ಈ ಸಮಯದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಹುಸೇನ ಸಾಬ ಕೋಲಾಪೂರ, ಸದಸ್ಯರಾದ ಬಾಬು ಚೌಹಾಣ, ಗಣ್ಯರಾದ ಬಸನಗೌಡ ರಾಮು ಗಾಣೂರ. ಅಲಿ ಮಕಾನದಾರ, ಬಾಬು ಗೌಡ, ಎಂ ಸೋಲಾಪುರ, ಮಡಿವಾಳಪ್ಪ ನಾಯ್ಕೋಡಿ, ಗುತ್ತಿಗೆದಾರ ಬಿ.ಎಸ್. ಪಾಟೀಲ, ಅಭಿಯಂತರ ಹಿಕ್ಕನಗುತ್ತಿ, ಲಾಲ ಸಾಬ ನಾಯ್ಕೋಡಿ ಮತ್ತಿತರರು ಇದ್ದರು.