ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ
ಲೋಕದರ್ಶನ ವರದಿ
ಬಳ್ಳಾರಿ,ಫೆ. 10: ಜೀತಕ್ಕಾಗಿ ವ್ಯಕ್ತಿ ಹಾಗೂ ಮಕ್ಕಳನ್ನು ದುಡಿಸಿಕೊಳ್ಳುವುದು ಅಮಾನವೀಯ ಮತ್ತು ಕ್ರಿಮಿನಲ್ ಅಪರಾಧ ಎಂದು ತಹಶೀಲ್ದಾರ ವೆಂಕಟೇಶ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಬಾಲಕಾರ್ಮಿಕ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ಸ್ವೀಕರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಅಲ್ಲಲ್ಲಿ ಜೀತಕಾರ್ಮಿಕ ಪದ್ಧತಿ ಪ್ರಕರಣಗಳು ಕಂಡುಬರುತ್ತಿವೆ. ಸಾರ್ವಜನಿಕರಲ್ಲಿ ಈ ಪದ್ಧತಿ ಕುರಿತು ಹೆಚ್ಚು ಅರಿವು ಮೂಡಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಫೆ.9 ರಂದು ಸರ್ಕಾರವು ಜೀತ ಪದ್ಧತಿ ನಿರ್ಮೂಲನಾ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾಗೆ ತಹಶೀಲ್ದಾರ ವೆಂಕಟೇಶ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು. ಜಾಥಾವು ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಆರಂಭವಾಗಿ ರಾಯಲ್ ವೃತ್ತದ ಮೂಲಕ ಮರಳಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು. ಜಾಥಾದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು ಜೀತ ಪದ್ಧತಿಯ ಕುರಿತು ಘೋಷವಾಕ್ಯಗಳನ್ನು ಪ್ರದರ್ಶಿಸಿದ್ದು, ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾವಾರು ಜೀತ ಕಾರ್ಮಿಕರ ಮಾಹಿತಿಯನ್ನೊಳಗೊಂಡ ವರದಿಯನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ಷಾ ಅಲ್ತಾಫ್ ಅಹಮ್ಮದ್, ಬಾಲಾ ಕಾರ್ಮಿಕ ಯೋಜನಾ ನಿರ್ದೇಶಕ ಮೌನೇಶ್, ಸಿಬ್ಬಂದಿಗಳಾದ ಶಿವರಾಜ ಸೇರಿದಂತೆ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿಯವರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.