ಲೇಖನಗಳು

ಹಿರಿಯ ಚೇತನ, ಸಮಾಜ ಮುಖಿ ಚಿಂತನೆಯ ಪತ್ರಕರ್ತ ಎಂ ಸಾಧೀಕ ಅಲಿ....

ಹಿರಿಯ ಚೇತನ, ಸಮಾಜ ಮುಖಿ ಚಿಂತನೆಯ ಪತ್ರಕರ್ತ ಎಂ ಸಾಧೀಕ ಅಲಿ....

ಪತ್ರಕರ್ತನೆಂದರೆ ಸದಾ ಸಮಾಜದ ಒಳಿತಿಗಾಗಿ ತುಡಿಯುವ ಹುಮ್ಮಸ್ಸು, ಪತ್ರಕರ್ತನೆಂದರೆ ಸದಾ ನೊಂದವರ ಬದುಕಿಗೆ ನೆರವಾಗುವ ಮನಸ್ಸು, ಪತ್ರಕರ್ತನಾದವನು ತನ್ನೊಡಲಲ್ಲಿ ನೂರು ನೋವನಿಟ್ಟುಕೊಂಡರೂ ಪರರ ನೋವಿಗೆ ಸ್ಪಧಿಸುವ, ಪರರ ನೋವು ತನ್ನ ನೋವೇನೋ ಎಂದು ಪರಿಭಾವಿಸಿ ತೀರ ಅವರ ತಾಕಲಾಟಕ್ಕೆ ನೆರವಾಗುವದಿದೆಯಲ್ಲ? ಅಂಥದ್ದೊಂದು ಮಾನವೀಯ ಗುಣ ನಿಜ ಪತ್ರಕರ್ತನಿಗೆ ಮಾತ್ರ ಸಾಧ್ಯವಾಗುತ್ತದೆ ನೋಡಿ? ಅಂಥ ಸಾಧ್ಯತೆಗಳನ್ನು ನಿಜಗೊಳಿಸಿ ಪರರ ಸಂಕಷ್ಟಕ್ಕೆ ನೆರವಾದವರು ನಮ್ಮ ನಡುವಿನ ಹಿರಿಯ ಪತ್ರಕರ್ತ ಎಂ ಸಾಧೀಕ ಅಲಿ ಅವರು! 

ಪತ್ರಕರ್ತ ಎಂ ಸಾಧೀಕ ಅಲಿ ಅವರು ವರದಿಗಾರಿಕೆಯನ್ನು ಕರಗತ ಮಾಡಿಕೊಂಡವರು,ಉರ್ದು ಭಾಷೆಯ ಶಿಕ್ಷಣವನ್ನು ಬಿ ಎಡ್ ವರೆಗೂ ಪೂರೈಸಿ ಉರ್ದು  ಸಾಹಿತ್ಯದಲ್ಲಿ  ಅಪಾರವಾದ ಜ್ಞಾನ ಸಂಪತ್ತನ್ನು ಸಂಪಾದಿಸಿಕೊಂಡಿದ್ದರೂ, ಸಂಪನ್ನ ವಿದ್ಯಾವಂತರಾಗಿದ್ದರೂ, ಅವರು ಆಯ್ಕೆ ಮಾಡಿಕೊಂಡಿದ್ದು  ಕನ್ನಡ ಭಾಷೆಯನ್ನು ಮತ್ತು ಸಾಹಿತ್ಯದ ಆಪ್ತತೆಯ ಅಗಾಧತೆಯನ್ನು ಎನ್ನುವುದು ಪತ್ರಕರ್ತ ನಾದ ನನ್ನಂಥ ನನಗೆ ಅಚ್ಚರಿ ಎನಿಸಿದೆ ಇರದು! 

ಪತ್ರಕರ್ತರಾದವರು  ಸದಾ ಸಮಾಜ ಮುಖಿಯಾಗಿರಬೇಕು ಎನ್ನುವ ಧ್ಯೇಯ ವಾಕ್ಯವನ್ನು ಸೂಕ್ಷ್ಮವಾಗಿ ಅನುಕರಿಸುತ್ತಿರುವ ಕೊಪ್ಪಳದ ಬರಹಗಾರರಲ್ಲೊಬ್ಬರಾಗಿರುವ ಎಂ ಸಾಧೀಕ ಅಲಿ ಅವರು ಚೇತನ ಶೀಲರೂ ಹೌದು..!  

ಎಂ. ಸಾಧೀಕ ಅಲಿ ಅವರ ತಂದೆ  ಎಂ. ಉಸ್ಮಾನ್ ಅಲಿ, ತಾಯಿ  ತಾಜ್‌ಬೀ. ಆಗಷ್ಟ್‌ 23, 1963 ರಂದು ಕೊಪ್ಪಳದಲ್ಲಿ ಜನಿಸಿದ ಇವರು ಬಿ.ಎ., ಬಿ.ಇಡಿ. ಹಿಂದಿ ಭಾಷೆಯಲ್ಲಿ ಉತ್ತೀರ್ಣರಾಗಿದ್ದರೂ,  ಸಿಹಿ ಜೇನಿನಂಥ ಅಚ್ಚ ಕನ್ನಡ ಭಾಷಾ ಪ್ರೇಮಿಗಳು. ಅಂತೆಯೇ ಅವರು ಆಯ್ಕೆ ಮಾಡಿಕೊಂಡಿದ್ದು ಕನ್ನಡ ಭಾಷೆಯ ಪತ್ರಿಕೋದ್ಯಮ ಎನ್ನುವುದು ಗಮನಾರ್ಹ ಸಂಗತಿ.  

ನಾಲ್ಕಕ್ಷರ ಇಂಗ್ಲಿಷ್ ನಂಥಹ ಅನ್ಯ ಭಾಷೆ ಮಾತನಾಡಲು ಬಂತೆಂದರೆ ಸಾಕು ನೋಡಿ? ಮಾತೃ ಭಾಷೆಯನ್ನೇ  ಮರೆಯುವ ಇಂಥ  ಕಾಲ ಘಟ್ಟದಲ್ಲಿ ನಾವಿದ್ದೇವೆ! ಇದಕ್ಕೆ ಅಪವಾದ ಎನ್ನುವಂತೆ ಕನ್ನಡ ಭಾಷೆಯನ್ನು ಕರಗತ ಮಾಡಿಕೊಂಡು ಕನ್ನಡದ ಪ್ರತಿಷ್ಠಿತ ದಿನಪತ್ರಿಕೆಯಲ್ಲಿ ಜಿಲ್ಲಾ ವರದಿಗಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇಂದಿನ ಟಿವಿ ಮಾಧ್ಯಮಗಳಂಥ ಪೈಪೋಟಿ ಯುಗದಲ್ಲಿಯೂ ತಮ್ಮ ಛಾಪು ಮೂಡಿಸಿರುವ ಎಂ ಸಾಧೀಕ ಅಲಿ ಅವರ ಕನ್ನಡಮ್ಮನ ಸೇವಾ ಕೈಂಕರ್ಯ ನಿಜಕ್ಕೂ ಶ್ಲಾಘನೀಯವಾದುದು.  

ಮಾತೃಭಾಷೆಯನ್ನು ತೀರ ಆಪ್ತ ತೆಯಿಂದ ಅಪ್ಪಿಕೊಳ್ಳುವದು ಮತ್ತು ಒಪ್ಪಿಕೊಳ್ಳುವದು ಎಂದರೆ  ಇದೇನಾ? ಹಾಗಂತ ಎನಿಸದೇ ಇರದು ...! 

ಕೊಪ್ಪಳದಲ್ಲಿ ಲೋಕದರ್ಶನಕನ್ನಡ ದಿನಪತ್ರಿಕೆಯಲ್ಲಿ 1999 ರಿಂದ ಜಿಲ್ಲಾ ವರದಿಗಾರರಾಗಿ ನಿಷ್ಟ್ರಹ ಸೇವೆ ಸಲ್ಲಿಸಿದ ಕೀರ್ತಿ ಇವರಿಗೆ ಲಭಿಸುತ್ತದೆ. ಎಂ ಸಾಧೀಕ ಅಲಿ ಅವರು ಅಪ್ಪಟ ಪ್ರತಿಭಾನ್ವಿತರು ಇವರು ಹಲವಾರು ಕ್ಷೇತ್ರಗಳಲ್ಲಿ ನಿಸ್ವಾರ್ಥ  ಸೇವೆಯನ್ನು ಸಲ್ಲಿಸಿ ಸೈ ಎನಿಸಿಕೊಂಡಿದ್ದಾರೆ. ಕೊಪ್ಪಳದ ಅಫ್ತಾಬ್ ಅಸೋಸಿಯೇಷನ್ ಸೇವಾ ಸಂಸ್ಥೆಯಲ್ಲಿ 1985 ರಿಂದಲೂ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಇವರು ಅಂಜುಮನ್ ಖಿದ್ಮತೆ ಮುಸ್ಲಿಮೀನ್ ಸಂಸ್ಥೆ, ಕೊಪ್ಪಳದಲ್ಲಿ ನಿರ್ದೇಶಕರಾಗಿದ್ದಾರೆ. ಕೊಪ್ಪಳದ , ಬಜ್‌ಮಯೆ ಉರ್ದು ಅದಬ್ ಸಂಸ್ಥೆಯಲ್ಲಿಯೂ ನಿರ್ದೇಶಕರಾಗಿದ್ದು ಅನುಪಮ ಸೇವೆಯನ್ನು ಸಲ್ಲಿಸಿದ್ದಾರೆ.  

1991 ರಲ್ಲಿ ಸರ್ದಾರ್ ವಲ್ಲಭಾಯಿ ಪಟೇಲ್ ಹಿಂದಿ ಬಿ.ಎಡ್‌.ಕಾಲೇಜಿನ ವಿದ್ಯಾರ್ಥಿ ಸಂಘಟನೆಯ ಸಮಾಜ ಸೇವಾ ವಿಭಾಗದ ಕಾರ್ಯದರ್ಶಿಯಾಗಿಯೂ,1991 ರಿಂದ 1995 ರವರೆಗೆ ಅಂದಿನ ರಾಯಚೂರು ಜಿಲ್ಲೆಯ ರಾಷ್ಟ್ರೀಯ ಕಾರ್ಯಕ್ರಮವಾದ ಸಂಪೂರ್ಣ ಸಾಕ್ಷರತಾ ಆಂದೋಲನ ಕಾರ್ಯಕ್ರಮದಲ್ಲಿ ವಾರ್ಡ್‌ ಸಂಯೋಜಕ, ನಗರ ಸಂಯೋಜಕ,ರಾಯಚೂರು ಜಿಲ್ಲಾ ಸಂಯೋಜಕ, ಉರ್ದು ಸಂಪನ್ಮೂಲ ವ್ಯಕ್ತಿ ಮಾಸ್ಟರ್ ಟ್ರೇನರ್) ಸೇವೆ ಸಲ್ಲಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. 1993 ರಿಂದ 1995 ರವರೆಗೆ ಕೊಪ್ಪಳ ತಾಲೂಕು ಕಾರ್ಯದರ್ಶಿಯಾಗಿಯೂ ತಹಸೀಲ್ದಾರರವರ ಅಧ್ಯಕ್ಷತೆಯಲ್ಲಿನ ಸಮಿತಿಯಲ್ಲಿ ಸಾಕ್ಷರತಾ ಆಂದೋಲನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಸ್ಮರಣೀಯವಾದುದು.  

1996ರಲ್ಲಿ ಎಸ್‌. ಬಂಗಾರ​‍್ಪನವರ ಕೆಸಿಪಿ ಪಕ್ಷದ ಕೊಪ್ಪಳ ತಾಲೂಕು ಯುವ ಘಟಕದ ಅಧ್ಯಕ್ಷರಾಗಿ ಸೇವೆ ಸೇವೆ ಸಲ್ಲಿಸಿದ ಇವರು ಕೊಪ್ಪಳ ಪುರಸಭೆಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು ಗಮನಾರ್ಹವಾದುದು.  

ಕೊಪ್ಪಳದ ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯಲ್ಲಿ  1999ರಲ್ಲಿ ಅಧ್ಯಕ್ಷರಾಗಿಯೂ, ಮುಖ್ಯ ಸಲಹೆಗಾರಾಗಿಯೂ, ಆಡಳಿತ ಮಂಡಳಿ ನಿರ್ದೇಶಕರಾಗಿಯೂ, ಸೇವಾ ಕೈಂಕರ್ಯ ನಿಸ್ವಾರ್ಥ ಸೇವಾ ಮನೋಭಾವನೆಗೆ ಹಿಡಿದ ಕೈ ಗನ್ನಡಿಯಾಗಿದೆ.  

ಪತ್ರಿಕಾ ರಂಗದಲ್ಲಿ ವಿವಿಧ ಹುದ್ದೆ ಮತ್ತು ಸೇವೆ ಸಲ್ಲಿಸಿದ ಇವರು ಸಮಾನ ಮನಸ್ಕರು ಮತ್ತು ಎಲ್ಲರೊಳಗೊಂದಾಗಿ ಸ್ನೇಹ ಪರತೆಯನ್ನು ಮೆರೆದವರು.  

1997ರಲ್ಲಿ ಪ್ರಜಾಪ್ರಪಂಚ ಪತ್ರಿಕೆಯ ಕೊಪ್ಪಳ ಜಿಲ್ಲಾ ವರದಿಗಾರರಾಗಿ ಪತ್ರಿಕಾರಂಗಕ್ಕೆ ಪಾದಾರೆ​‍್ಣ ಗೈದ ಇವರು 1998ರಲ್ಲಿ ಸುದ್ದಿಮೂಲ ಪತ್ರಿಕೆಯ ಜಿಲ್ಲಾ ವರದಿಗಾರರೂ 1999ರಲ್ಲಿ ನಾಗರಿಕ ಪತ್ರಿಕೆಯ ಜಿಲ್ಲಾ ವರದಿಗಾರರೂ ಅದರಂತೆಯೇ 2000 ರಿಂದ ಇಂದಿನ ವರೆಗೆ ಲೋಕದರ್ಶನ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ಪತ್ರಕರ್ತರ ವೇದಿಕೆಯ ಕೊಪ್ಪಳ ತಾಲೂಕಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಎಂ ಸಾಧೀಕ ಅಲಿ ಅವರು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಅಧ್ಯಕ್ಷರಾಗಿಯೂ, ಜಿಲ್ಲೆಯ ಹೈದ್ರಾಬಾದ್ ಕರ್ನಾಟಕ ಸಾಹಿತ್ಯ ಮಂಟಪದ ತಾಲೂಕಾಧ್ಯಕ್ಷರಾಗಿಯೂ, ತಿರುಳ್ಗನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾಧ್ಯಕ್ಷರಾಗಿ (2 ಅವಧಿಗೆ) ನಂತರ ರಾಜ್ಯ ಕಾರ್ಯಕಾರಿಣಿ ಸಮಿತಿಗೆ ಚುನಾವಣೆ ಮೂಲಕ ಆಯ್ಕಯಾಗಿ ಪತ್ರಿಕಾರಂಗದಲ್ಲಿ ನಿಸ್ವಾರ್ಥ ಸೇವೆ ಗೈದಿದ್ದಾರೆ.  

ಪ್ರಶಸ್ತಿ ಪುರಸ್ಕಾರಗಳು : 

ಫಕೀರಸ್ವಾಮಿ ಹೂಗಾರ ಸ್ಮಾರಕ ಪ್ರಶಸ್ತಿ, ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ, ಸಿದ್ದಯ್ಯ ಪುರಾಣಿಕ ಸ್ಮಾರಕ ಪ್ರಶಸ್ತಿ, ಶ್ರೀ ರಾಘವೇಂದ್ರಸ್ವಾಮಿ ಸದ್ಭಾವನಾ ಪ್ರಶಸ್ತಿ, ಕರುನಾಡ ಭೂಷಣ ಪ್ರಶಸ್ತಿ, ಕರುನಾಡ ಪದ್ಮಶ್ರಿ ಪ್ರಶಸ್ತಿ,  ಆದರ್ಶ ದಂಪತಿಗಳ ಪ್ರಶಸ್ತಿ, ಕರ್ನಾಟಕ ವಿಕಾಸ ರತ್ನ ಪ್ರಶಸ್ತಿ ರಾಷ್ಟ್ರೀಯ ವಿಕಾಸ ರತ್ನಪ್ರಶಸ್ತಿ,  ಡಾ.ಎ.ಪಿ.ಜಿ. ಅಬ್ದುಲ್ ಕಲಾಂ ಸ್ಮಾರಕ ಪ್ರಶಸ್ತಿ, ಕೆಯುಡಬ್ಲ್ಯೂಜೆಯಿಂದ ಡಿ.ವಿ.ಗುಂಡಪ್ಪನವರ ಸ್ಮಾರಕ ಪ್ರಶಸ್ತಿ, ಕರ್ನಾಟಕ ಸರ್ಕಾರದ ಮಾಧ್ಯಮ ಅಕಾಡೆಮಿ ಪ್ರಶಸ್ತಿ (2017), ಕರ್ನಾಟಕ ಉರ್ದು ಅಕಾಡೆಮಿಯಿಂದ ಸನ್ಮಾನ ಮತ್ತು ಪ್ರಶಸ್ತಿ,  ಸಿರಿಗನ್ನಡ ವೇದಿಕೆ ಜಿಲ್ಲಾಘಟಕ ಮತ್ತು ವಿಶಾಲ ಪ್ರಕಾಶನದಿಂದ ಕರುನಾಡ ಚೇತನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ 

ವಿವಿಧ ಸಂಸ್ಥೆಗಳಿಂದ ಸನ್ಮಾನಗಳು : 

* ಶ್ರೀ ಗವಿಮಠ ಕೊಪ್ಪಳದಿಂದ ವಿಶೇಷ ಸನ್ಮಾನ, ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಿಂದ ಸನ್ಮಾನ, ಹಜರತ್ ಮರ್ದಾನೆಗೈಬ್ ದರ್ಗಾದ ಕಮಿಟಿಯಿಂದ ಸನ್ಮಾನ, ಅಂಜುಮನ್ ಕಮಿಟಿಯಿಂದ ಸನ್ಮಾನ, ಹಜರತ್ ಪೀರ್‌ಪಾಶಾ ಖಾದ್ರಿ ದರ್ಗಾ ಕಮಿಟಿಯಿಂದ ಸನ್ಮಾನ, ಟಿಪ್ಪು ಸುಲ್ತಾನ್ ಕಮಿಟಿಯಿಂದ ಸನ್ಮಾನ, ಕೆಯುಡಬ್ಲ್ಯೂಜೆಯ ಬೆಂಗಳೂರು, ಕೊಪ್ಪಳ ಜಿಲ್ಲಾ ಘಟಕ, ತಾಲೂಕು ಘಟಕಗಳಾದ ಕೊಪ್ಪಳ, ಯಲಬುರ್ಗಾ, ಕುಷ್ಟಗಿ, ಗಂಗಾವತಿ, ಕುಕನೂರು, ಕಾರಟಗಿ, ಕನಕಗಿರಿ ಕಮಿಟಿಗಳಿಂದ ಸನ್ಮಾನಗಳು ಸಂದಿವೆ. ಹಿರಿಯ ಪತ್ರಕರ್ತ ಗೆಳೆಯ ಜಿ ಎಸ್ ಗೋನಾಳ ಅವರು ಮತ್ತೋರ್ವ ಹಿರಿಯ ಪತ್ರಕರ್ತ ಎಂ ಸಾಧೀಕಲಿ ಅವರ 60 ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ಎಂ ಸಾಧೀಕ ಅಲಿ ಅವರ ಬದುಕು ಮತ್ತು ಪತ್ರಿಕೋದ್ಯಮ ಕುರಿತಂತೆ ಕೃತಿಯನ್ನೇ ಲೋಕಾರೆ​‍್ಣಗೊಳಿಸುತಿದ್ದಾರೆ.  

ತಮ್ಮದೆ ಆದ ವಿಶಾಲ ಪ್ರಕಾಶನದಡಿ ಪ್ರಕಟಿಸಿ ಕೊಪ್ಪಳ ಜಿಲ್ಲೆಯ ನಾಗರೀಕ ವೇದಿಕೆಯ ರಾಜ್ಯಾಧ್ಯಕ್ಷ ಮಹೇಶ ಬಾಬು ಸರ್ವೆ ಅವರ ನೇತೃತ್ವದಲ್ಲಿ ಜರುಗಲಿರುವ 16 ನೇ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ಅಗಷ್ಟ್‌ 27, 2023 ರಂದು ಬೆಳಗ್ಗೆ 11 ಘಂಟೆಗೆ  ಎಂ ಸಾಧೀಕ ಅಲಿ ಅವರ ಷಷ್ಠಾಬ್ಧಿ ಕಾರ್ಯಕ್ರಮದಲ್ಲಿ ಲೋಕಾರೆ​‍್ಣಗೊಳ್ಳುತ್ತಿರುವದು ಸಮಸ್ತ ಪತ್ರಕರ್ತರಿಗೂ ಹೆಮ್ಮೆ ಎನಿಸದೆ ಇರದು..!  

ಒಬ್ಬರಿಗೊಬ್ಬರು ಕಂಡರೆ ಆಗದ ಇಂಥ ವಿಷಮ ಪರಿಸ್ಥಿತಿಯಲ್ಲಿ ಜಿ ಎಸ್ ಗೋನಾಳ ಅವರ ಹಿಂದೂ ಮುಸ್ಲಿಂ ಭಾತೃತ್ವ ಬೆಸೆಯುವ ಈ ಕೃತಿ ನಿಜಕ್ಕೂ  ಮಾದರಿಯೂ ಹೌದು ಮತ್ತು ಆದರ್ಶವೂ ಕೂಡ. ಹುಟ್ಟು ಹಬ್ಬದ ಶುಭಾಶಯಗಳನ್ನು ಹಿರಿಯ ಪತ್ರಕರ್ತ ಎಂ ಸಾಧೀಕ ಅಲಿ ಅವರಿಗೆ ತಿಳಿಸುವದರೊಂದಿಗೆ ಮಿತ್ರ ಹಿರಿಯ ಪತ್ರಕರ್ತ ಜಿ ಎಸ್ ಗೋನಾಳ ಅವರಿಗೆ ಅಭಿನಂದಿಸುವದು ಓಚಿತ್ಯಪೂರ್ಣ ಮತ್ತು ಹೆಮ್ಮೆ ಎನಿಸುತ್ತದೆ. 

ಇವರೀರ್ವರ ಮೇರು ಪ್ರತಿಭೆಗೆ ಹೃದಯ ತುಂಬಿ ಹಾರೈಸುವೆ... 

- ಅಲ್ಲಾವುದ್ದೀನ ಯಮ್ಮಿ 

ಹಿರಿಯ ಪತ್ರಕರ್ತರು, ಕುಕನೂರ  

ಮೊ. 9972517886 

-*)=()=(*- 


ಸುದ್ದಿ ಓದಿ