ಗುಣಮುಖರಾದ ಬಳಿಕ ಆಸ್ಪತ್ರೆಗೆ ಅಕ್ಕಿ-ಗೋಧಿ ದಾನ ಮಾಡಿದ ಹಿರಿಯ ನಾಗರಿಕ; ವೈದ್ಯರ ಸೇವೆಗೆ ಕೃತಜ್ಞತೆ
ವಿಜಯಪುರ 24 : ನಗರದ ಬಿ.ಎಲ್.ಡಿ.ಇ ಆಸ್ಪತ್ರೆಯಲ್ಲಿ ಹೃದಯಸ್ಪರ್ಶಿ ಘಟನೆಯೊಂದು ಮಂಗಳವಾರ ನಡೆಯಿತು. ಗೊರನಾಳ ಗ್ರಾಮದ 75 ವರ್ಷದ ಹಿರಿಯ ನಾಗರಿಕರೊಬ್ಬರು ತಮ್ಮ ಮಗಳು ಮತ್ತು ಮೊಮ್ಮಗನೊಂದಿಗೆ ಬಿ.ಎಲ್.ಡಿ.ಇ ಆಸ್ಪತ್ರೆಗೆ ಬಂದು ನನ್ನದೊಂದು ಅಳಿಲು ಕಾಣಿಕೆ ಸ್ವೀಕರಿಸಿ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಸ್. ಆರ್. ಬೆಂತೂರು ಮತ್ತು ಎಲುವು ಮತ್ತು ಕೀಲು ತಜ್ಞ ಡಾ. ಗೀರೀಶ ಖೋದ್ನಾಪುರ ಅವರನ್ನು ಕೇಳಿಕೊಂಡರು. ಆಗ ಒಂದು ಕ್ಷಣ ವೈದ್ಯರು, ಇದೆಲ್ಲ ಏಕೆ ಎಂದು ಪ್ರಶ್ನಿಸಿದರು. ಆಗ 75 ವರ್ಷದ ನಬಿಸಾಬ ಪಿಂಜಾರ ತಾನು ಈಗ ಸಂಪೂರ್ಣ ಗುಣಮುಖನಾಗಿದ್ದು, ಊರುಗೊಲಿನ ಸಹಾಯವಿಲ್ಲದೆ ನಡೆಯುತ್ತಿದ್ದೇನೆ.
ಈ ಸಂತಸವನ್ನು ತಮ್ಮೊಂದಿಗೆ ಹಂಚಿಕೊಳ್ಳಲು ಮಗಳು ಮತ್ತು ಮೊಮ್ಮಗನೊಂದಿಗೆ ಬಂದಿದ್ದೇನೆ ಎಂದು ಹೇಳಿ ತನ್ನ ಜೊತೆಗೆ ತಂದಿದ್ದ ಅಕ್ಕಿ ಮತ್ತು ಗೋದಿಯ ಮೂಟೆಯನ್ನು ಆಸ್ಪತ್ರೆಗೆ ನೀಡಿದರು. ಪ್ರಕರಣದ ಹಿನ್ನೆಲೆ: ಗೊರನಾಳ ಗ್ರಾಮದ 75 ವರ್ಷದ ಹಿರಿಯ ವ್ಯಕ್ತಿ ನಬಿಸಾಬ ಪಿಂಜಾರ ಕಾಲು ಜಾರಿ ಬಿದ್ದ ಪರಿಣಾಮ ಅವರ ಎಡಚಪ್ಪೆಗೆ ಗಂಭೀರ ಗಾಯವಾಗಿತ್ತು. ನಡೆಯಲೂ ಸಾಧ್ಯವಾಗದ ಪರಿಸ್ಥಿತಿಯಲ್ಲಿ ನಗರದ ಬಿ.ಎಲ್.ಡಿ.ಇ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ವಾರಗಳ ಹಿಂದೆ ಡಾ. ಗೀರೀಶ ಖೋದ್ನಾಪುರ ಮತ್ತು ತಂಡದವರು ಅರವಳಿಗೆ ವೈದ್ಯರ ಜೊತೆ ಸೇರಿ ಬೈಪೋಲಾರ ಹೆಮಿಆರ್ಥೊಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಸಿ ಎಡಚಪ್ಪೆಯ ಎಲುಬನ್ನು ಬದಲಾಯಿಸಿದ್ದರು.