ನಿಸ್ವಾರ್ಥ ಸೇವೆಯೇ ಧರ್ಮದ ಪ್ರತೀಕ: ಜಾನಕಿ
ಬೆಳಗಾವಿ 03: ಕಳೆದ 50 ವರ್ಷಗಳಿಂದ ನಿಸ್ವಾರ್ಥತೆ, ಪ್ರಾಮಾಣಿಕತೆ ಹಾಗೂ ಸಮಾಜಮುಖಿ ಧ್ಯೇಯದೊಂದಿಗೆ ಸೇವೆ ಸಲ್ಲಿಸುತ್ತಿರುವ ಮಹಿಳಾ ಕಲ್ಯಾಣ ಸಂಸ್ಥೆಯ ಕಾರ್ಯ ನಿಜವಾದ ಧರ್ಮದ ಪ್ರತೀಕವಾಗಿದೆ ಎಂದು ಬೆಳಗಾವಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಹೇಳಿದರು. ನಗರದ ಮಹಿಳಾ ಕಲ್ಯಾಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳಾ ಸಬಲೀಕರಣ, ಮಕ್ಕಳ ರಕ್ಷಣೆ, ಸಾಮಾಜಿಕ ಜಾಗೃತಿ ಹಾಗೂ ದುರ್ಬಲ ವರ್ಗಗಳ ಕಲ್ಯಾಣದಲ್ಲಿ ಸ್ವಯಂಸೇವಾ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ಮಹಿಳಾ ಕಲ್ಯಾಣ ಸಂಸ್ಥೆಯ ಸೇವಾ ಕಾರ್ಯಗಳು ಮುಂದಿನ ಪೀಳಿಗೆಗೂ ಪ್ರೇರಣೆಯಾಗಲಿ ಎಂದು ಆಶಿಸಿದರು.
ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಜಗದ್ಗುರು ಡಾ. ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿ, ನಿಸ್ವಾರ್ಥ ಸಮಾಜಸೇವೆಯೇ ನಿಜವಾದ ಮಾನವೀಯ ಧರ್ಮ. ಸಂಕಷ್ಟದಲ್ಲಿರುವವರಿಗೆ ನೆರವು ನೀಡುವ ಮೂಲಕ ಸಂಸ್ಥೆ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುತ್ತಿದೆ ಎಂದರು. ಬೆಳಗಾವಿಯ ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮೀಜಿ ಮಾತನಾಡಿ, ಐದು ದಶಕಗಳಿಂದ ಸಂಸ್ಥೆ ನಡೆಸಿಕೊಂಡು ಬರುತ್ತಿರುವ ಸಮಾಜಮುಖಿ ಸೇವೆ ಇತರರಿಗೆ ಮಾದರಿ ಹಾಗೂ ಪ್ರೇರಣೆಯಾಗಿದೆ.
ಮಹಿಳೆಯರು, ಮಕ್ಕಳು, ವೃದ್ಧರು ಹಾಗೂ ಸಂಕಷ್ಟದಲ್ಲಿರುವವರ ಬದುಕಿನಲ್ಲಿ ಭರವಸೆ ಮೂಡಿಸುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಮಹಿಳಾ ಕಲ್ಯಾಣ ಸಂಸ್ಥೆಯ ಅಧ್ಯಕ್ಷೆ ಸರೋಜಿನಿ ಎಸ್. ಪಾಟೀಲ, ಗೌರವ ಕಾರ್ಯದರ್ಶಿ ವೈಜಯಂತಿ ಚೌಗಲಾ, ಸಂಸ್ಥಾಪಕ ಎಂ.ಎಸ್. ಚೌಗಲಾ, ಯಶಸ್ವಿನಿ ಟೌನ್ಶಿಪ್ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಅಣ್ಣಾಸಾಹೇಬ್ ಪಾಟೀಲ, ಆಡಳಿತ ಮಂಡಳಿ ಸದಸ್ಯರು, ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.