ಹುಟ್ಟುಹಬ್ಬಕ್ಕೆ ಎರಡು ಚಿರತೆ, ಸಿಂಹ ದತ್ತು ಪಡೆದ ರಾಹುಲ್ ಜಾರಕಿಹೊಳಿ
ಹುಟ್ಟುಹಬ್ಬಕ್ಕೆ ಎರಡು ಚಿರತೆ, ಸಿಂಹ ದತ್ತು ಪಡೆದ ರಾಹುಲ್ ಜಾರಕಿಹೊಳಿ
ಬೆಳಗಾವಿ 04: ತಮ್ಮ 27ನೇ ಜನ್ಮದಿನವನ್ನು ಪರಿಸರ ಹಾಗೂ ವನ್ಯಜೀವಿ ಸಂರಕ್ಷಣೆಯ ಸಂದೇಶದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು, ಕರ್ನಾಟಕ ಅಪೆಕ್ಸ್ ಬ್ಯಾಂಕ್ ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಸತೀಶ್ ಜಾರಕಿಹೊಳಿ ಅವರು ಭೂತರಾಮನಹಟ್ಟಿಯ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಎರಡು ಚಿರತೆಗಳು ಹಾಗೂ ಒಂದು ಸಿಂಹವನ್ನು ದತ್ತು ಪಡೆದಿದ್ದಾರೆ. ವನ್ಯಜೀವಿಗಳ ಆರೈಕೆ ಮತ್ತು ಪೋಷಣೆಗೆ ನೆರವಾಗುವ ಉದ್ದೇಶದಿಂದ ಈ ದತ್ತು ಸ್ವೀಕಾರ ಮಾಡಲಾಗಿದೆ. ಉತ್ತರ ಕರ್ನಾಟಕದ ಪ್ರಮುಖ ಮೃಗಾಲಯವಾಗಿರುವ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಈ ಮೂಲಕ ವನ್ಯಜೀವಿ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಇದಕ್ಕೂ ಮುನ್ನ ಅವರ ತಂದೆ, ಶಾಸಕ ಸತೀಶ್ ಜಾರಕಿಹೊಳಿ ಅವರ ಜನ್ಮದಿನದ ಅಂಗವಾಗಿ ಇದೇ ಮೃಗಾಲಯದಲ್ಲಿ ಒಂದು ಸಿಂಹವನ್ನು ದತ್ತು ಪಡೆಯಲಾಗಿತ್ತು. ವನ್ಯಜೀವಿಗಳ ಸಂರಕ್ಷಣೆ ಮತ್ತು ಪ್ರಕೃತಿಯ ಸಮತೋಲನ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಇಂತಹ ಕಾರ್ಯಗಳು ಮುಂದಿನ ಪೀಳಿಗೆಯಲ್ಲಿ ಪರಿಸರ ಕಾಳಜಿ ಬೆಳೆಸಲು ಸಹಕಾರಿಯಾಗಲಿವೆ ಎಂಬ ಆಶಯವನ್ನು ರಾಹುಲ್ ಜಾರಕಿಹೊಳಿ ವ್ಯಕ್ತಪಡಿಸಿದ್ದಾರೆ.