ವೈಜ್ಞಾನಿಕ ಪದ್ಧತಿ ಕಬ್ಬು ಬೇಸಾಯ ಮಾಡಲು ತರಬೇತಿ ಅಗತ್ಯ: ಬಸವರಾಜ
ಲೋಕದರ್ಶನ ವರದಿ
ಮುಂಡಗೋಡ:ವೈಜ್ಞಾನಿಕ ಪದ್ಧತಿಯಲ್ಲಿ ಕಬ್ಬು ಬೇಸಾಯ ಮಾಡುವ ವಿಧಾನವನ್ನು ತಿಳಿದುಕೊಳ್ಳಲು ತರಬೇತಿ ಅಗತ್ಯ ಎಂದು ಪ್ರಗತಿಪರ ರೈತ ಬಸವರಾಜ ನಡುವಿನಮನಿ ಹೇಳಿದರು.
ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ವಿಸ್ತರಣಾ ಶಾಖೆ ಮುಂಡಗೋಡ, ಕೃಷಿ ವಿಶ್ವವಿದ್ಯಾಲಯ ಧಾರವಾಡ ಮತ್ತು ಕೃಷಿ ವಿಜ್ಞಾನ ಕೇಂದ್ರ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ರೈತರಿಗೆ ರವಿವಾರ ಹಮ್ಮಿಕೊಳ್ಳಲಾಗಿದ್ದ ಕಬ್ಬು ಬೇಸಾಯದ ಕುರಿತು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಪೂರಕ ಹವಾಗುಣ ಹಾಗು ಮಣ್ಣಿನ ಗುಣವಿದ್ದು ಅದರ ಪ್ರಯೋಜನವನ್ನು ರೈತರು ಪಡೆಯಬೇಕು. ಬಹಳ ಉಪಯುಕ್ತವಾದ ತರಬೇತಿ ಇದು ಎಂದರು.
ತರಬೇತಿಯ ಸಂಪನ್ಮೂಲ ವ್ಯಕ್ತಿ ಕೆ.ವಿ.ಕೆ. ಶಿರಸಿಯ ಕೃಷಿ ವಿಜ್ಞಾನಿ ಶಿವಶಂಕರ ಅವರು ಮಣ್ಣಿನ ಹದ, ಕಬ್ಬಿನ ತಳಿಗಳ ಆಯ್ಕೆ, ಸಾಲುನಾಟಿ ಪದ್ಧತಿ, ಮಡಿ ಪದ್ಧತಿ, ಇಳುವರಿ ಮತ್ತು ಲಾಭದಾಯಕ ಹಂತ, ಕಟಾವು ಪದ್ಧತಿ ಹಲವು ವಿಷಯಗಳ ಕುರಿತು ತರಬೇತಿ ನೀಡಿದರು.
ಸಿಬಿಡಿಆರ್ಸೆಟಿ ಗ್ರಾಮೀಣ ಅಭಿವೃದ್ಧಿ ಅಧಿಕಾರಿ ಮಹಾಬಲೇಶ್ವರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯರಾದ ರಮೇಶ ನೇಮಣ್ಣನವರ ಉಪಸ್ಥಿತರಿದ್ದರು. ಈರಯ್ಯ ಚಿಕ್ಕಮಠ ಸ್ವಾಗತಿಸಿದರು. ಶಾಂತಕುಮಾರ ಕೆ. ವಂದಿಸಿದರು. 100ಕ್ಕೂ ಹೆಚ್ಚು ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು.