ಕೊರಾನಾದಿಂದ ಕಂಗೆಟ್ಟಿರುವ ರೈತರನ್ನು ಉಳಿಸಿ: ನಿಂಗರಾಜ್
ಸಿಂದಗಿ 02: ಕುಮಾರಸ್ವಾಮಿ ಮುಖ್ಯಂತ್ರಿಯಾಗಿದ್ದಾಗ ಘೋಷಣೆ ಮಾಡಿದ್ದ ಸಾಲ ಮನ್ನಾ ಮಾತನ್ನೇ ನಂಬಿದ ರೈತರು ಕಟಬಾಕಿದಾರರಾಗಿ ಕೂತಿದ್ದಾರೆ. ಇವರೂ ಸೇರಿ ಅತಿವೃಷ್ಟಿ, ಕೊರೊನಾ ಸಂಕಟದಿಂದ ಕಂಗಾಲಾಗಿರುವ ರೈತರ ಸಾಲವನ್ನು ವಿನಾಯಿತಿ ನೀಡಿ ಒಟಿಎಸ್ನಲ್ಲಿ ಒಂದೇ ಸಲ ಕಟ್ಟಲು ಅನುವು ಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಯುವ ಘಟಕದ ರಾಜ್ಯ ಅಧ್ಯಕ್ಷ ನಿಂಗರಾಜ್ ಅತನೂರ ಆಗ್ರಹಿಸಿದ್ದಾರೆ.
ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಮ್ಮಿಶ್ರ ಸರಕಾರವಿದ್ದಾಗ ಮುಖ್ಯ ಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿಯವರು ರಾಷ್ಟ್ರೀಕೃತ ಬ್ಯಾಂಕಿನ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಇದನ್ನು ನಂಬಿದ ರೈತರು ಹೇಗೂ ಸಾಲ ಮನ್ನಾ ಆಗುತ್ತದೆ ಎಂದು ತಮ್ಮ ಸಾಲವನ್ನು ಕಟ್ಟದೇ ಕಟಬಾಕಿದಾರರಾಗಿ ಉಳಿದರು. ಆದರೆ ಸಾಲ ಮನ್ನಾ ಆಗದೇ ಇರುವುದರಿಂದ ಅವರು ಈಗ ದಿಕ್ಕು ಕಾಣದಾಗಿದ್ದಾರೆ. ಇವರು ಮನ್ನಾ ಆಸೆ ಹಚ್ಚದೇ ಇದ್ದರೆ ಹೇಗೊ ಅಷ್ಟಿಷ್ಟು ಸಾಲ ತೀರಿಸಿಕೊಂಡು ಹೊರೆ ಕಮ್ಮಿ ಮಾಡಿಕೊಂಡಿರುತ್ತಿದ್ದರು. ಆದರೆ ಅಧಿಕಾರಶಾಹಿಗಳ ಮಾತು ನಂಬಿದ ಮುಗ್ಧ ರೈತರು ಬಲಿಪಶುಗಳಾಗಬೇಕಾಯಿತು ಎಂದು ನಿಂಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದು, ತಿಂಗಳೊಳಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮಹಾ ಪ್ರಬಂಧಕರು ಸೇರಿದಂತೆ ಸಂಬಂಧಿಸಿದ ಉಳಿದ ರಾಷ್ಟ್ರೀಕೃತ ಬ್ಯಾಂಕುಗಳ ಆಡಳಿತ ಮಂಡಳಿಯವರು ಸ್ಪಷ್ಟೀಕರಣ ನೀಡಬೇಕು. ಇಲ್ಲದರಿದ್ದರೆ ರಾಜ್ಯಾದ್ಯಂತ ಬ್ಯಾಂಕುಗಳ ಮುಂಭಾಗ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಆಗಿನ ಸರಕಾರ ಹೇಳಿದ ಪ್ರಕಾರ ತಮ್ಮದಲ್ಲದ ತಪ್ಪಿನಿಂದ ಪರಿತಪಿಸುತ್ತಿರುವ ರೈತರ ಸಾಲದ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಿ, ಅಸಲಿನಲ್ಲಿ ಶೇ.40ರಷ್ಟು ರಿಯಾಯಿತಿ ನೀಡಬೇಕು. ಹಾಗೆಯೇ ಅತಿವೃಷ್ಟಿ-ಅನಾವೃಷ್ಟಿ ಮತ್ತು ಕಳೆದ ಒಂದು ವರ್ಷದಿಂದ ಕೊರೊನಾ ಕಾಟದ ಹಿನ್ನೆಲೆಯಲ್ಲಿ ದಿಕ್ಕು ಕಾಣದಾಗಿರುವ ರೈತರ ಸಾಲಕ್ಕೂ ಇದು ಅನ್ವಯವಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸರಕಾರ ಈ ಕುರಿತು ಗಂಭೀರವಾಗಿ ಪರಿಗಣಿಸಿ ಶೀಘ್ರವೇ ಎಲ್ಲ ಬ್ಯಾಂಕುಗಳಿಗೆ ನಿರ್ದೇಶನ ನೀಡಿ ರೈತರ ಸಾಲ ಮನ್ನಾಗೆ ಕ್ರಮ ಕೈಗೊಳ್ಳಬೇಕು. ಹಾಗೆ ಮಾಡಿದರೆ ಮಾತ್ರ ಯಡಿಯೂರಪ್ಪನವರು ಹಸಿರು ಶಾಲು ಹಾಕಿಕೊಂಡು ರೈತರ ಪರವಾಗಿ ಇದ್ದೇನೆ ಎಂದು ತೋರಿಸಿಕೊಂಡಿದ್ದೂ ಸಾರ್ಥಕವಾಗುತ್ತದೆ. ಈಗಿನ ಕೃಷಿ ಸಚಿವ ಬಿ.ಸಿ.ಪಾಟೀಲ್ಗೆ ಯಾವುದೇ ಗಂಭೀರತೆ ಇಲ್ಲ. ಬಂದಲ್ಲಿ ಹೋದಲ್ಲಿ ರೈತರ ಬಗ್ಗೆ ಅವಹೇಳನ ಮಾಡುತ್ತ ವಿಲನ್ ರೀತಿ ಸಿನಿಮಾ ಶೈಲಿಯಲ್ಲೇ ಮಾತನಾಡುತ್ತಾರೆ. ಇನ್ನಾದರೂ ರೈತರ ನಿಜವಾದ ಸಂಕಷ್ಟಕ್ಕೆ ಬಿ.ಸಿ.ಪಾಟೀಲ್ ಸ್ಪಂದಿಸಲು ಸಿಎಂ ಕಟ್ಟುನಿಟ್ಟಾಗಿ ಸೂಚಿಸಬೇಕು ಎಂದು ನಿಂಗರಾಜ್ ಅತನೂರ ಹೇಳಿದ್ದಾರೆ