ಲೇಖನಗಳು

ಸತ್ಯಾನಂದ ಪಾತ್ರೋಟರ "ಮರ, ಮನುಷ್ಯ ಅವನ ನೆರಳು"

ಸತ್ಯಾನಂದ ಪಾತ್ರೋಟರ "ಮರ, ಮನುಷ್ಯ ಅವನ ನೆರಳು"

ಹಿರಿಯ ಕವಿ ಸತ್ಯಾನಂದ ಪಾತ್ರೊಟ ಅವರು ಈ ತಿಂಗಳಮಯೂರದಲ್ಲಿ ಒಂದು ಕವಿತೆ ಬರೆದಿದ್ದು ತುಂಬ ಆಪ್ತವಾವೆನಿಸಿತು.  

ನಾಡಿನ ಈ ಹಿರಿಯಕವಿ ಜಾಜಿಮಲ್ಲಿಗೆಯ ಕವಿ ಎಂದೆ ಹೆಸರಾದವರು. ಕನ್ನಡದಲ್ಲಿ ಮಾನವೀಯತೆಯ ಪರವಾದ ಹಲವು ಮಗ್ಗಲುಗಳನ್ನು ತಮ್ಮ ಕಾವ್ಯದಲ್ಲಿ ತಂದವರು. ಕರಿನೆಲದ ಕಲೆಗಳು ಎಂಬ ಸಂಕಲನದಿಂದ ಆರಂಭವಾದ ಅವರ ಕಾವ್ಯಯಾನ ಜಾಜಿ ಮಲ್ಲಿಗೆಯಿಂದ ಬೆಳಗಿತು. ಸುಮಾರು ನಾಲ್ಕು ದಶಕಗಳ ಕಾಲ ಮುಂದುವರೆದಿದೆ." ಪುಟ್ಟ ಗುಡಿಸಲಿನಲ್ಲಿ ಕೆಟ್ಟ ಕನಸುಗಳಿಲ್ಲ" ಎಂದು ಸಾರಿದವರು. ಬಾಗಲಕೋಟೆಯಲ್ಲಿ ನೆಲೆಸಿರುವ ಈ ಕವಿ ಘಟಪ್ರಭೆಯ ಆರ್ಭಟ ಮತ್ತು ಆಶ್ರಯ ಎರಡನ್ನೂ ಕಂಡವರು. ನಿಸರ್ಗದ ಮುಂದೆ ಮನುಷ್ಯ ಈ ಸಣ್ಣವನು ಎಂಬ ಚಿಂತನೆಯನ್ನು ಸೂಸುವ ಅವರ ಈ ಹೊಸ ಕವಿತೆ ಹೀಗಿದೆ.  

ಮರ, ಮನುಷ್ಯ, ನೆರಳು  

ನಾನು ಹುಟ್ಟಿ  ಬೆಳೆದು  

ಎಷ್ಟೋ ವರ್ಷಗಳ ಮೇಲೆ   

ಹೊಸ ರಸ್ತೆಯ  

ಎಡಬಲದಲಿ   

ಸರಕಾರದವರು ನೆಟ್ಟರು.  

ತರತರ ಸಸಿಗಳನು  

ರಸ್ತೆಯ ಎಡಬಲದಲ್ಕಿ ಸಸಿಗಳನು ನೆಟ್ಟು ಒಂದು ಒಳ್ಳೆಯ ಕೆಲಸ ಮಾಡಿದ ಸರಕಾರರದವರ ವರ್ಣಬೆಯೊಂದಿಗೆ ಕವಿತೆ ಆರಂಭವಾಗುತ್ತದೆ. ಕವಿ  ಅವುಗಳಿಗಿಂತ ಮೊದಲೇ ಹುಟ್ಟಿದವನು. ಆದರೆ ಕವಿ ಹುಟ್ಟಿದ ಎಷ್ಟೋ ವರ್ಷಗಳ ಮೇಲೆ ನೆಟ್ಟ ಆ ಸಸಿಗಳುಅವನನ್ಬು ಮಿರಿಸುವಂತೆ ಬೆಳೆದು ನಿಂತ ವಿಸ್ಮಯವನ್ನು ಕವಿ ಗಮನಿಸಿದ್ದಾನೆ. ಇದೆ ನಿಸರ್ಗದ ವಿಸ್ಮಯ. ಮನುಷ್ಯನ ಮುಂದೆ ಹುಟದಟಿದ ಗಿಡ ಮನುಷ್ಯನನ್ನು ಮೀರಿ ನಿಲ್ಲುವದು ಗಿಡದಿಂದ ಸಾಧ್ಯ. ಪ್ರಕೃತಿಯ ಈ ಅದ್ಭುತವನ್ನು  ಕವಿತೆ ಒಳಗೊಂಡು ಸಾಗುತ್ತದೆ.. ಮಣ್ಣಲೊಗೆದ ಬೀಜ ಸರಸರನೆ ಚಿಪ್ಪೊಡೆದು 

ಬೆಳೆದುದನ್ನು   

ನೋಡು ನೋಡುತ್ತಿದ್ದಂತೆಯೆ  

ಅವು ಬೆಳೆದವು  

ನನಗಿಂತಲೂ ಮುಂಚೆ ಹುಟ್ಟಿದವರಂತೆ    

ಕವಿಯ ಮುಂದೆ ಅವುಗಳ ಬೆಳವಣಿಗೆ ಕವಿಯನ್ನು ವಿಸ್ಮಯ ಗೊಳಿಸುತ್ತವೆ. ಇದು ಗಿಡದ ಶಕ್ತಿ. ಅವು ಮನುಷ್ಯರಂತಲ್ಲ., ಬರಬರನೆ ಬೆಳೆದವು. ಅವುಗಳ ದಟ್ಟತೆಯನ್ನು ನೋಡಿದ ಕವಿ ಗಿಡದ ಬೆಳಗನ್ನು ಹೀಗೆ ಬಣ್ಣಿಸುತ್ತಾರೆ.  

ಸಸಿ ಇದ್ದವು   

ಗಿಡವಾಗಿ ಮರವಾದವು  

ಮೈ ತುಂಬಾ ಹಸಿರೆಲೆ ಚಿಗುರಿಸಿ  

ಮುಡಿ ತುಂಬಾ ಹೂವು ಮುಡಿದು  

ಒಡಲ ತುಂಬಾ ಕಾಯಿ, ಹಣ್ಣುಗಳ ಹೊತ್ತು  

ಮುತ್ತೈದೆಯಾದವು  

ದಾರಿಹೋಕರ ಕಣ್ಮನಗಳಿಗೆ  

ಕನಸುಗಳ ಚಿಗುರಿಸಿದವು  

ತಮ್ಮೊಡಲ ನೆಳಲಿನಲಿ ತಂಗಾಳಿ ತೀಡಿದವು  

ಕವಿಗೆ ಗಿಡಗಳ ಬೆಳೆಯುವಿಕೆ ಹೆಣ್ಣೊಂದರ ಬೆಳವಣಿಗೆಯಂತೆ ಕಾಣುತ್ತದೆ. ಹೆಣ್ಣಿನ ದೇಹದಲ್ಲಿ ಸಹಜ ಸೌಂದರ್ಯ ಕುಡಿಯೊಡೆದಂತೆ ಗಿಡವೂ ಸುಂದರವಾಗಿ ಅಲಂಕೃತಗೊಂಡು ಬೆಳೆಯುತ್ತವೆ. ಸಮೃದ್ಧಿಯ ಸಂಕೇತವಾಗಿ ಕಾಣುತ್ತವೆ. ಸಸಿ ಇದ್ದ  ಅವು ಗಿಡವಾಗುವಾಗ ದೇಹ ಸಮೃದ್ಧಗೊಳ್ಳುತ್ತ ಸಾಗುತ್ತವೆ. ಮೈತುಂಬ ಹಸಿರೆಲೆ ಚಿಗುರು, ಮುಡಿ ತುಂಬಾ ಹೂವು ಮುಡಿಯುವದು, ಒಡಲ ತುಂಬಾ ಕಾಯಿ ಹೊತ್ತದ್ದು ಹೆಣ್ಣೊಬ್ಬಳು ತಾಯಾಗಿ ಫಲವೊತ್ತು ನಿಂತಂತೆ ಕಾಣುತ್ತದೆ.ಅವಳ ಸೌಂದರ್ಯ ದಾರಿಹೋಕರ ಕಣ್ಣಿಗೆ, ಮನಗಳಲ್ಕಿ ಹೊಸ ಆಸೆ ಹುಟ್ಟಿಸುತ್ತದೆ.ಹೊಸ ಕನಸುಗಳ ಚಿಗುರಿಸುತ್ತವೆ. ಮರದ ಒಡಲ ನೆರಳು ತಂಗಾಳಿ ತೀಡುತ್ತದೆ.  

ಕವಿ ಗಿಡಗಳ ಫಲವಂತಿಕೆಯನ್ನು ಸ್ತ್ರೀ ಸೌಂದರ್ಯಮತ್ತು ಫಲ ಹೊತ್ತು ಜಗಕೆ ಆಸರೆ ನೀಡುವ ದಕ್ಕೆ ಹೋಲಿಸುತ್ತಾನೆ ಗಿಡಗಳ ತಂಪು ನೆರಳಿನ ಕೆಳಗೆ ಅದೆಷ್ಟೋ ಜನ ಆಶ್ರಯಪಡೆದಿದ್ದದ್ದು ಅಲ್ಕಿ ವರ್ಣಿತವಾಗಿದೆ.  

ಗಿಡ ಬರಿ ಹಣ್ಣು, ನೆರಳು ಅಲ್ಲ ಮಳೆಯನ್ನೂ ತರುವ  ಕರುಣಾಮಯಿ. ಬಿರು ಬಿಸಿಲು ಬೇಗೆಯನುಂಡೇ ಮಳೆಯಾಗಲು ಸಜ್ಜಾಗುತ್ತದೆ. ಇದನ್ನು ಕವಿತೆ   

ಬಿರು ಬಿಸಿಲು ಬಿರುಗಾಳಿ, ಚಳಿಗೆ  

ಒಂದಿಷ್ಟು ನಲುಗದೆ  

ಮೋಡ ಕವಿದು ಮಳೆ ಸುರಿಯಲು  

ಸಾಕ್ಷಿಯಾದವು  

ಮೋಡಗಳ ತಡೆದು ಮಳೆ ತರುವದರಲ್ಲಿ ಮರದ ಸಾರ್ಥಕತೆಯೊದೆ.. ಈ ಭಾಗ ಕವಿತೆ ಮಳೆಯನ್ನು ಹೊತ್ತು ತರುವ ವಿಸ್ಮಯವನ್ನು ಸಾರುತ್ತದೆ. ಕವಿ ಮರವನ್ನು ನೋಡುತ್ತಾನೆ. ಅದೊಂದು ಹೆಣ್ಣುಮಕ್ಕಳಿಗೆ ತವರಿನಂತೆ ಕಾಣುತ್ತದೆ. ಪಕ್ಷಿಗಳಿಗೆ ಆಸರೆ ನೀಡಿರುವ, ಅದು ಅವುಗಳಿಗೆ ನಿರ್ಭಯ ವಾಸಸ್ಥಾನವಾಗಿರುವದು ಮರದ ಮತ್ತೊಂದು ವ್ಯಕ್ತಿತ್ವ ಸಾರುತ್ತದೆ.  

ಬೆಳ ಬೆಳಿಗ್ಗೆ ನೋಡಬೇಕು  

ಅವುಗಳೊಡಲಿನಲಿ ನಲಿವ  

ಹಕ್ಕಿಗಳ ಚಿಲಿಪಿಲಿ ಗಾನದ ಧ್ಯಾನ  

ಕತ್ತಲಾದರೆ ಅವುಗಳಿಗೆ  ಆಗಿವೆ  

ನಿರ್ಭಯದ ಸುಂದರ ವಾಸಸ್ಥಾನ   

ಇದು ಗಿಡದ ತಾಯ್ತನ. ತನ್ನ ಮಕ್ಕಳನ್ನು ಒಡಲೊಳಗಿಟ್ಟು ಸಾಕುವ ತಾಯಂತೆ ಅದು ನೂರಾರು ಪಕ್ಷಿಗಳಿಗೆ ವಾಸಸ್ಥಾನವಾದುದು ಕವಿಗೆ ಇನ್ನೂ ಅಪ್ಯಾಯಮಾನವಾಗಿ ಕಂಡಿದೆ.  

ಕವಿತೆಯ ಕೊನೆಯ ಭಾಗ ಮರಕ್ಜೂ ಮನುಷ್ಯನಿಗೂ ಇರುವ ಅಂತರವನ್ನು ಸಾರುತ್ತದೆ. ಮನುಷ್ಯ ತನ್ನವರ ನಡುವೆಯೆ ಬೇಧ ಮಾಡಿ ಅಂತರ ಹುಟ್ಟಿಸುತ್ತಾನೆ. ಮುಟ್ಟುವವರು, ಮುಟ್ಟಬಾರದವರು ಎಂದು ಮನುಷ್ಯ ಮಾಡುವ ಬೇಧ ಕವಿಯನ್ನು ಕಾಡಿದೆ. ಆದರೆ ಮರಕ್ಕೆ ಈ ಗುಣವಿಲ್ಲ.  

ಗಿಡಮರಗಳಲಿ   

ಇರಬಹುದು ಪ್ರಭೇದ  

ಮುಟ್ಟದವರು, ಮುಟ್ಟುವವರು  

ಯಾರೆ ಇರಲಿ ಮಾಡುವದಿಲ್ಲ ಭೇದಭಾವ  

ಕನಸು ಮನಸಿನಲಿ   

ಬಗೆದಿಲ್ಲ ಯಾರಿಗೂ ದ್ರೋಹ  

ಕಾಣಸಿಗದಲ್ಲಿ ಪ್ರತಿಕಾರ ಮನೋಭಾವ  

ಹೀಗೆ ಭೇದ ಭಾವ ಮಾಡುವ ಗುಣ, ದ್ರೋಹ ಬಗೆಯುವ ದೂರ್ತತೆ ಇರುವದು ಮನುಷ್ಯನಿಗೆ ಮಾತ್ರ. ಮರ ತನ್ನಕೆಳಗೆ ನಿಂತವನಿಗೆ ನೆರಳು ನೀಡಿ ಹೂ ಹಣ್ಣು ಕೊಟ್ಟು ಸಂತವಿಸುತ್ತದೆ. ಆದ್ದರಿಂದ ಕವಿ ಪಾತ್ರೋಟರವರು ಮರದ ಮುಂದೆ ಮನುಷ್ಯ ಏನೇನೂ ಅಲ್ಲ ಎನ್ನುತ್ತಾರೆ   

ಇವುಗಳ   

ಅಂತರಂಗ ಬಹಿರಂಗವೇ.  

ಬಲು ಶುದ್ಧ  


ಇವುಗಳ ಮುಂದೆ  

ಮನುಷ್ಯ ಅವನ ನೆರಳು  

..............................?  

ಮನುಷ್ಯನ ಮೂರ್ಖತನವೆಂದರೆ ಅವನು ಒಮ್ಮೊಮ್ಮೆ ತನ್ನಬಗೆಗಲ್ಲ, ತನ್ನನೆರಳಿಗೂ ಬೀಗುತ್ತಾನೆ ಎನ್ನುವದು ಕವಿತೆಯ ಕೊನೆಯ ಸಾಲು ಹೇಳುವ ಸಂದೇಶ.  

ಪ್ರಶ್ನೆಯೊಂದಿಗೆ ಕವಿತೆ ಮುಗಿಯುತ್ತದೆ.ಮನುಷ್ಯ ಮತ್ತುಮರ ಎರಡರ ಹೋಲಿಕೆಯನ್ನು ಪಕ್ಕಪಕ್ಕದಲಿರಿಸುತ್ತಲೆ ಕವಿತೆ ಒಂದು ಅರ್ಥಪೂರ್ಣ ಸಂವಾದವನ್ನು ಮಾಡುತ್ತದೆ.. ಬಹಳ ಹಿಂದೆ ಪಾಶ್ಚಿಮಾತ್ಯ ಕವಿ ಜಾಯ್ಸ ಕಿಲ್ಮರ್‌ನ ಒಂದು ಕವಿತೆಯ ಸಾಲನ್ನು ಯಾರೋ ಅನುವಾದಿಸಿದ ಸಾಲು ನೆನಪಿಗೆ ಬರುತ್ತದೆ. ಮರವೊಂದರ ಚಿತ್ರವನ್ನು ತಗೆದ ಕಲಾವಿದ ಮರದ ಅದ್ಭುತ ಶಕ್ತಿಯನ್ನು ವಿವರಿಸಲು   

ಈ ಚಿತ್ರ ಇದೆಯಲ್ಲ ಇಂತಹ   

ಚಿತ್ರ ನನ್ನಂಥ ಕತ್ತೆ ಹತ್ತಾದರೂ ಬರೆಯುತ್ತೆ!  

ಮರ ಇದೆಯಲ್ಲ  

ಇದನ್ನು ಸೃಷ್ಟಿಸಲು ದೇವರಿಗಲ್ಲದೆ   

ಮತ್ತಾರಿಗಾಗುತ್ತೆ?  

ಎನ್ನುವ ಸಾಲುಗಳು ನೆನಪಾಗುತ್ತವೆ. ಕನ್ನಡದ ಇನ್ನೊಬ್ಬ ಹಿರಿಯ ಕವಿ ಮೂಡ್ನಾಕೂಡು ಚಿನ್ನಸ್ವಾಮಿ "ನಾನೊಂದು ಮರವಾಗಿದ್ದರೆ" ಎಂಬ ಕವಿತಾ ಸಂಕಲನವನ್ನೇ ತಂದಿದ್ದರು ಹೀಗೆ ಕನ್ನಡ ಕಾವ್ಯದಲ್ಲಿ ಕಾಡಿದ ಮರದ ಒಂದು ಅದ್ಭುತ ಚಿತ್ರವನ್ನು ಕಟ್ಟಿಕೊಟ್ಟ ಕವಿ ಸತ್ಯಾನಂದ ಪಾತ್ರೋಟರಿಗೆ ಅಭಿನಂದನೆಗಳು  

- * * * -
- * * * - 


- * * * - 


ಸುದ್ದಿ ಓದಿ