ಮಕ್ಕಳಿಗೆ ಶಿಕ್ಷಣ ಕೊಡಿಸಿ ಬದುಕು ಸುಂದರಗೊಳಿಸಿ: ಸತ್ಯ ನಾರಾಯಣರಾವ್
ಬಳ್ಳಾರಿ 6: ಮಕ್ಕಳನ್ನು ಶಾಲೆಗೆ ಕಳುಹಿಸಿ ಬಾಲಾಪರಾಧಿಗಳಾಗುವುದನ್ನು ತಡೆಗಟ್ಟಿ, ನಿಮ್ಮ ಇಳಿ ವಯಸ್ಸಿನಲ್ಲಿ ಆಶ್ರಯವಾಗಲು ಹಾಗೂ ಮಕ್ಕಳ ಹಕ್ಕುಗಳ ಅನುಸಾರವಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಿ ಅವರ ಬದುಕನ್ನು ಬಂಗಾರಗೊಳಿಸಿ ಎಂದು ಡಿವೈಎಸ್ಪಿ ಸತ್ಯ ನಾರಾಯಣರಾವ್ ಹೇಳಿದರು.
ಶಾಲೆಯಿಂದ ಹೊರಗುಳಿದ ಅರ್ಹ ವಯಸ್ಸಿನ ಮಕ್ಕಳನ್ನು ಶಾಲೆಗೆ ಕರೆತರಲು ಹೋಗಬೇಡ ಕೂಲಿಗೆ ಮರಳಿ ಬಾ ಶಾಲೆಗೆ" ಎಂಬ ವಿನೂತನ ಕಾರ್ಯಕ್ರಮ ಸನ್ಮಾರ್ಗ ಗೆಳೆಯರ ಬಳಗ, ಪೋಲಿಸ್ ಇಲಾಖೆ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಕೊರ್ಲಗುಂದಿ ಕ್ಲಸ್ಟರ್ನ ಸ.ಕಿ.ಪ್ರಾ.ಶಾಲೆ ಗುಡಾರ ನಗರದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳನ್ನು ಶಾಲೆಗೆ ಕಳುಹಿಸದ ಪೋಷಕರ ಮೇಲೆ ಪೋಲೀಸ್ ಇಲಾಖೆ ನಿಯಮಾನುಸಾರವಾಗಿ ಕ್ರಮ ಕೈಗೊಳ್ಳುವ ಮುಂಚೆ ಶಾಲೆಗೆ ಕಳುಹಿಸಿ ಎಂದು ಮನವಿ ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಂ. ಸಿದ್ದಲಿಂಗಮೂರ್ತಿ ಅವರು ಮಾತನಾಡಿ, ಶಾಲೆಗೆ ದಾಖಲಾಗದಿರುವ 32 ಮಕ್ಕಳನ್ನು ಶಾಲೆಗೆ ಕಳುಹಿಸಿ ಅವರ ಬದುಕನ್ನು ಉಜ್ವಲಗೊಳಿಸಿ ಎಂದರು.
ಇಸಿಓ ಗೂಳೆಪ್ಪ, ಮುಖ್ಯ ಶಿಕ್ಷಕ ಮೆಹತಾಬ್, ಅಖಬೆಣಕಲ್ ಬಸಪ್ಪ,, ತಾಪಂ ಸದಸ್ಯರಾದ ದೊಡ್ಡ ಜಂಬಣ್ಣ, ಗ್ರಾಪಂ ಸದಸ್ಯರಾದ ಗಾಳೆಪ್ಪ, ರಾಜೇಶ್ವರಿ, ಗುಡಾರ ಶಾಲೆಯ ಮುಖ್ಯ ಗುರುಗಳಾದ ಅಸುಂಡಿ ನಾಗರಾಜ, ಸನ್ಮಾರ್ಗದ ಸಂಚಾಲಕರಾದ ಚಂದ್ರಶೇಖರ ಆಚಾರ್, ಸಿಆರ್ಪಿ ಎ.ಎರ್ರಿಸ್ವಾಮಿ ಹಾಗೂ ಊರಿನ ಮುಖಂಡರು ಭಾಗವಹಿಸಿದ್ದರು