ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಸೇವೆಗೆ ಆದ್ಯತೆ: ಸಚಿವ ಜಮೀರ್
ಲೋಕದರ್ಶನ ವರದಿ
ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ಸೇವೆಗೆ ಆದ್ಯತೆ: ಸಚಿವ ಜಮೀರ್
ಧಾರವಾಡ 12: ಸರ್ಕಾರಿ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ವೈದ್ಯರು ಹಾಗೂ ಸಿಬ್ಬಂದಿಯ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಸಚಿವರಾದ ಯು.ಟಿ. ಖಾದರ್ ಫರೀದ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೆ.12ರಂದು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರೀಶೀಲನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ತಮ್ಮ ಕೇಂದ್ರವನ್ನು ಸ್ವಂತ ಸಂಸ್ಥೆಯಂತೆ ಭಾವಿಸಿ ಸಮರ್ಕವಾಗಿ ಕಾರ್ಯನಿರ್ವಹಿಸಬೇಕು. ವೈದ್ಯರು ಸಮಯಪಾಲನೆಗೆ ಆದ್ಯತೆ ನೀಡಿ ಸಿಬ್ಬಂದಿಗೆ ಮಾದರಿಯಾಗಬೇಕು. ಆಸ್ಪತ್ರೆಗಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವುದರ ಜೊತೆಗೆ ರೋಗಿಗಳಿಗೆ ಧೈರ್ಯ ಮತ್ತು ನಂಬಿಕೆ ಮೂಡಿಸುವ ವಾತಾವರಣ ನಿರ್ಮಿಸಬೇಕು ಎಂದು ಸಚಿವರು ಸೂಚಿಸಿದರು.
ವೈದ್ಯರ ವರ್ಗಾವಣೆ ಪ್ರಕ್ರಿಯೆಯಲ್ಲಿ ಒಂದೇ ಜಿಲ್ಲೆಯಲ್ಲಿ ಪತಿ-ಪತ್ನಿ ಇಬ್ಬರೂ ಸೇವೆ ಸಲ್ಲಿಸಲು ಅನುಕೂಲವಾಗುವಂತೆ ಕೆಲವು ಬದಲಾವಣೆಗಳನ್ನು ತರಲಾಗುವುದು. ಉತ್ತಮ ಸೇವೆ ಸಲ್ಲಿಸಿರುವ ವೈದ್ಯರಿಗೆ ಅದೇ ಸ್ಥಳದಲ್ಲಿ ಮುಂದುವರಿಯಲು ಅವಕಾಶ ನೀಡುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು. ಗುತ್ತಿಗೆ ಆಧಾರದ ಮೇಲೆ 3ರಿಂದ 5 ವರ್ಷ ಸೇವೆ ಸಲ್ಲಿಸಿರುವ ವೈದ್ಯರನ್ನು ಖಾಯಂಗೊಳಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ತಾಲೂಕು ಮಟ್ಟದಲ್ಲಿ ಸಂಘ-ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ವೈದ್ಯರು ನಿರಂತರ ಸಂಪರ್ಕದಲ್ಲಿದ್ದು, ಆಸ್ಪತ್ರೆಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಪಡೆಯಲು ನಾಯಕತ್ವ ವಹಿಸಬೇಕು. ಆಸ್ಪತ್ರೆಗಳ ಸ್ವಚ್ಛತೆ, ಪೇಂಟಿಂಗ್ ಸೇರಿದಂತೆ ಸಣ್ಣಪುಟ್ಟ ಅಗತ್ಯಗಳಿಗೆ ಸ್ಥಳೀಯ ಸಂಘ-ಸಂಸ್ಥೆಗಳು, ದಾನಿಗಳು ಹಾಗೂ ಕಾಲೇಜುಗಳ ಎನ್ಸಿಸಿ ತಂಡಗಳ ಸಹಕಾರ ಪಡೆಯಬೇಕು ಎಂದು ಹೇಳಿದರು.
ವೈದ್ಯರು ತಮ್ಮ ವೃತ್ತಿಯ ಜೊತೆಗೆ ನಿರ್ವಹಣಾ ಕೌಶಲ್ಯಕ್ಕೂ ಹೆಚ್ಚಿನ ಒತ್ತು ನೀಡಬೇಕು. ವೈದ್ಯರು ಹಾಗೂ ಸಿಬ್ಬಂದಿ ತಂಡವಾಗಿ, ಕುಟುಂಬದ ರೀತಿಯಲ್ಲಿ ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿದಾಗ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಸಚಿವರು ಹೇಳಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉತ್ತಮ ಪ್ರಾಥಮಿಕ ಚಿಕಿತ್ಸೆ ನೀಡಿ, ಅಗತ್ಯವಿರುವ ರೋಗಿಗಳನ್ನು 108 ಆಂಬುಲೆನ್ಸ್ ಮೂಲಕ 20ರಿಂದ 30 ನಿಮಿಷಗಳಲ್ಲಿ ತಾಲೂಕು ಆಸ್ಪತ್ರೆಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಬೇಕು. ತಾಲೂಕು ಆಸ್ಪತ್ರೆಗಳಲ್ಲಿಯೇ ಮರಣೋತ್ತರ ಪರೀಕ್ಷೆ ಸೇರಿದಂತೆ ಪ್ರಮುಖ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಿ, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯ ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿ ಬಹುತೇಕ ಹುದ್ದೆಗಳು ಭರ್ತಿಯಾಗಿದ್ದು, ಕೆಲವೆಡೆ ಮಾತ್ರ ಎಂಬಿಬಿಎಸ್ ವೈದ್ಯರ ಕೊರತೆ ಇದೆ. ಈ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲು ಈಗಾಗಲೇ ಆದೇಶ ನೀಡಲಾಗಿದೆ. ತಾಲೂಕು ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಕೊರತೆಯನ್ನು ತಕ್ಷಣ ಸರಿಪಡಿಸಲಾಗುವುದು. ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾಮರ್ಥ್ಯ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಗತ್ಯ ಸೌಲಭ್ಯಗಳೊಂದಿಗೆ ಹೊಸ ಆಸ್ಪತ್ರೆ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ನಕಲಿ ವೈದ್ಯರು ಪತ್ತೆಯಾದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಸಂಬಂಧಪಟ್ಟ ಡಿಎಚ್‌ಒ ಹಾಗೂ ಟಿಎಚ್‌ಒಗಳ ನಿರ್ಲಕ್ಷ್ಯ ಕಂಡುಬಂದರೆ ಅವರ ಮೇಲೂ ಕ್ರಮ ಕೈಗೊಳ್ಳುವ ಕುರಿತು ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಧಾರವಾಡ ಶಾಸಕರಾದ ವಿನಯ ಕುಲಕರ್ಣಿ, ಹುಬ್ಬಳ್ಳಿ-ಧಾರವಾಡ ಪೂರ್ವ ಶಾಸಕರಾದ ಪ್ರಸಾದ ಅಬ್ಬಯ್ಯ, ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್.ಎಚ್. ಕೋನರಡ್ಡಿ ಮಾತನಾಡಿದರು. ವೇದಿಕೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ಪಾಟೀಲ ಉಪಸ್ಥಿತರಿದ್ದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪರಶುರಾಮ ಎಫ್.ಕೆ., ಜಿಲ್ಲಾ ಹಾಗೂ ತಾಲೂಕು ಮಟ್ಟದ ವೈದ್ಯಾಧಿಕಾರಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಗತಿ ಪರೀಶೀಲನೆ ಸಭೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಗತಿ ಪರೀಶೀಲನೆ ನಡೆಸಿದ ಸಚಿವ ಯು.ಟಿ. ಖಾದರ್ ಫರೀದ್, ಶಿಕ್ಷಕರಿಗೆ ಶೀಘ್ರದಲ್ಲೇ 15 ದಿನಗಳ ಕಠಿಣ ತರಬೇತಿ ಆಯೋಜಿಸ ಲಾಗುವುದು ಎಂದು ತಿಳಿಸಿದರು.
ದೈಹಿಕ ಶಿಕ್ಷಕರು ದೈಹಿಕವಾಗಿ ಸದೃಢರಾಗಿದ್ದು, ಚಟುವಟಿಕೆಯಿಂದ ಇರಬೇಕು. ವಿದ್ಯಾರ್ಥಿಗಳಲ್ಲಿ ಕೇವಲ ಕ್ರೀಡಾ ಪ್ರತಿಭೆಯಷ್ಟೇ ಅಲ್ಲದೆ, ಅವರ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಕೌಶಲ್ಯಗಳನ್ನು ಶಿಕ್ಷಕರು ಹೊಂದಿರಬೇಕು. ಪ್ರತಿಯೊಂದು ಶಾಲೆಯಲ್ಲೂ ಫುಟ್ಬಾಲ್, ಕ್ರಿಕೆಟ್, ಹಾಕಿ, ಕಬಡ್ಡಿ, ಖೋ-ಖೋ ಮುಂತಾದ ತಂಡಗಳನ್ನು ಕಡ್ಡಾಯವಾಗಿ ರಚಿಸಬೇಕು ಎಂದು ಹೇಳಿದರು.
ಶಿಕ್ಷಕರು ಶಾಲಾ ಮಟ್ಟದಿಂದ ಉತ್ತಮ ಆಟಗಾರರ ತಂಡವನ್ನು ಆಯ್ಕೆ ಮಾಡಿ ತಾಲೂಕು ಮಟ್ಟದ ತಂಡಗಳನ್ನು ರಚಿಸಬೇಕು. ತಾಲೂಕು ಮಟ್ಟದಿಂದ ಆಯ್ಕೆಯಾದವರನ್ನು ಸೇರಿಸಿ ಜಿಲ್ಲಾ ಮಟ್ಟದ ತಂಡ ಹಾಗೂ ಅಂತಿಮವಾಗಿ ರಾಜ್ಯ ಮಟ್ಟದ ಪ್ರತಿಭಾವಂತ ತಂಡವನ್ನು ಸಿದ್ಧಪಡಿಸಬೇಕು ಎಂದರು.
ಸರ್ಕಾರಿ ಹಾಗೂ ಅಲ್ಪಸಂಖ್ಯಾತರ ಇಲಾಖೆ ಶಾಲೆಗಳಲ್ಲಿ ಉತ್ತಮ ಪಥಸಂಚಲನ ತಂಡವನ್ನು ಬೆಳೆಸಬೇಕು. ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದಂತಹ ದೊಡ್ಡ ಸಮಾರಂಭಗಳಲ್ಲಿ ಶಾಲಾ ಮಕ್ಕಳು ಭಾಗವಹಿಸಿ ಗೌರವ ತರುವಂತಾಗಬೇಕು. ಖಾಸಗಿ ಶಾಲೆಗಳ ಮಾದರಿಯಲ್ಲಿ ಪ್ರತಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಶಾಲಾ ಬ್ಯಾಂಡ್ ತಂಡವನ್ನು ರಚಿಸಬೇಕು. ಇದಕ್ಕೆ ಅಗತ್ಯವಾದ ಆರ್ಥಿಕ ನೆರವು ಹಾಗೂ ಉಪಕರಣಗಳನ್ನು ಸರ್ಕಾರ ನೀಡಲಿದೆ ಎಂದು ಸಚಿವರು ತಿಳಿಸಿದರು.
ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಾಂಸ್ಕೃತಿಕ ಮತ್ತು ಪ್ರತಿಭಾ ಸ್ಪರ್ಧೆಗಳನ್ನು ಆಯೋಜಿಸಿ, ಮಕ್ಕಳ ಹಾಗೂ ಸಿಬ್ಬಂದಿಯಲ್ಲಿರುವ ಪ್ರತಿಭೆಗೆ ವೇದಿಕೆ ಕಲ್ಪಿಸಬೇಕು. ಶಾಲಾ ಹಂತದಲ್ಲಿಯೇ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಮೂಲಕ ಅಲ್ಪಸಂಖ್ಯಾತರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಹೆಮ್ಮೆ ತರುವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ರೂಪಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಯಾಸ್ಮಿನ್ ಬೇಗಂ ವಾಲೀಕಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಹಾಗೂ ಸೇವಾ ಮನೋಭಾವ ಮೂಡಿಸುವ ಉದ್ದೇಶದಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಎನ್ಸಿಸಿ ತರಬೇತಿ ನೀಡಬೇಕು ಎಂದು ಹೇಳಿದರು. ಇಂದಿನ ಕಾಲಘಟ್ಟದಲ್ಲಿ ಮಕ್ಕಳು ದಾರಿ ತಪ್ಪುವ ಸಾಧ್ಯತೆಗಳಿರುವುದರಿಂದ, ಹಿರಿಯರು-ಕಿರಿಯರು ಎಂಬ ಗೌರವ, ನಮ್ಮ ಸಂಸ್ಕೃತಿ ಹಾಗೂ ಸಮಾಜ ಸೇವೆಯ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ. ಶಾಲಾ-ವಸತಿ ನಿಲಯಗಳ ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಎನ್ಸಿಸಿಯ ಶಿಸ್ತು ಮತ್ತು ತರಬೇತಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಧಿಕಾರಿಗಳು ಇಲಾಖೆಯ ದೈಹಿಕ ಶಿಕ್ಷಣ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಲಿದ್ದಾರೆ. ತರಬೇತಿ ಪಡೆದ ಶಿಕ್ಷಕರು ಮುಂದೆ ಶಾಲೆ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಶಿಸ್ತು ಮತ್ತು ಸಂಯಮದ ತರಬೇತಿ ನೀಡಬೇಕು. ಈ ಯೋಜನೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಎನ್ಸಿಸಿ ಇಲಾಖೆಯ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕು ಎಂದು ಸಚಿವರು ಹೇಳಿದರು.
ವೇದಿಕೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪೂರ್ಣಿಮಾ ಚೂರಿ ಉಪಸ್ಥಿತರಿದ್ದರು. ಸಭೆಯಲ್ಲಿ ಅಲ್ಪಸಂಖ್ಯಾತರ ವಸತಿ ಶಾಲೆಯ ಅಧಿಕಾರಿಗಳು, ಸ್ಕೌಟ್ಸ್ ಮತ್ತು ಗೈಡ್ಸ್, ಎನ್ಸಿಸಿ ಅಧಿಕಾರಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.