ಮನೋವೈದ್ಯ ಡಾ. ಆನಂದ ಪಾಂಡುರಂಗಿ ನಿಧನ: ಗಣ್ಯರಿಂದ ಶ್ರದ್ಧಾಂಜಲಿ
ಲೋಕದರ್ಶನ ವರದಿ
ಧಾರವಾಡ 01: ಖ್ಯಾತ ಮನೋವೈದ್ಯ ಹಾಗೂ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಡಾ. ಆನಂದ ಪಾಂಡುರಂಗಿ ಅವರ ನಿಧನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ನುಡಿನಮನ ಸಲ್ಲಿಸಲಾಯಿತು. ಸಭೆಯಲ್ಲಿ ಮಾತನಾಡಿದ ಗಣ್ಯರು, ಡಾ. ಆನಂದ ಪಾಂಡುರಂಗಿಯವರು ಮನೋವೈದ್ಯಕೀಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುವುದರ ಜೊತೆಗೆ, ಮೊಬೈಲ್ ಗೀಳು ಮತ್ತು ಮಾದಕ ವಸ್ತುಗಳಿಂದ ಮಕ್ಕಳು ಹಾಗೂ ಯುವಜನರನ್ನು ದೂರವಿಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಿದ್ದರು ಎಂದು ಸ್ಮರಿಸಿದರು.
ಅವರ ಸೇವೆ ವೈದ್ಯಕೀಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೆ, ಶಿಕ್ಷಣ ಹಾಗೂ ಸಮಾಜಸೇವೆಯಲ್ಲಿಯೂ ಮಹತ್ವದ ಕೊಡುಗೆ ನೀಡಿದೆ ಎಂದು ಹೇಳಿದರು. ಮನಸ್ಸಿನಾಳಕ್ಕೆ ಇಳಿದು ರೋಗಿಗಳೊಂದಿಗೆ ಆತ್ಮೀಯವಾಗಿ ಸಂವಹನ ನಡೆಸುತ್ತಿದ್ದ ಅವರು, ಅನೇಕರಿಗೆ ದಾರೀದೀಪವಾಗಿದ್ದರು. ಅವರ ಸಾಧನೆಗಳು ಹಾಗೂ ಸೇವಾ ಕಾರ್ಯಗಳು ಅವರು ಇಲ್ಲದಿದ್ದರೂ ಸಮಾಜದಲ್ಲಿ ಸದಾ ಸ್ಮರಣೀಯವಾಗಿರುತ್ತವೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ನುಡಿನಮನ ಸಭೆಯಲ್ಲಿ ಶಂಕರ ಕುಂಬಿ, ಸತೀಶ ತುರಮರಿ, ಡಾ. ಸಂಜೀವ ಕುಲಕರ್ಣಿ, ಡಾ. ರಾಜನ್ ದೇಶಪಾಂಡೆ, ಡಾ. ಮಹೇಶ್ ಹೊರಕೇರಿ, ಸಿ.ಯು. ಬೆಳ್ಳಕ್ಕಿ, ಶ್ರೀನಿವಾಸ ವಾಡಪ್ಪಿ, ಚಂದ್ರಶೇಖರ ಅಮೀನಗಡ, ಶಂಕರಲಿಂಗ ಶಿವಳ್ಳಿ, ಎಂ.ಎಂ. ಚಿಕ್ಕಮಠ, ಡಾ. ಎಸ್.ಎಸ್. ಮುದಕವಿ ಸೇರಿದಂತೆ ಹಲವರು ಮಾತನಾಡಿದರು.
ಈ ಸಂದರ್ಭದಲ್ಲಿ ಡಾ. ಆನಂದ ಪಾಂಡುರಂಗಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಒಂದು ನಿಮಿಷ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಾಂತ ಬೆಲ್ಲದ, ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ಡಾ. ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ, ಶಶಿಧರ ತೋಡಕರ, ಪ್ರೊ. ಬಿ.ಎಸ್. ಶಿರೋಳ, ಮಹಾಂತೇಶ ನರೇಗಲ್, ಡಾ. ಶ್ರೀಧರ ಕುಲಕರ್ಣಿ, ಪ್ರಶಾಂತ ಪಾಟೀಲ, ಸರಸ್ವತಿ ಪೂಜಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.