ಧಾರವಾಡ - ಹುಬ್ಬಳ್ಳಿ

ಕವಿವಿಯಲ್ಲಿ ಅಂತರರಾಷ್ಟ್ರೀಯ ಅಹಿಂಸಾ ದಿನಾಚರಣೆ

ಕವಿವಿಯಲ್ಲಿ ಅಂತರರಾಷ್ಟ್ರೀಯ ಅಹಿಂಸಾ ದಿನಾಚರಣೆ


  

ಧಾರವಾಡ 02: ಕರ್ನಾಟಕ ವಿಶ್ವವಿದ್ಯಾಲಯದ ಗಾಂಧೀ ಅಧ್ಯಯನ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಕೋಶ ಹಾಗೂ ಕವಿವಿ ಗಾಂಧೀ ಶಾಂತಿ ಪ್ರತಿಷ್ಠಾನ ಕೇಂದ್ರದ ಸಹಯೋಗದಲ್ಲಿ 157ನೇ ಗಾಂಧೀ ಜಯಂತಿ ಅಂಗವಾಗಿ ಅಂತರರಾಷ್ಟ್ರೀಯ ಅಹಿಂಸಾ ದಿನಾಚರಣೆ ಕಾರ್ಯಕ್ರಮವನ್ನು ಶುಕ್ರವಾರ ಆಯೋಜಿಸಲಾಯಿತು. ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಂ. ಖಾನ್ ಅವರು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಸರ್ವಧರ್ಮ ಪ್ರಾರ್ಥನೆ ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಕುಲಪತಿ ಪ್ರೊ. ಎ.ಎಂ. ಖಾನ್ ಅವರು ವಿದ್ಯಾರ್ಥಿಗಳು ಹಾಗೂ ಉಪಸ್ಥಿತರಿದ್ದವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.  

ಸೆ. 26ರಂದು ಆಯೋಜಿಸಲಾಗಿದ್ದ ಸಿದ್ಧ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಪ್ರಥಮ ಬಹುಮಾನವನ್ನು ಸ್ವಾತಿ ಗಣಪತಿ ಭಟ್ (ಎಂ.ಇ.ಎಸ್‌. ಕಾಲೇಜು, ಸಿರಸಿ), ದ್ವಿತೀಯ ಬಹುಮಾನವನ್ನು ಲೆವಿಸಾ ಫರ್ನಾಂಡಿಸ್ (ಜೆ.ಎಸ್‌.ಎಸ್‌. ಕಾಲೇಜು, ಧಾರವಾಡ) ಹಾಗೂ ತೃತೀಯ ಬಹುಮಾನವನ್ನು ಅಮೃತಾ ಕೆ. (ಕೆ.ಎಲ್‌.ಇ. ಕಾಲೇಜು, ಬಿ.ಬಿ.ಎ. ಹುಬ್ಬಳ್ಳಿ) ಪಡೆದರು. ಸಮಾಧಾನಕರ ಬಹುಮಾನವನ್ನು ಶಾಜಿಯಾ ಖಾನ್ (ಸನಾ ಪದವಿ ಕಾಲೇಜು, ಹುಬ್ಬಳ್ಳಿ) ಹಾಗೂ ಅಫಿಫಾ ಝರೀನ್ ಶೇಖ್ (ಬಂಗೂರ್ನಗರ ಕಾಲೇಜು, ಡಾಂಡೇಲಿ) ಅವರಿಗೆ ನೀಡಲಾಯಿತು.  

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಅರವಿಂದ ಕರಿಬಸನಗೌಡ, ಮೌಲ್ಯಮಾಪನ ಕುಲಸಚಿವ ಪ್ರೊ. ಎ.ಎಂ. ಕಡಕೋಳ, ಗಾಂಧೀ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಶೌಕತ್ ಅಜೀಂ, ಡಾ. ಎಂ.ಬಿ. ದಳಪತಿ, ವಿಭಾಗದ ಅಧ್ಯಾಪಕ ಡಾ. ಶಿವಾನಂದ ಶೆಟ್ಟರ್, ಗಾಂಧೀ ವೇದಿಕೆ ಕವಿವಿಯ ಅಧ್ಯಕ್ಷ ಡಾ. ಎಸ್‌.ಬಿ. ಬಸೇಟ್ಟಿ, ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ವಿಭಾಗದ ವಿದ್ಯಾರ್ಥಿಗಳು ಹಾಗೂ ಎನ್‌ಎಸ್‌ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು. 


ಸುದ್ದಿ ಓದಿ