ರಂಗಭೂಮಿಗೆ ಹೊಸ ಪ್ರತಿಭೆಗಳ ಅನಾವರಣ: ಮಹಾಂತೇಶ ಗಜೇಂದ್ರಗಡ
ಲೋಕದರ್ಶನ ವರದಿ
ಧಾರವಾಡ 01: ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳುವ ಯುವ ಪ್ರತಿಭೆಗಳಿಗೆ ಅಭಿನಯ ಹಾಗೂ ರಂಗಚಟುವಟಿಕೆಗಳ ಕುರಿತು ಅರಿವು ಮೂಡಿಸುವಲ್ಲಿ ಅಭಿನಯ ಕಾರ್ಯಾಗಾರಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ರಂಗಸಮಾಜದ ಸದಸ್ಯ ಮಹಾಂತೇಶ ಗಜೇಂದ್ರಗಡ ಹೇಳಿದರು.
ಧಾರವಾಡ ರಂಗಾಯಣದ ವತಿಯಿಂದ ಅ. 1ರಿಂದ 10ರವರೆಗೆ ಆಯೋಜಿಸಿರುವ ‘ಅಭಿನಯ ಕಾರ್ಯಾಗಾರ’ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಂಗಭೂಮಿಯಲ್ಲಿ ಆಸಕ್ತಿ ಹೊಂದಿರುವ ಯುವಜನರಿಗೆ ಅಭಿನಯದ ವಿವಿಧ ಆಯಾಮಗಳನ್ನು ಪರಿಚಯಿಸುವುದರ ಜೊತೆಗೆ, ಕಲಾವಿದರು ತಮ್ಮೊಳಗಿನ ರಂಗಕೌಶಲ್ಯವನ್ನು ಬೆಳೆಸಿಕೊಳ್ಳಲು ಕಾರ್ಯಾಗಾರ ಸಹಕಾರಿಯಾಗಲಿದೆ ಎಂದರು.
ಕಾರ್ಯಾಗಾರದಲ್ಲಿ ಕಲಾವಿದರು ತರಬೇತಿ ಮೂಲಕ ಅಭಿನಯದ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ರಂಗಭೂಮಿಯಲ್ಲಿ ತಮ್ಮನ್ನು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ನಿರಂತರ ಅಭ್ಯಾಸ ಹಾಗೂ ಕಲಿಕೆಯ ಅಗತ್ಯವಿದೆ ಎಂದು ಅವರು ಹೇಳಿದರು.
ಕಾರ್ಯಾಗಾರದ ನಿರ್ದೇಶಕಿ ಶ್ವೇತಾ ಶ್ರೀನಿವಾಸ ಮಾತನಾಡಿ, ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಧಾರವಾಡದಲ್ಲಿ ಸಾಹಿತ್ಯ ಮತ್ತು ಕಲೆಗಳಿಗೆ ವಿಶೇಷ ಸ್ಥಾನವಿದೆ. ಭಾಷೆಗಳು ಬೇರೆಬೇರೆ ಇದ್ದರೂ ಎಲ್ಲರ ಭಾವನೆ ಒಂದೇ.
ಈ ಕಾರ್ಯಾಗಾರದ ಮೂಲಕ ಹೊಸತನವನ್ನು ಕಲಿಯುವ ಹಾಗೂ ಹೊಸ ಭಾಷೆಯಲ್ಲಿ ನಟನಾ ಕೌಶಲ್ಯ ಬೆಳೆಸಿಕೊಳ್ಳುವ ಅವಕಾಶ ದೊರೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕಾರ್ಯಾಗಾರದ ನಿರ್ದೇಶಕ ಆಸೀಫ್ ಕ್ಷತ್ರೀಯ ಮಾತನಾಡಿ, ರಂಗಭೂಮಿಗೆ ಹೊಸ ಕಲಾವಿದರನ್ನು ರೂಪಿಸುವ ಉದ್ದೇಶದಿಂದ ನಿರಂತರವಾಗಿ ರಂಗ ಪ್ರಯೋಗಗಳು ನಡೆಯುತ್ತಿವೆ. ಕಲಾವಿದರೊಳಗಿನ ಕಲಿಕೆಯ ಆಸಕ್ತಿಯನ್ನು ಕಾರ್ಯಾಗಾರದ ಮೂಲಕ ಪ್ರಾಯೋಗಿಕವಾಗಿ ಬೆಳೆಸಲಾಗುತ್ತಿದೆ ಎಂದರು.
ರಂಗಾಯಣದ ನಿರ್ದೇಶಕ ರಜಾಕೀರ್ ನದಾಫ್ ಮಾತನಾಡಿ, ಇಂದಿನ ಯುವ ಕಲಾವಿದರು ನಟನೆ ಹಾಗೂ ರಂಗಭೂಮಿಯ ಕುರಿತು ಹೆಚ್ಚಿನ ಅರಿವು ಬೆಳೆಸಿಕೊಳ್ಳುವುದು ಅಗತ್ಯ. ಧಾರವಾಡ ರಂಗಾಯಣ ನೀಡುತ್ತಿರುವ ತರಬೇತಿಯ ಪ್ರಯೋಜನ ಪಡೆದು ಯುವಕರು ಉತ್ತಮ ಕಲಾವಿದರಾಗಿ ರೂಪುಗೊಳ್ಳಬೇಕು ಎಂದು ಹೇಳಿದರು. ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನೋದ ದಂಡಿನ ನಿರೂಪಿಸಿದರು.