ಧಾರವಾಡ - ಹುಬ್ಬಳ್ಳಿ

ಸರ್‌. ಸಿದ್ದಪ್ಪ ಕಂಬಳಿ ಅವರ ಜೀವನ ಮತ್ತು ಸಾಧನೆ ಸ್ಮರಿಸಿದ ಗಣ್ಯರು

ಸರ್‌. ಸಿದ್ದಪ್ಪ ಕಂಬಳಿ ಅವರ ಜೀವನ ಮತ್ತು ಸಾಧನೆ ಸ್ಮರಿಸಿದ ಗಣ್ಯರು
Sar siddappa kambaḷi avara jīvana mattu sādhane smarisida gaṇyaru

ಲೋಕದರ್ಶನ ವರದಿ  

ಸರ್‌. ಸಿದ್ದಪ್ಪ ಕಂಬಳಿ ಅವರ ಜೀವನ ಮತ್ತು ಸಾಧನೆ ಸ್ಮರಿಸಿದ ಗಣ್ಯರು  

ಧಾರವಾಡ  12:  ಸರ್‌. ಸಿದ್ದಪ್ಪ ಕಂಬಳಿಯವರು ಸರ್ವ ಜನಾಂಗದ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ ಮಹನೀಯರು. ಕರ್ನಾಟಕದ ಮೊದಲ ಅಹಿಂದ ನಾಯಕರೆಂದು ರೂಪುಗೊಂಡವರಲ್ಲಿ ಸರ್‌. ಸಿದ್ದಪ್ಪ ಕಂಬಳಿಯವರು ಮೊದಲಿಗರಾಗಿದ್ದಾರೆ ಎಂದು ಡಾ. ಗೀರೀಶ ದೇಸೂರ ಅಭಿಪ್ರಾಯಪಟ್ಟರು.  

ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಸರ್‌. ಸಿದ್ದಪ್ಪ ಕಂಬಳಿ ಪ್ರತಿಷ್ಠಾನದ ದತ್ತಿ ಅಂಗವಾಗಿ ಸೆ. 11ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸರ್‌. ಸಿದ್ದಪ್ಪ ಕಂಬಳಿ ಅವರ ಜೀವನ ಮತ್ತು ಸಾಧನೆ’ ಕುರಿತು ಅವರು ಮಾತನಾಡಿದರು.  

ಜನಕಲ್ಯಾಣವನ್ನೇ ಮುಖ್ಯ ಗುರಿಯಾಗಿಸಿಕೊಂಡು ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ, ಜೊತೆಗೆ ತಮ್ಮ ವಕೀಲ ವೃತ್ತಿಯಲ್ಲಿಯೂ ತೊಡಗಿಸಿಕೊಂಡಿದ್ದ ಸರ್‌. ಸಿದ್ದಪ್ಪ ಕಂಬಳಿಯವರು 1917ರಲ್ಲಿ ಹುಬ್ಬಳ್ಳಿ ನಗರಸಭೆ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾದರು. 1930ರವರೆಗೆ ಚುನಾಯಿತ ಸದಸ್ಯರಾಗಿ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಕೀರ್ತಿ ಅವರದು.  

ಅದೇ ರೀತಿ ಹುಬ್ಬಳ್ಳಿ ವಕೀಲರ ಸಂಘದ ಅಧ್ಯಕ್ಷರಾಗಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರ ಪ್ರಾಮಾಣಿಕ ಹಾಗೂ ದಕ್ಷ ಆಡಳಿತ ಮತ್ತು ಜನಪರ ಸೇವೆಯಿಂದಾಗಿ ಜನರು ಅವರ ಮೇಲೆ ಅಪಾರ ವಿಶ್ವಾಸ ಹೊಂದಿದ್ದರು.  

1927ರಲ್ಲಿ ಮುಂಬೈ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ಮುಂದೆ ಉಪಸಭಾಪತಿಯಾಗಿ ಕಾರ್ಯನಿರ್ವಹಿಸಿದರು. ಮುಂಬೈ ಸರ್ಕಾರದಲ್ಲಿ ಸಚಿವರಾಗಿದ್ದ ಸಂದರ್ಭದಲ್ಲಿ ಒಂದೇ ಅವಧಿಯಲ್ಲಿ ಏಳು ಖಾತೆಗಳನ್ನು ನಿರ್ವಹಿಸುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿ ಅವರು ಮೆಚ್ಚುಗೆಗೆ ಪಾತ್ರರಾಗಿದ್ದರು. ರಾಜ್ಯಪಾಲ ಸರ್‌. ಲೆಸ್ಲಿ ವಿಲ್ಸನ್ ಅವರು ಕಂಬಳಿಯವರನ್ನು ‘ಒಬ್ಬ ಧರ್ಮಗುರು’ ಎಂದು ಸಂಬೋಧಿಸುತ್ತಿದ್ದರು.  

ಅಕ್ಷರಸ್ಥರು, ಬಡವರು, ಹಿಂದುಳಿದವರು ಸೇರಿದಂತೆ ಅನೇಕ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸರ್‌. ಸಿದ್ದಪ್ಪ ಕಂಬಳಿಯವರು ಪ್ರಯತ್ನಿಸಿದ್ದರು. ಭಾರತೀಯರಿಗೆ ಪರ್ಯಾಯ ರಾಜಕಾರಣದ ಧ್ರುವೀಕರಣಕ್ಕೆ ಕಾರಣರಾದವರಲ್ಲಿ ಅವರೂ ಒಬ್ಬರು ಎಂದು ಡಾ. ಗೀರೀಶ ದೇಸೂರ ಹೇಳಿದರು.  

ಅಧ್ಯಕ್ಷತೆ ವಹಿಸಿದ್ದ ಪ್ರೊ. ಶಶಿಧರ ತೋಡಕರ್ ಮಾತನಾಡಿ, ಇಂದಿಗೂ ಸಮಾಜದಲ್ಲಿ ಸಮಾನತೆ ತರುವ ಪ್ರಯತ್ನಗಳು ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಸ್ವಾತಂತ್ರ್ಯಪೂರ್ವದಲ್ಲಿಯೇ ಸಮಾನತೆಗಾಗಿ ಹೋರಾಡಿದ ಸರ್‌. ಸಿದ್ದಪ್ಪ ಕಂಬಳಿಯವರ ವ್ಯಕ್ತಿತ್ವದ ಕುರಿತು ಇನ್ನಷ್ಟು ಐತಿಹಾಸಿಕ ಹಾಗೂ ಚಾರಿತ್ರಿಕ ದಾಖಲೆಗಳನ್ನು ಒಳಗೊಂಡ ವಿಸ್ತೃತ ಕೃತಿಗಳು ಹೊರಬರಬೇಕಾಗಿದೆ ಎಂದು ಹೇಳಿದರು.  

ರಾಷ್ಟ್ರನಾಯಕರಾಗುವ ಎಲ್ಲ ಗುಣಗಳನ್ನು ಹೊಂದಿದ್ದ ಸರ್‌. ಸಿದ್ದಪ್ಪ ಕಂಬಳಿಯವರನ್ನು ಬೆಳೆಸಿದವರೇ ಅವರನ್ನು ಹತ್ತಿಕ್ಕುವ ಪ್ರಯತ್ನ ಮಾಡಿದ್ದು ಬೇಸರದ ಸಂಗತಿ ಎಂದು ಅವರು ವಿಷಾದಿಸಿದರು.  

ಕಾರ್ಯಕ್ರಮದಲ್ಲಿ ಸರ್‌. ಸಿದ್ದಪ್ಪ ಕಂಬಳಿ ಪ್ರತಿಷ್ಠಾನದ ಶಿವಶರಣ ಕಳಬಶೆಟ್ಟರ, ಚನ್ನಬಸಪ್ಪ ಮರದ ಉಪಸ್ಥಿತರಿದ್ದರು. ಶಂಕರ ಕುಂಬಿ ಸ್ವಾಗತಿಸಿದರು. ಡಾ. ಧನ್ವಂತ ಹಾಜವಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಗುರು ಹಿರೇಮಠ ವಂದಿಸಿದರು.  

ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ವೀರಣ್ಣ ಒಡ್ಡೀನ, ಎಸ್‌. ಚಂದ್ರಶೇಖರ, ಪ್ರೊ. ಶಾಂತಿನಾಥ ದಿಬ್ಬದ, ಪ್ರೊ. ಬಿ.ಎಸ್‌. ಶಿರೋಳ, ರಾಜೇಂದ್ರ ಸಾವಳಗಿ, ಉಮೇಶ ಕಟಗಿ, ಸವಿತಾ ಕುಸುಗಳ್ಳ, ಡಿ.ಎಂ. ನಿಡವಣಿ, ಮಹಾಂತೇಶ ನರೇಗಲ್ಲ, ಶಿವಾನಂದ ಹೂಗಾರ, ಎಂ. ಸುದರ್ಶನರಾಜ ಸೇರಿದಂತೆ ಸರ್‌. ಸಿದ್ದಪ್ಪ ಕಂಬಳಿಯವರ ಅಭಿಮಾನಿಗಳು ಹಾಗೂ ಮತ್ತಿತರರು ಭಾಗವಹಿಸಿದ್ದರು. 


ಸುದ್ದಿ ಓದಿ