ಲೇಖನಗಳು

ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟ ಶೂರ ಸಂಗೊಳ್ಳಿ ರಾಯಣ್ಣ

ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟ ಶೂರ ಸಂಗೊಳ್ಳಿ ರಾಯಣ್ಣ

ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟನಾಗಿ ಈಸ್ಟ್‌ ಇಂಡಿಯಾ ಕಂಪನಿಯ ವಿರುದ್ಧ ತನ್ನ ಜೀವನದ ಕೊನೆಯವರೆಗೂ ದೇಶಕ್ಕಾಗಿ ಹೋರಾಡಿದ ಮಹಾನ್ ಶೂರ ಧೀರ ಸೈನಿಕ ಸಂಗೊಳ್ಳಿ ರಾಯಣ್ಣ. ಅಂದಿನ ಕಿತ್ತೂರು ಸಾಮ್ರಾಜ್ಯದ ಬೈಲಹೊಂಗಲ (ಸಂಪಗಾವಿ) ತಾಲ್ಲೂಕಿನ ಸಂಗೊಳ್ಳಿಯಲ್ಲಿ ಅಗಸ್ಟ್‌ 15, 1798ರಲ್ಲಿ ಭರಮಪ್ಪ ಹಾಗೂ ಕೆಂಚವ್ವ ಇವರ ಮಗನಾಗಿ ಹುಟ್ಟಿದ ಸಂಗೊಳ್ಳಿ ರಾಯಣ್ಣ ಮಹಾನ್ ಯೋಧನಾಗಿ ರೂಪುಗೊಂಡನು.  ದೇಶಪ್ರೇಮ ಈತನ ರಕ್ತದಲ್ಲಿಯೇ ಮೈಗೊಡಿಕೊಂಡು ಬಂದಿತ್ತು. ಅಪ್ರತಿಮ ಯೋಧನಾಗಿ ಬ್ರಿಟೀಷರ ವಿರುದ್ದ ದೇಶದ ಸ್ವಾತಂತ್ರ್ಯಕ್ಕಾಗಿ ವೀರ ರಾಣಿ ಚೆನ್ನಮ್ಮಳ ಬಂಟನಾಗಿ ತನ್ನ ಕೊನೆಯ ಉಸಿರಿನವರೆಗೆ ಹೋರಾಡಿದನು.   

ಸಂಗೊಳ್ಳಿ ರಾಯಣ್ಣ 1824 ರಲ್ಲಿ ಬ್ರಿಟೀಷರ ವಿರುದ್ದ ದಂಗೆಯಲ್ಲಿ ಭಾಗವಹಿಸಿ ಬ್ರಿಟಿಷರಿಂದ ಬಂಧಿಸಲ್ಪಟ್ಟನು.  ಕೆಲದಿನಗಳ ನಂತರ ಆತನನ್ನು ಬಿಡುಗಡೆ ಮಾಡಲಾಯಿತು.  ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮಲ್ಲಸರ್ಜನು ತೀರಿ ಹೋದಾಗ ಕಿತ್ತೂರಿನ ರಾಣಿ ಚೆನ್ನಮ್ಮಳು ದೇಶದ ಸ್ವಾತಂತ್ರ್ಯಕ್ಕಾಗಿ ವೀರಾವೇಶದಿಂದ ಬ್ರಿಟೀಷರ ವಿರುದ್ಧ ಹೋರಾಡಿದಳು. ಮೊದಲ ಬಾರಿಗೆ ಬ್ರಿಟೀಷರ ವಿರುದ್ಧ ಮೇಲುಗೈ ಸಾಧಿಸಿದಳು.  ಯುದ್ಧದಲ್ಲಿ ತನ್ನ ಪತಿ ರಾಜ ಮಲ್ಲಸರ್ಜ ಹಾಗೂ ಮಗನ ನಿಧನಾ ನಂತರ 1824 ಶಿವಲಿಂಗಪ್ಪನನ್ನು ದತ್ತು ಪುತ್ರನಾಗಿ ಸ್ವೀಕರಿಸಿ ಅವನನ್ನು ಸಿಂಹಾಸನದ ಉತ್ತರಾಧಿಕಾರಿಯನ್ನಾಗಿ ಮಾಡಿದಳು. ಕಿತ್ತೂರಿನ ರಾಣಿ ಚೆನ್ನಮ್ಮಳಿಗೆ ನಿಷ್ಠನಾಗಿದ್ದ ಸಂಗೊಳ್ಳಿ ರಾಯಣ್ಣ ದತ್ತು ಪಡೆದಿದ್ದ ಬಾಲಕ ಶಿವಲಿಂಗಪ್ಪನನ್ನು ಆಢಳಿತಗಾರನಾಗಿ ಸಿಂಹಾಸನದಲ್ಲಿ ಪ್ರತಿಷ್ಠಾಪಿಸಲು ಬಯಸಿದನು. 1824 ರಿಂದ 1829 ರವರೆಗೆ ಯೋಧರನ್ನು ಒಗ್ಗೂಡಿಸಿ ಬ್ರಿಟೀಷರ ವಿರುದ್ಧ ಗೆರಿಲ್ಲಾ ಯುದ್ದವನ್ನು ಮುಂದುವರೆಸಿದನು. ಆಧರೆ ಕೊನೆಗೆ ರಾಯಣ್ಣನನ್ನು ಬಂಧಿಸಿ ಆತನನ್ನು ಗಲ್ಲಿಗೇರಿಸಲಾಯಿತು.    

ರಾಯಣ್ಣನಿಗೆ ವೀರರಾಯ, ವೀರ ಸಂಗೊಳ್ಳಿ ರಾಯಣ್ಣ,  ಶೂರ ರಾಯಣ್ಣ, ಧೀರ ರಾಯಣ್ಣ ಕ್ರಾಂತೀವೀರ ರಾಯಣ್ಣ ಮೊದಲಾದ ಹೆಸರುಗಳಿಂದ ಖ್ಯಾತಿ ಹೊಂದಿದ್ದಾನೆ.  ತನ್ನ ಹುಟ್ಟಿನಿಂದ ಕೊನೆಯ ಉಸಿರಿನವರೆಗೆ ದೇಶಕ್ಕಾಗಿಯೇ ಹೋರಾಡಿ ಬ್ರಿಟಿಷರ ವಿರುದ್ಧ ಗರ್ಜಿಸಿ ಹೋರಾಡಿದ ಅಪ್ರತಿಮ ದೇಶಪ್ರೇಮಿ ಸಂಗೊಳ್ಳಿಯ ರಾಯಣ್ಣ.  ರಾಯಣ್ಣನ ಚರಿತ್ರೆಯನ್ನು ಕೇಳಿದರೆ ಇಂದಿಗೂ ಮೈಮನಗಳಲ್ಲಿ ರಕ್ತ ಉಕ್ಕೇರುತ್ತದೆ.   

ಕಿತ್ತೂರು ನಾಡಿನ ಸ್ವಾತಂತ್ರ್ಯಕ್ಕಾಗಿ ತನ್ನ ಸರ್ವಸ್ವವನ್ನೇ ಅರ​‍್ಿಸಿ ಹೋರಾಡಿದರು.  ಬ್ರಿಟೀಷರು ಈತನನ್ನು ದೇಶದ್ರೋಹಿ ಎಂದು ಪಟ್ಟಕಟ್ಟಿ ವಿಚಾರಣೆ ನಡೆಸಿ ಏಳು ಜನ ಅನುಯಾಯಿಗಳೊಂದಿಗೆ ರಾಯಣ್ಣನನ್ನು ಸಾರ್ವಜನಿಕವಾಗಿ ನಂದಗಡದಲ್ಲಿ ಗಲ್ಲಿಗೇರಿಸಿದರು.   

ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು, ಭಾರತ ದೇಶವು ಸ್ವಾತಂತ್ರ್ಯ ಗಳಿಸಿದ ಅಗಸ್ಟ್‌ 15 ರಂದು ಆದರೆ ಬ್ರಿಟೀಷರು ಆತನನ್ನು ಗಲ್ಲಿಗೇರಿಸಿದ ದಿನವೂ ಕೂಡ ನಮ್ಮ ದೇಶವು ಗಣರಾಜ್ಯೋತ್ಸವವನ್ನು ಆಚರಿಸುವ ಜನವರಿ 26 ರಂದೇ ಆಗಿರುವುದು ದೇಶಭಕ್ತ ಹೋರಾಟಗಾರನ ಸ್ವಾತಂತ್ರ್ಯ ಯೋಧನ ಚರಿತ್ರೆ ನಾವೆಲ್ಲರೂ ಹೆಮ್ಮೆ ಪಡುವ ವಿಷಯವಾಗಿದೆ.  ಸಂಗೊಳ್ಳಿ ರಾಯಣ್ಣ ಚರಿತ್ರೆ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿದಿದೆ.    

ರಾಯಣ್ಣ ಜೀವನ, ಹೋರಾಟ, ದೇಶಪ್ರೇಮ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದೆ. ದೇಶಕ್ಕಾಗಿ ಹೋರಾಡುವ ಪ್ರತಿಯೊಬ್ಬ ಯೋಧರಿಗೂ ಇಂದಿನ ಯುವ ಪೀಳಿಗೆಗೂ ಸ್ಪೂರ್ತಿದಾಯಕವಾಗಿದೆ. 

- ಡಾ. ಜಯಪ್ರಕಾಶ ನಾ. ಕರಜಗಿ 


- * * * - 


ಸುದ್ದಿ ಓದಿ