ಸ್ವಾತಂತ್ರ್ಯ ಯೋಧರ ತ್ಯಾಗ ಸದಾ ಸ್ಮರಣೀಯ: ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು
ಬಳ್ಳಾರಿ 13: ನಮ್ಮ ದೇಶದ ಲಕ್ಷಾಂತರ ಜನರ ತ್ಯಾಗ ಬಲಿದಾನಗಳ ಫಲ ಈ ಸ್ವಾತಂತ್ರ್ಯ ಇದರ ಬಗ್ಗೆ ಎಲ್ಲರೂ ಅರಿತುಕೊಂಡು ನಮ್ಮ ಮುಂದಿನ ಜೀವನ ರೂಪಿಸಿಕೊಳ್ಳಬೇಕು ಎಂದು ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು.
ಅಜಾದಿ ಕಾ ಅಮೃತ್ ಮಹೋತ್ಸವ ಮತ್ತು ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ನಗರದ ಎಚ್.ಆರ್.ಗವಿಯಪ್ಪ ವೃತ್ತದಲ್ಲಿರುವ 150ಅಡಿ ಎತ್ತರ ಬೃಹತ್ ಧ್ವಜ ಸ್ತಂಭದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಇಂದು ದೇಶಾದ್ಯಂತ ಹಬ್ಬದ ವಾತಾವರಣ ಇದೆ .1947 ಆಗಸ್ಟ್ 15ರ ಭಾರತ ಮತ್ತೆ ಕಣ್ಮುಂದೆ ಬಂದಿದೆ.ಇದು ನಮ್ಮ ಸ್ವಾತಂತ್ರ್ಯದ ಅಮೃತ ಘಳಿಗೆ ಎಂದು ಬಣ್ಣಿಸಿದ ಸಚಿವ ಶ್ರೀರಾಮುಲು ಅವರು ಸ್ವಾತಂತ್ರ್ಯ ಅಮೃತ ಮಹೋತ್ಸವದ ಭಾಗವಾಗಿ 75 ವಾರಗಳಿಂದ ದೇಶಾದ್ಯಂತ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ. ನಮ್ಮ ಹೋರಾಟ, ಹೋರಾಟಗಾರರನ್ನ, ಅವರ ತ್ಯಾಗ-ಬಲಿದಾನಗಳನ್ನ ನೆನೆದು ಗೌರವಿಸೋ ಕೆಲಸ ಆಗುತ್ತಿದೆ. ಇಂದಿನ ಮಕ್ಕಳು ನಾಳಿನ ಭಾರತದ ಭವಿಷ್ಯ. ಯಾವುದೇ ಉತ್ತಮ ಭವಿಷ್ಯ, ಇತಿಹಾಸ ಇಲ್ಲದೆ ಪೂರ್ಣ ಆಗಲ್ಲ. ಆದ್ದರಿಂದ ನಮ್ಮ ದೇಶದ ಶ್ರೀಮಂತ ಇತಿಹಾಸದ ಕುರಿತು ಜಾಗೃತಿ ಮೂಡಿಸುವುದು ಈ ಅಮೃತ ಮಹೋತ್ಸವದ ಗುರಿ ಎಂದರು.
ಯುವ ಪೀಳಿಗೆಯಲ್ಲಿ ಸ್ವಾತಂತ್ರ್ಯ ಯೋಧರು ಮಾಡಿದ ತ್ಯಾಗ-ಬಲಿದಾನಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಅಜಾದಿ ಕಾ ಅಮೃತ್ ಮಹೋತ್ಸವ ಆಚರಿಸಲಾಗುತ್ತಿದೆ ಎಂದರು. ದೇಶದ ಸ್ವಾತಂತ್ರ್ಯಕ್ಕಾಗಿ ನಡೆಸಿದ ಕೆಲ ಹೋರಾಟದ ಕಥನಗಳನ್ನು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಸಾವಿರಾರು ಸೈನಿಕರ ತಂಡದೊಂದಿಗೆ ಬ್ರಿಟಿಷರ ನಿದ್ದೆ ಗೆಡಿಸಿದ್ದ ಸಂಗೊಳ್ಳಿ ರಾಯಣ್ಣ. ಗೆರಿಲ್ಲ ಯುದ್ಧಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ಮಾಡಿದ್ದರು. ಹೇಗಾದರೂ ಮಾಡಿ ರಾಯಣ್ಣನನ್ನು ಹಿಡಿಯಬೇಕೆಂದು ನಿರ್ಧರಿಸಿದ ಬ್ರಿಟಿಷರು ಅವರ ಮಾವ ಲಕ್ಷ್ಮಣನನ್ನು ದಾಳವಾಗಿ ಬಳಸಿಕೊಂಡು, ಡೋರಿ ಹಳ್ಳದಲ್ಲಿ ರಾಯಣ್ಣ ಸ್ನಾನ ಮಾಡಲು ಬರುತ್ತಾರೆಂದು ತಿಳಿದು ಮೋಸದಿಂದ ಆತನನ್ನು ಸೆರೆ ಹಿಡಿಯುತ್ತಾರೆ. ತನ್ನ ಖಡ್ಗ ಮಾವ ಲಕ್ಷ್ಮಣನಿಗೆ ನೀಡಿದ್ದ ರಾಯಣ್ಣ ಬ್ರಿಟಿಷರನ್ನು ಎದುರಿಸಲು ಖಡ್ಗ ಕೇಳಿದಾಗ ಅದನ್ನು ಆತ ಕೊಡುವುದಿಲ್ಲ. ಆದ್ದರಿಂದ ಬಂಧನಕ್ಕೊಳಗಾಗಿ ನಂತರ ಗಲ್ಲು ಶಿಕ್ಷೆಗೆ ಗುರಿಯಾದ ವೀರ ಸಂಗೊಳ್ಳಿ ರಾಯಣ್ಣ. ಆತನನ್ನು ಸೆರೆ ಹಿಡಿದ ಜಾಗ ಡೋರಿ ಹಳ್ಳ. ಇದು ಇಂದಿಗೂ ರಾಯಣ್ಣನ ಪೂಜೆಯ ಸ್ಥಳವಾಗಿದೆ ಎಂದು ಅವರು ವಿವರಿಸಿದರು.
ಏಳು ಅಡಿ ಎತ್ತರದ ಅಜಾನುಬಾಹು ಆಗಿದ್ದ ಲಕ್ಷ್ಮಣ, 10 ಅಡಿ ಎತ್ತರದ ಗೋಡೆಗಳನ್ನು ಲೀಲಾ ಜಾಲವಾಗಿ ಹಾರಿಬಿಡುತ್ತಿದ್ದ. ತನ್ನ ಪಡೆಯೊಂದಿಗೆ ಬ್ರಿಟಿಷರ ನಿದ್ದೆಗೆಡಿಸಿದ್ದ ಲಕ್ಷ್ಮಣನನ್ನು ಆತನ ನಿಕಟ ವರ್ತಿ ಮೂಲಕ ಮಾಹಿತಿ ಪಡೆದು ಮೋಸದಿಂದ ಗುಂಡಿಟ್ಟಿ ಕೇವಲ 24ನೇ ವಯಸ್ಸಿನಲ್ಲಿ ಕೊಲ್ಲಲಾಯಿತು. ಇಂದಿಗೂ ಸಾವಿರಾರು ಯುವಕರ ಶಕ್ತಿ ಸಿಂಧೂರ ಲಕ್ಷ್ಮಣ ಎಂದರು.
ಕಷ್ಟಗಳಲ್ಲೇ ಬೆಂದು, ದೇಶಕ್ಕೆ ತಮ್ಮನ್ನು ಸಮರ್ಿಸಿಕೊಂಡು ದೇಶದ ಕೀರ್ತಿಯಾಗಿರೋ ನಮ್ಮ ಪ್ರಧಾನಿ ಮೋದಿ, ನಮ್ಮ ರಾಷ್ಟ್ರಪತಿ ದ್ರೌಪದಿ ಮುರ್ಮು, ಹಿಂದಿನ ರಾಷ್ಟ್ರಪತಿಗಳಾದ ಡಾ. ಕಲಾಂ ಸೇರಿದಂತೆ, ಒಲಂಪಿಕ್, ಕಾಮನ್ವೆಲ್ತ್ ಕ್ರೀಡಾಕೂಟಗಳಲ್ಲಿ, ರಾಜಕಾರಣ, ಕಲೆ, ಸಾಹಿತ್ಯ, ಸಿನೆಮಾ, ಆರ್ಥಿಕತೆ, ಕೈಗಾರಿಕಾ ವಲಯಗಳಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದ ಸಾಧಕರಂತೆ ಇಲ್ಲಿ ನೆರೆದಿರುವ ಪ್ರತಿಯೊಬ್ಬ ಯುವಕ ಯುವತಿಯರು ಆಗಬೇಕು. ನವ ಭಾರತ ನಿರ್ಮಾಣ ನಿಮ್ಮಿಂದ ಆಗಬೇಕು ಎಂದರು. ಭಾರತವನ್ನು ನಮ್ಮ ಪ್ರಧಾನಿ ಮೋದಿ ಅವರ ಕಲ್ಪನೆಯಂತೆ "ವಿಶ್ವಗುರು" ಮಾಡಿದಾಗ ನಮ್ಮ ಸ್ವಾತಂತ್ರ್ಯ ಹೋರಾಟಕ್ಕೆ.. ಅಂದು ನಡೆದ ತ್ಯಾಗ ಬಲಿದಾನಗಳಿಗೆ ಸಾರ್ಥಕತೆ ದೊರೆಯುತ್ತದೆ. ನವ ಭಾರತ, ನವ ಕರ್ನಾಟಕ ನಿರ್ಮಾಣಕ್ಕೆ ಕೈಜೋಡಿಸಿ ಎಂದರು.
ಶಾಸಕರಾದ ಸೋಮಶೇಖರರೆಡ್ಡಿ,ವೈ.ಎಂ.ಸತೀಶ್, ಮಹಾನಗರ ಪಾಲಿಕೆ ಮೇಯರ್ ರಾಜೇಶ್ವರಿ, ಬುಡಾ ಅಧ್ಯಕ್ಷ ಪಾಲನ್ನ, ಎಪಿಎಂಸಿ ಅಧ್ಯಕ್ಷ ಉಮೇಶ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಎಸ್ಪಿ ಸೈದುಲು ಅಡಾವತ್,ಎಡಿಸಿ ಪಿ.ಎಸ್.ಮಂಜುನಾಥ, ಸಹಾಯಕ ಆಯುಕ್ತ ಡಾ.ಆಕಾಶ ಶಂಕರ್, ಮಹಾನಗರ ಪಾಲಿಕೆಯ ಆಯುಕ್ತರಾದ ರುದ್ರೇಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು,ಜನಪ್ರತಿನಿಧಿಗಳು ಇದ್ದರು.