ಮನರಂಜನೆ

ಚಂದನವನದಲ್ಲಿ 35 ವರ್ಷ ಪೂರೈಸಿದ ಟಗರು : ಅಭಿಮಾನಿಗಳೊಂದಿಗೆ ಶಿವಣ್ಣ ಸಂಭ್ರಮಾಚರಣೆ

ಚಂದನವನದಲ್ಲಿ 35 ವರ್ಷ ಪೂರೈಸಿದ ಟಗರು : ಅಭಿಮಾನಿಗಳೊಂದಿಗೆ ಶಿವಣ್ಣ ಸಂಭ್ರಮಾಚರಣೆ

ಬೆಂಗಳೂರು, ಫೆ 19: ಹ್ಯಾಟ್ರಿಕ್​ ಹೀರೋ ಶಿವರಾಜ್ ಕುಮಾರ್ ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ 35 ವರ್ಷಗಳಾಗಿವೆ. ಅವರ ಅಭಿನಯದ ಮೊದಲ ಚಿತ್ರ ಆನಂದ್ ಮುಹೂರ್ತ ಇದೇ ದಿನದಂದು ನೆರವೇರಿತ್ತು.  ಈ ಖುಷಿಯನ್ನು ಕೇಕ್ ಕತ್ತರಿಸಿ, ಅಭಿಮಾನಿಗಳೊಡನೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ,  ಚಿತ್ರರಂಗದಲ್ಲಿ ಕೈಹಿಡಿದು ನಡೆಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

  “ನಿಮ್ಮೆಲ್ಲರ ಪ್ರೀತಿಯಿಂದ ನನಗೆ ಇಷ್ಟು ಎನರ್ಜಿ ಇದೆ. ಚಿತ್ರರಂಗ, ಅಭಿಮಾನಿಗಳು, ಮಾಧ್ಯಮ ಸೇರಿದಂತೆ ಎಲ್ಲರ ಸಹಕಾರದಿಂದ ಇಷ್ಟು ವರ್ಷ ಪೂರೈಸಿದ್ದೇನೆ. ಕೆಲವು ಸಿನಿಮಾಗಳು ಗೆದ್ದಿವೆ, ಕೆಲವು ಸೋತಿವೆ. ಈ ಹೆಸರು, ಸ್ಟಾರ್ ಗಿರಿ ಎಲ್ಲವೂ ಅಭಿಮಾನಿಗಳಿಂದ ಸಿಕ್ಕಿದ್ದು. ಅದೇ ಧೈರ್ಯದಲ್ಲಿ ಯಾರೇ ಕಥೆ ಹೇಳಿದ್ರೂ ಒಪ್ಪಿ ಸಿನಿಮಾ ಮಾಡ್ತೀನಿ. ನನಗೆ ಸ್ಟಾರ್ ನಿರ್ದೇಶಕರು, ಹೊಸಬರು, ಹಿರಿಯ ನಿರ್ದೇಶಕರು ಅನ್ನುವ ಭೇದವಿಲ್ಲ” ಎಂದರು.ಇನ್ನು ಕೊರೊನಾ ಸಮಯದಲ್ಲಿ ಎಲ್ಲರೂ ಹೋರಾಟ ಮಾಡಿದ್ದೇವೆ. ಎಲ್ಲರೂ ಅವರ ಕೈಲಾದ ಸಹಾಯ ಮಾಡಿದ್ದಾರೆ, ನಾನು ಮಾಡಿದ್ದೇನೆ. ನಿಧಾನವಾಗಿ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ ಎಂದರು.ಪ್ರತಿಭೆಗೆ ತಾರತಮ್ಯವಿಲ್ಲ.  ಯಾರಲ್ಲಿ ಯಾವ ರೀತಿಯ ಕಲೆ ಹುದುಗಿರುತ್ತದೆಯೋ ಗೊತ್ತಿರುವುದಿಲ್ಲ.  ಇದಕ್ಕೆ ನಮ್ಮ ತಂದೆ ಡಾ. ರಾಜ್ ಕುಮಾರ್ ಅವರೇ ಉದಾಹರಣೆ.  ಹೀಗಾಗಿ ಯಾರೇ ಕಥೆ ಹೇಳಿದರೂ ಒಪ್ಪಿ ಸಿನಿಮಾ ಮಾಡುತ್ತೇನೆ. ಸ್ಟಾರ್ ನಿರ್ದೇಶಕರು, ಹೊಸಬರು, ಹಿರಿಯ ನಿರ್ದೇಶಕರು ಅನ್ನುವ ಭೇದವಿಲ್ಲ ಎಂದು ಹೇಳಿದರು. 

 ಶಿವರಾಜ್ ಕುಮಾರ್ ಆನಂದ್ ಸಿನಿಮಾದ ಮೂಲಕ ನಾಯಕನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. 1986ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಸಿಂಗೀತಂ ಶ್ರೀನಿವಾಸ್ ರಾವ್ ಈ ಚಿತ್ರ ನಿರ್ದೇಶಿಸಿದ್ದರು. ಅಲ್ಲಿಂದ ಇಲ್ಲಿಯವರೆಗೂ ಸುಮಾರು 125ಕ್ಕೂ ಅಧಿಕ ಸಿನಿಮಾಗಳಲ್ಲಿ ಸೆಂಚುರಿ ಸ್ಟಾರ್ ನಟಿಸಿದ್ದಾರೆ. ಸೋಲು, ಗೆಲುವು, ಬಾಕ್ಸ್ ಆಫೀಸ್ ಹಿಟ್ ಎಲ್ಲವನ್ನೂ ಕಂಡಿದ್ದಾರೆ. ಹಾಗಾಗಿ, ಶಿವಣ್ಣ ಅವರನ್ನು ಬಾಕ್ಸ್ ಆಫೀಸ್ ಬ್ರಹ್ಮ ಅಂತಾರೆ. 58ರ ವಯಸ್ಸಿನಲ್ಲೂ ಶಿವರಾಜ್ ಕುಮಾರ್ ಬಹಳ ಬ್ಯುಸಿ ಇದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ. ಭಜರಂಗಿ 2 ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಶಿವಪ್ಪ ಸಿನಿಮಾ ಕೂಡ ರಿಲೀಸ್‌ಗೆ ಸಿದ್ಧವಾಗಿದೆ. ಈ ಎಲ್ಲ ಖುಷಿಯೊಂದಿಗೆ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಶಿವರಾಜ್‍ಕುಮಾರ್ ಸಂಭ್ರಮಿಸಿದ್ದು, ಅಭಿಮಾನಿಗಳು ಶಿವಣ್ಣನಿಗೆ ಮಲ್ಲಿಗೆ ಹೂವಿನ ಕಿರೀಟ ಹಾಗೂ ಹಾರ ಹಾಕಿ ಸನ್ಮಾನಿಸಿದರು.

  



ಸುದ್ದಿ ಓದಿ