‘ಶ್ಯಾಡೊ’ ಫೆ 5 ರಂದು ಬಿಡುಗಡೆ
ಬೆಂಗಳೂರು, ಜ 23: ಶ್ರೀ ಕನಕ ದುರ್ಗಾ ಚಲನಚಿತ್ರ ಅರ್ಪಿಸಿ, ಚಕ್ರವರ್ತಿ ಅವರು ನಿರ್ಮಾಣ ಮಾಡಿರುವ 'ಶ್ಯಾಡೊ' ಸಿನಿಮಾ ಮುಂದಿನ ತಿಂಗಳ 5ರಂದು ಬಿಡುಗಡೆ ಆಗಲಿದೆ. ರವಿ ಗೌಡ ನಿರ್ದೇಶನ ಮಾಡಿರುವ ಶ್ಯಾಡೊ ಮಾಸ್ ಜತೆಗೆ ಕ್ಲಾಸ್ ಸಿನಿಮಾ ಎಂದು ಸ್ವತಃ ಚಿತ್ರದ ನಾಯಕ ಮರಿ ಟೈಗರ್ ವಿನೋದ್ ಪ್ರಭಾಕರ್ ಹೇಳಿಕೊಂಡಿದ್ದಾರೆ.‘ಕೊನೇ ಕ್ಷಣದಲ್ಲಿ ಬಿಡುಗಡೆ ಮಾಡುವ ನಿರ್ಧಾರವಾಯ್ತು. ಎಲ್ಲೋ ಒಂದು ಕಡೆ ಭಯ ಇದೆ. ಆದರೂ ಒಳ್ಳೇ ಕಥೆಯೊಂದಿಗೆ ಈ ಬಾರಿ ಚಿತ್ರಮಂದಿರಕ್ಕೆ ಬರುತ್ತಿದ್ದೇನೆ. ಇಲ್ಲಿಯವರೆಗೂ ನನ್ನ ಸಿನಿಮಾಗಳಲ್ಲಿ ಮಾಸ್ ಅಂಶಗಳೇ ಹೆಚ್ಚಿರುತ್ತಿತ್ತು. ಆದ್ರೆ, ಶ್ಯಾಡೋ ಸಿನಿಮಾ ಮಾತ್ರ ಕ್ಲಾಸ್ ಆಡಿಯನ್ಸ್‌ಗೂ ಇಷ್ಟವಾಗಲಿದೆ. ಅಂದುಕೊಂಡಿದ್ದಕ್ಕಿಂತ ಅಚ್ಚುಕಟ್ಟಾಗಿ ಸಿನಿಮಾ ಮೂಡಿಬಂದಿದೆ’ ಎಂದಿದ್ದಾರೆ.
‘ಈ ಚಿತ್ರದಲ್ಲಿಯೂ ಬೇರ್ ಬಾಡಿ ಫೈಟ್ ಸೀನ್ ಕಾಣಬಹುದು. ಇಡೀ ಸಿನಿಮಾದಲ್ಲಿ ಎರಡೇ ಹಾಡಿದ್ದರೂ, ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ’ ಎಂದು ಹೇಳಿದ್ದಾರೆ. ಚಿತ್ರದ ವಿತರಕ ಧೀರಜ್ ಎಂಟರ್‌ಪ್ರೈಸಿಸ್‌ನ ಮೋಹನ್ ದಾಸ್ ಪೈ ಮಾತನಾಡಿ, ಕೊರೋನಾ ಬಳಿಕ ನಾಲ್ಕು ಸಿನಿಮಾಗಳನ್ನು ಬಿಡುಗಡೆ ಮಾಡಿದ್ದೇನೆ. ಎಲ್ಲ ಕಡೆಗಳಿಂದಲೂ ಒಳ್ಳೇ ರೆಸ್ಪಾನ್ಸ್ ಸಿಕ್ಕಿದೆ. ಅದೇ ರೀತಿ ಇದೀಗ ಶ್ಯಾಡೋ ಸಿನಿಮಾ ಕೈಗೆತ್ತಿಕೊಂಡಿದ್ದೇನೆ. ಪ್ರೇಕ್ಷಕರು ಆಗಮಿಸಿ ಈ ಚಿತ್ರಕ್ಕೂ ಆಶೀರ್ವದಿಸಲಿದ್ದಾರೆ ಎಂದಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಈ ಸಿನಿಮಾದಲ್ಲಿ ಹಾಸ್ಯನಟನ ಪಾತ್ರ ನಿಭಾಯಿಸಿದ್ದು, “ಇಡೀ ಕುಟುಂಬ ನೋಡುವ ಸಿನಿಮಾ ಇದು. ವಿನೋದಣ್ಣ ಮಾಸ್ ಗೂ ಸೈ, ಕ್ಲಾಸ್‌ಗೂ ಸೈ ಎನಿಸುವಂತೆ ನಟಿಸಿದ್ದಾರೆ. ಕಾಮಿಡಿ, ಸೆಂಟಿಮೆಂಟ್ ಸೇರಿ ಸಾಕಷ್ಟು ಅಂಶಗಳು ಈ ಸಿನಿಮಾದಲ್ಲಿವೆ” ಎಂದು ಮಾಹಿತಿ ನೀಡಿದ್ದಾರೆ. ವಿನೋದ್ ಪ್ರಭಾಕರ್ ಗೆ ಜೋಡಿಯಾಗಿ ಶೋಭಿತಾ ರಾಣಾ ನಟಿಸಿದ್ದಾರೆ. ಶರತ್ ಲೋಹಿತಾಶ್ವ, ಶ್ರವಣ್, ಸತ್ಯದೇವ್ ಸೇರಿ ಹಲವರು ಈ ಸಿನಿಮಾದಲ್ಲಿದ್ದಾರೆ. ಕತೆ, ಚಿತ್ರಕತೆ ಮತ್ತು ಸಂಭಾಷಣೆಯನ್ನು ನಿರ್ದೇಶಕ ರವಿ ಬರೆದಿದ್ದಾರೆ. ಅಚ್ಚು ಅವರ ಸಂಗೀತ, ಮನೋಹರ್ ಜೋಷಿ ಛಾಯಾಗ್ರಹಣ, ಚೋಟಾ ಪ್ರಸಾದ್ ಸಂಕಲನ, ವಿನೋದ್ ಅವರ ಸಾಹಸ ನಿರ್ದೇಶನವಿದೆ.