ನಟ ಸಂಚಾರಿ ವಿಜಯ್ ಹೆಸರಿನಲ್ಲಿ ಗಿಣಿ ದತ್ತು ಪಡೆದ ಗೆಳೆಯ ಚಂದ್ರಚೂಡ್
ಬೆಂಗಳೂರು, ಜೂನ್ 17:ರಸ್ತೆ ಅಪಘಾತದ ಕಾರಣ ಅಕಾಲದಲ್ಲಿಯೇ ಅಭಿಮಾನಿಗಳನ್ನು ಅಗಲಿದ ರಾಷ್ಟ್ರ ಪ್ರಶಸ್ತಿ ವಿಜೇತ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಹೆಸರಿನಲ್ಲಿ ಪತ್ರಕರ್ತ ಹಾಗೂ ಕನ್ನಡ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಗಿಣಿಯನ್ನು ದತ್ತು ಪಡೆದಿದ್ದಾರೆ. ಸಂಚಾರಿ ವಿಜಯ್ ಜೊತೆಗಿನ 10 ವರ್ಷಗಳ ಸ್ನೇಹದ ಗುರುತಾಗಿ ಹಾಗೂ ಅವರ ನೆನಪಿನಲ್ಲಿ ಚಕ್ರವರ್ತಿ ಚಂದ್ರಚೂಡ್ ಮೃಗಾಲಯದಿಂದ ಗಿಳಿಯನ್ನು ದತ್ತು ಪಡೆದಿದ್ದಾರೆ. ದಾವಣಗೆರೆಯ ಇಂದಿರಾ ಪ್ರಿಯದರ್ಶಿನಿ ಪ್ರಾಣಿ ಸಂಗ್ರಹಾಲಯದಲ್ಲಿ ಸಂಚಾರಿ ವಿಜಯ್ ಅವರ ಹೆಸರಿನಲ್ಲಿ ಗಿಳಿಯನ್ನು ದತ್ತು ತೆಗೆದುಕೊಂಡಿದ್ದಾರೆ. ಸಂಚಾರಿ ವಿಜಯ್ ನಿನಗೆ ಗಿಣಿಯೆಂದರೆ ಇಷ್ಟ. ಅದಕ್ಕೇ ನಿನ್ನ ಹೆಸರಲ್ಲೊಂದು ತಗೊಂಡಿದೀನಿ. ನೋಡಿ ಸ್ವಾಮಿ. ಎಂದು ಸಾಮಾಜಿಕ ಜಾಲತಾಣದಲ್ಲಿ ಚಂದ್ರಚೂಡ ಬರೆದುಕೊಂಡಿದ್ದಾರೆ. ಸಂಚಾರಿ ವಿಜಯ್ ಮತ್ತು ನಾನು ಕಳೆದ ಹತ್ತು ವರ್ಷಗಳಿಂದ ಗೆಳೆಯರು. ವಿಜಯ್ಗೆ ಗಿಳಿಯಂತೆ ಅಂದ್ರೆ ತುಂಬಾ ಇಷ್ಟ. ನನಗೆ ಎರಡು ಮೂರು ಬಾರಿ ಗಿಳಿಗಳ ಚಿತ್ರ ಬಿಡಿಸಿಕೊಟ್ಟಿದ್ದಾರೆ ಹೀಗಾಗಿಯೇ ನಾನು ಅವರ ಹೆಸರಿನಲ್ಲಿಯೇ ಗಿಳಿಯೊಂದನ್ನು ದತ್ತು ಪಡೆದಿದ್ದೇನೆ ಎಂದಿದ್ದಾರೆ.