ನಗರ ಸುಂದರೀಕರಣಕ್ಕೆ ಎಲ್ಲಾ ಸದಸ್ಯರ ಪಾತ್ರ ಮುಖ್ಯ: ರಾಜೇಶ್ವರಿ ಸುಬ್ಬರಾಯ್ಡು
ಬಳ್ಳಾರಿ 10: ಬಳ್ಳಾರಿ ನಗರವನ್ನು ಸುಂದರೀಕರಣಗೊಳಿಸುವಲ್ಲಿ ಎಲ್ಲಾ ಸದಸ್ಯರ ಪಾತ್ರ ಮುಖ್ಯವಾದುದು. ಆದ್ದರಿಂದ ಎಲ್ಲಾ ಸದಸ್ಯರು ಒಗ್ಗೂಟ್ಟಿನಿಂದ ಕಾನೂನಿನಾತ್ಮಕ ಚೌಕಟ್ಟಿನಲ್ಲಿ ನಗರ ಬೆಳವಣಿಗೆಗೆ ಶ್ರಮಿಸೋಣ ಇದಕ್ಕೆ ಸಂಬಂಧಿಸಿದಂತೆ ಕೂಲಂಕುಷವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ರಾಜೇಶ್ವರಿ ಸುಬ್ಬರಾಯ್ಡು ಅವರ ಅಧ್ಯಕ್ಷತೆಯಲ್ಲಿ ನಗರದ ಜಿಪಂನ ನಜೀರ್ಸಾಬ್ ಸಭಾಂಗಣದಲ್ಲಿ ಸೋಮವಾರ ನಡೆದ ಬಳ್ಳಾರಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರೆಲ್ಲರೂ ಸಮ್ಮತಿ ವ್ಯಕ್ತಪಡಿಸಿದರು.
ಬಳ್ಳಾರಿ ನಗರ ಸುಂದರೀಕರಣಕ್ಕೆ ಸಂಬಂಧಿಸಿದಂತೆ ನಗರದ ಮುಖ್ಯ ರಾಯಲ್ ವೃತ್ತದಲ್ಲಿ ಕ್ಲಾಕ್ ಟವರ್ ನಿರ್ಮಾಣ ಹಾಗೂ ಬೀದೀದೀಪಗಳಿಗೆ ಎಲ್ಇಡಿ ದೀಪಗಳ ಆಳವಡಿಕೆ ಹಾಗೂ ಕುಡಿಯುವ ನೀರು ಮತ್ತು ಇನ್ನೀತರೆ ನಿರ್ಮಾಣಗಳ ಸಂಬಂಧಿಸಿದಂತೆ ಸುಧೀರ್ಘ ಚರ್ಚೆ ನಡೆಯಿತು.
ಮಹಾನಗರ ಪಾಲಿಕೆ ಠೇವಣಿ ಕೊಡುಗೆ ಕಾಮಗಾರಿಯಡಿ ಅಲ್ಲೀಪುರ ಜಲಸಂಗ್ರಹಗಾರರಿಂದ ನೀರನ್ನು ಪಡೆಯುವ ಮಾರ್ಗಕ್ಕೆ ಒಂದು 900 ಮಿ.ಮಿ ವ್ಯಾಸದ ಬಟರ್ಫ್ಲೈ ವಾಲ್ವ್ನ್ನು ಒದಗಿಸಿ ಅಳವಡಿಸುವುದು, ವಾಲ್ವ್ ಚೇಂಬರ್ಗಳನ್ನು ನಿರ್ಮಿಸುವುದು ಹಾಗೂ ಸಿಲ್ಟ್ ತೆಗೆಯುವ ಕಾಮಗಾರಿಗೆ ರೂ.32.45 ಲಕ್ಷಗಳಿಗೆ ಅಂದಾಜು ಪಟ್ಟಿಯನ್ನು ಮಾಡಿ ಮಂಡಳಿಗೆ ಹಣ ಬಿಡುಗಡೆ ಮಾಡಲು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿಭಾಗದ ಕಾರ್ಯಪಾಲಕ ಅಭಿಯಂತರರು ಇವರಿಗೆ ಪಾವತಿಸಲು ಅನುಮೋದನೆಗೆ ಸಭೆಯಲ್ಲಿ ಮಂಡಿಸಲಾಯಿತು.
ಕರ್ನಾಟಕ ಮಹಾನಗರಪಾಲಿಕೆಗಳ ಅಧಿನಿಯಮ-1976ಗಳಿಗೆ ತಿದ್ದುಪಡಿ ತರಲಾಗಿದ್ದು, ಕರ್ನಾಟಕ ಸ್ಪಾಂಜ್ ಅಧಿನಿಯಮ ಅಡಿಯಲ್ಲಿ 2018-19ನೇ ಸಾಲಿಗೆ ಪ್ರಕಟಿಸಲಾಗಿರುವ ಮಾರ್ಗಸೂಚಿ ದರಗಳನ್ನು ಪರಿಗಣಿಸಿ ಆಸ್ತಿ ತೆರಿಗೆಯನ್ನು 2021-22ನೇ ಸಾಲಿಗೆ ಜಿ.ಐ.ಎಸ್ ಸರ್ವೆ ಮಾಡಲಾಗಿರುವ ರಸ್ತೆಗಳ ಪ್ರಕಾರ ದರಗಳನ್ನು ನಿಗದಿ ಪಡಿಸಿ ವಸೂಲಿ ಮಾಡಲಾಗಿರುತ್ತದೆ. ಸದರಿ ದರಗಳಿಗೆ ಕರ್ನಾಟಕ ಸ್ಟ್ಯಾಂಪ್ ಅಧಿನಿಯಮ ಅಡಿಯಲ್ಲಿ ಚಾಲ್ತಿ ಸಾಲಿಗೆ ಪರಿಷ್ಕರಣೆಯಾಗದೇ ಇರುವುದರಿಂದ 2022-23 ಅರ್ಥಿಕ ಸಾಲಿನಲ್ಲಿ ಶೇ.3ರಿಂದ ಶೇ.5ರಷ್ಟು ಆಸ್ತಿ ತೆರಿಗೆ ದರ ಪರಿಷ್ಕರಣೆ ಮಾಡಿ ದರ ನಿಗದಿ ಪಡಿದ್ದು ಸದರಿ ದರಗಳನ್ನು ಸಭೆಯಲ್ಲಿ ಅನುಮೋದನೆ ನೀಡಿತು.
ಘನತ್ಯಾಜ್ಯ ವಸ್ತು ನಿರ್ವಹಣೆಗೆ ಬಳ್ಳಾರಿ ಮಹಾನಗರಪಾಲಿಕೆ ವ್ಯಾಪ್ತಿಯ 2022-23ನೇ ಸಾಲಿಗೆ ಆರೋಗ್ಯ ವಿಭಾಗದ ದೈನಂದಿನ ನೈರ್ಮಲ್ಯ ಕೆಲಸ ಕಾರ್ಯಗಳಿಗೆ ಅವಶ್ಯವಿರುವ ರಾಸಾಯನಿಕಗಳಾದ ಬೀಚಿಂಗ್ ಪೌಡರ್, ಲೈಮ್ ಪೌಡರ್, ಖರೀದಿಸಲು ಯಾವುದೇ ನಿರ್ದಿಷ್ಟ ಅನುದಾನ ಇರುವುದಿಲ್ಲ. ಅಲ್ಲದೇ ನಗರದಲ್ಲಿ ಸೊಳ್ಳೆಗಳನ್ನು ನಿಯಂತ್ರಿಸಿ ಇತರೆ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಇನ್ನಿತರೆ ರೋಗಗಳು ಹರಡದಂತೆ ಎಚ್ಚರ ವಹಿಸಬೇಕಾಗಿರುತ್ತದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ವಾರ್ಷಿಕವಾಗಿ ಅವಶ್ಯವಿರುವ ರಾಸಾಯನಿಕಗಳಾದ ಬ್ಲೀಚಿಂಗ್ ಪೌಡರ್, ಲೈಮ್ ಪೌಡರ್ನ್ನು ತುರ್ತಾಗಿ ಖರೀದಿಸಲು ಅತಿ ಅಗತ್ಯವಾಗಿರುತ್ತದೆ ಹಾಗೂ ಅಂದಾಜು ವೆಚ್ಚ ಗರಿಷ್ಠ ರೂ.8ಲಕ್ಷಗಳು ಆಗಿದ್ದು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ ಕಾಲ ಕಾಲಕ್ಕೆ ತಿದ್ದುಪಡಿಯಾದ ನಿಯಮಗಳನ್ನು ಅಳವಡಿಕೊಂಡು ರಾಸಾಯನಿಕ ಸಾಮಾಗ್ರಿಗಳನ್ನು ಖರೀದಿಸಲು ಪಾಲಿಕೆಯ ಸಾಮಾನ್ಯ ನಿಧಿಯಿಂದ ಭರಿಸಲು ಸಾಮಾನ್ಯ ಸಭೆಯಲ್ಲಿ ಅನುಮೋದಿಸಲಾಯಿತು.
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೇರಪಾವತಿ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು, ಮರಣ ಹೊಂದಿದಲ್ಲಿ ಶವಸಂಸ್ಕಾರಕ್ಕಾಗಿ ರೂ.7500 ಗಳನ್ನು ಪಾಲಿಕೆಯ ಸಾಮಾನ್ಯ ನಿಧಿಯಿಂದ ಭರಿಸಲು ಸಭೆಯಲ್ಲಿ ಮಂಜೂರಾತಿಗಾಗಿ ಮಂಡಿಸಲಾಯಿತು.
ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಸುಧೀರ್ಘ ಚರ್ಚೆ ನಡೆಯಿತು.
ಮಹಾನಗರ ಪಾಲಿಕೆಯ ಮೇಯರ್ ರಾಜೇಶ್ವರಿ ಸುಬ್ಬರಾಯ್ಡು ಅವರು ಮಾತನಾಡಿ, ಇಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಬಳ್ಳಾರಿ ನಗರದ ಅಭಿವೃದ್ಧಿ ಮತ್ತು ನಗರದ ಜನರಿಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪಮೇಯರ್ ಮಾಲನ್.ಬಿ, ಬಳ್ಳಾರಿ ನಗರ ಶಾಸಕರಾದ ಸೋಮಶೇಖರರೆಡ್ಡಿ, ಬಳ್ಳಾರಿ ಗ್ರಾಮೀಣ ಶಾಸಕರಾದ ಬಿ.ನಾಗೇಂದ್ರ, ಪಾಲಿಕೆ ಆಯುಕ್ತರಾದ ರುದ್ರೇಶ್, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ರಾಜಶೇಖರ.ಎಚ್, ಎಂ.ರಾಮಾಂಜನೇಯ, ಡಿ.ಸುಕುಂ, ಟಿ.ಶ್ರೀನಿವಾಸ್ ಮೋತ್ಕರ್ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳು ಇದ್ದರು.