ಲೇಖನಗಳು

ರಾಕೆಟ್ ಬಾಯ್ಸ್: ನಮ್ಮ ಹೆಮ್ಮೆಯ ವಿಜ್ಞಾನಿಗಳು

ರಾಕೆಟ್ ಬಾಯ್ಸ್: ನಮ್ಮ ಹೆಮ್ಮೆಯ ವಿಜ್ಞಾನಿಗಳು

ಅಂಕಣ: ಸಿನೆಮಾನೋಟ

ಭಾರತೀಯ ಭಾಷೆಗಳಲ್ಲಿ ವಿಜ್ಞಾನಿಗಳ ಕುರಿತು ಸಿನಿಮಾಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಸಿ.ವಿ ರಾಮನ್,ಸತ್ಯೇಂದ್ರನಾಥ್ ಬೋಸ್, ಮತ್ತು ಮೇಘಾನಂದ ಶಾ ಅವರ ಕುರಿತಾದ ‘The quantum Indians’ ಮತ್ತು ರಾಮಾನುಜನ್ ಬಗೆಗಿನ ಡಾಕ್ಯುಮೆಂಟರಿ ‘The Man who knew Infinity ‘ವಿಜ್ಞಾನಿಗಳ ಕುರಿತಿರುವ ಹೆಸರಿಸಬಹುದಾದ ಚಿತ್ರಗಳು. ವಿಜ್ಞಾನದ ಮೇಲಿನ ಒಲವು ಕಮ್ಮಿಯಾಗಿ,ಇಂಜಿನಿಯರಿಂಗ್,ವೈದ್ಯಕೀಯ ಶಿಕ್ಷಣದತ್ತ ವಿದ್ಯಾರ್ಥಿಗಳು ಹೊರಳುತ್ತಿರುವ ಹೊತ್ತಿನಲ್ಲಿ, ದೇಶದ ಹೆಮ್ಮೆಯ ವಿಜ್ಞಾನಿಗಳನ್ನು ‘ರಾಕೆಟ್ ಬಾಯ್ಸ್’ ಪರಿಚಯಿಸುತ್ತದೆ.

ಬಹುಶಃ ಹೋಮಿ ಭಾಭಾ, ವಿಕ್ರಂ ಸಾರಾಭಾಯ್ ಹೆಸರನ್ನು ಕೇಳದವರು ಇರಲಿಕ್ಕಿಲ್ಲ.ಪಠ್ಯ ಪುಸ್ತಕಗಳಲ್ಲಿ ಅವರಿಬ್ಬರು ಅನುಕ್ರಮವಾಗಿ ಭಾರತದ ಅಣುವಿಜ್ಞಾನದ ಪಿತಾಮಹರೆಂದು,ರಾಕೆಟ್ ವಿಜ್ಞಾನದ ಜನಕರೆಂದೂ ಗುರುತಿಸಲ್ಪಡುತ್ತಾರೆ.ಆದರೆ ಅವರ ಬದುಕಿನ ಬಗ್ಗೆ ಮಾಹಿತಿ ಕಡಿಮೆ.ಎತ್ತಿನ ಗಾಡಿ,ಜಟಕಾಬಂಡಿಯ ಕಾಲದಲ್ಲಿ ಮಹತ್ತರ ಸಾಧನೆ ಮಾಡಲು ಅವರೆಷ್ಟು ಕಷ್ಟ ಪಟ್ಟಿರಬಹುದು ಎನ್ನುವ ವಿವರಗಳೂ ಅಷ್ಟಾಗಿ ಇಲ್ಲ.ನಿರ್ದೇಶಕ ಅಭಯ್ ಪನ್ನು ಮತ್ತು ಕಥಾಲೇಖಕ ಅಭಯ್ ಕೊರನ್ನೆ ಸಾಕಷ್ಟು ಅಧ್ಯಯನ,ಸಂಶೋಧನೆ ಮಾಡಿ ಭಾರತದ ಈ ಖ್ಯಾತ ವಿಜ್ಞಾನಿಗಳ ಬದುಕು,ಸಾಧನೆಯ ಚಿತ್ರವನ್ನು’ರಾಕೆಟ್ ಬಾಯ್ಸ್’ ವೆಬ್ ಸೀರೀಸಲ್ಲಿ ಒದಗಿಸಲು ಯತ್ನಿಸಿದ್ದಾರೆ.ಸೀರಿಯಲ್ ನಲ್ಲಿ ಕಲ್ಪನೆಗಳು ಸೇರಿದ್ದರೂ ಅದರಿಂದ ಮೂಲ ಉದ್ದೇಶಕ್ಕೆ ಭಂಗ ಬಂದಿಲ್ಲ.

ಕ್ಯಾಂಬ್ರಿಜ್ ನಿಂದ ಭಾರತಕ್ಕೆ ಬರುವ ಹೋಮಿ ಭಾಭಾ,ಬೆಂಗಳೂರಿನಲ್ಲಿರುವ ಸಿ ವಿ ರಾಮನ್ ರ ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಸಾಯನ್ಸ್ ನಲ್ಲಿ ಫಿಸಿಕ್ಸ್ ಪ್ರೊಫೆಸರ್ ಆಗಿ ಸೇರಿಕೊಳ್ಳುತ್ತಾರೆ.ಮತ್ತೊಬ್ಬ ಕ್ಯಾಂಬ್ರಿಜ್ ವಿದ್ಯಾರ್ಥಿ ವಿಕ್ರಂ ಸಾರಾಭಾಯ್ ಅವರ ಜತೆಯಾಗುತ್ತಾರೆ.ಭಾಭಾ ಪರ್ಯಾಯ ಇಂಧನದ ಅನ್ವೇಷಣೆಯಲ್ಲಿ ಆಸಕ್ತಿ ಹೊಂದಿದ್ದರೆ,ರಾಕೆಟ್ ಉಡಾವಣೆಯಲ್ಲಿ ಯಶಸ್ಸು ಸಾಧಿಸಬೇಕೆನ್ನುವುದು ಸಾರಾಭಾಯ್ ಕನಸು.

1940 ಬ್ರಿಟಿಷ್ ಪ್ರಭುತ್ವದ ಕಾಲ. ಭಾಭಾ ಮತ್ತು ಸಾರಾಭಾಯ್ ಬ್ರಿಟಿಷ್ ಆಧಿಕಾರಿಯ ಆಗಮನದ ವೇಳೆಯಲ್ಲಿಆಂಗ್ಲೇಯರ ಬಾವುಟ ಯೂನಿಯನ್ ಜಾಕ್ ಕೆಳಗಿಳಿಸುತ್ತಾರೆ. ಇದರಿಂದ ಕುಪಿತಗೊಂಡ ಬ್ರಿಟಷ್ ಅಧಿಕಾರಿ ದಾವೆ ಹೂಡುತ್ತಾನೆ.ಹೋಮಿ ಭಾಭಾ ತಂದೆ, ಪ್ರಸಿದ್ಧ ವಕೀಲ ಜಹಾಂಗೀರ್ ಭಾಭಾ ಮುಂಬಯಿಂದ ಬಂದು ಕೇಸು ಗೆಲ್ಲುತ್ತಾರೆ. ಈ ಸಮಯದಲ್ಲಿ ಭಾಭಾಗೆ ಅರಳುಗಣ್ಣುಗಳ ಚೆಲುವೆ ಪಿಪ್ಸಿಯ ಪರಿಚಯವಾಗುತ್ತದೆ.

ದಾವೆಯಲ್ಲಿ ಸೋತ ಬ್ರಿಟಿಶ್ ಅಧಿಕಾರಿ ಐಐಎಸ್ಸಿಗೆ ಧನಸಹಾಯ ಮಾಡುವುದನ್ನು ನಿಲ್ಲಿಸುತ್ತಾನೆ. ನಿಧಿ ಸಂಗ್ರಹಿಸಲು ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಾಗುತ್ತದೆ. ಖ್ಯಾತ ಕಲಾವಿದೆ ಮೃಣಾಲಿನಿಯ ಭರತನಾಟ್ಯ ಕಾರ್ಯಕ್ರಮ ಏರ್ಪಡಿಸುತ್ತಾರೆ. ಈ ಸಂದರ್ಭದಲ್ಲಿ ವಿಕ್ರಂ ಸಾರಾಭಾಯ್ ಗೆ ಮೃಣಾಲಿನಿಯ ಪರಿಚಯವಾಗಿ ಅದು ವಿವಾಹದಲ್ಲಿ ಕೊನೆಗೊಳ್ಳುತ್ತದೆ.

ಪ್ರತಿಕೂಲ ಸನ್ನಿವೇಶದಲ್ಲಿ ಹೋಮಿ ಭಾಭಾ ಐಐಎಸ್ಸಿ ತೊರೆಯಬೇಕಾಗುತ್ತದೆ.ತನ್ನ ಗುರಿ ಸಾಧನೆಯನ್ನೇ ನೆಚ್ಚಿಕೊಳ್ಳುವ ಸ್ವಾರ್ಥಿ ಎಂದೂ ಅನ್ನಿಸಿಕೊಳ್ಳುತ್ತಾರೆ. ಅವರ ಪರ್ಯಾಯ ಇಂಧನದ ಕನಸಿಗೆ ನಿರೀಕ್ಷಿತ ಪ್ರೋತ್ಸಾಹ ದೊರಕುವುದಿಲ್ಲ. ಸ್ವತಂತ್ರ ಭಾರತದಲ್ಲಿ ಜವಾಹರಲಾಲ್ ನೆಹರೂ ಕೂಡಾ ಆದ್ಯತೆಗಳ ಕಾರಣವೊಡ್ಡಿ ಅಣುಶಕ್ತಿಗೆ ಒಡಂಬಡುವುದಿಲ್ಲ. ಶಾಂತಿ ಮತ್ತು ರಕ್ಷಣಾ ಉದ್ದೇಶಗಳಿಗೆ ಅದನ್ನು ಬಳಸಲಾಗುತ್ತದೆಂದು ಅವರನ್ನು ಒಲಿಸಲಾಗುತ್ತದೆ.

ರಾಕೆಟ್ ಉಡ್ಡಯನದ ತಂತ್ರಗಾರಿಕೆಯಲ್ಲಿ ತೀವ್ರವಾಗಿ ತೊಡಗಿಸಿಕೊಂಡ ಸಾರಾಭಾಯ್ ಯನ್ನು ಕೆದರಿದ ಕೂದಲ ತರುಣ ಎ ಪಿ ಜೆ ಅಬ್ದುಲ್ ಸೇರಿಕೊಳ್ಳಲು ಬಯುಸುತ್ತಾರೆ. ಮೊದಲು ನಿರಾಕರಿಸಿದರೂ ಕಲಾಂರ ತೀವ್ರ ಆಸಕ್ತಿಯನ್ನು ಗಮನಿಸಿದ ಸಾರಾಭಾಯ್ ಜತೆಗಿರಿಸಿಕೊಳ್ಳುತ್ತಾರೆ.

ಅಣು ಇಂಧನ ತಯಾರಿಯಲ್ಲಿ ಊಹಿಸದ ಎಡರು ತೊಡರುಗಳು ಬರುತ್ತವೆ. ಸಂಸತ್ತಿನಲ್ಲಿ ನೆಹರೂ ಭರ್ತ್ಸನೆಗೊಳಗಾಗುತ್ತಾರೆ. ಅವೆಲ್ಲವನ್ನೂ ಮೀರಿ ಭಾಭಾ ಸಾಧನೆಯ ಹಾದಿಯಲ್ಲಿ ಸಾಗುತ್ತಾರೆ. ಭಾರತದ ಪ್ರಥಮ ಅಣು ರಿಯಾಕ್ಟರ್ ಚಲನೆ ಆರಂಭಿಸುತ್ತದೆ.

ವಿಕ್ರಂ ಸಾರಾಭಾಯ್ ರವರ ತಂಡಕ್ಕೂ ರಾಕೆಟ್ ಉಡ್ಡಯನದಲ್ಲಿ ಪ್ರಾಥಮಿಕ ಸಮಸ್ಯೆಗಳು ಎದುರಾಗುತ್ತವೆ. ಮೂವರು ವಿಜ್ಞಾನಿಗಳು ಜೊತೆಗೂಡಿ ಅದನ್ನು ಗೆಲ್ಲುತ್ತಾರೆ.ಜಗತ್ತೇ ನಿಬ್ಬೆರಗಾಗುವಂತೆ ಬಾರತದ ಮೊದಲ ರಾಕೆಟ್ ಗಗನಕ್ಕೇರುತ್ತದೆ.

ಹೋಮಿ ಭಾಭಾ,ವಿಕ್ರಂ ಸಾರಾಭಾಯ್ ಪ್ರತಿಭಾವಂತ ವಿಜ್ಞಾನಿಗಳೇನೋ ಸರಿ.ಅದರೆ ಅವರ ಬದುಕಿನಲ್ಲು ಹುಳುಕುಗಳಿವೆ. ಶ್ರೀಮಂತ ಕುಟುಂಬದಿಂದ ಬಂದ ಭಾಭಾಗೆ ಮದ್ಯದ ಖಯಾಲಿಯಿದೆ. ತನಗೆ ಸರಿ ಎನ್ನಿಸುವುದನ್ನು ಮಾಡಲು ಯಾರನ್ನೇ ಎದುರು ಹಾಕಿಕೊಳ್ಳಲು ಹಿಂಜರಿಯವುದಿಲ್ಲ. ಪಿಪ್ಸಿಯ ಪ್ರೀತಿಗೆ ಸ್ಪಂದನೆಯಿಲ್ಲ. ಪ್ರಾಣಕ್ಕೆ ಅಪಾಯವಿದೆ ಎಂದಾಗಲೂ ನಿರ್ಲಕ್ಷ್ಯದಿಂದ ವರ್ತಿಸುತ್ತಾರೆ.

ವಿಕ್ರಂ ಸಾರಾಭಾಯ್ ಗೆ ಹೆಂಡತಿ ಮೃಣಾಲಿನಿಯ ಪ್ರತಿಭೆಯ ಬಗ್ಗೆ ಅಸಡ್ಡೆ.ಮಗುವನ್ನು ನೋಡಿಕೊಂಡಿರು ಎನ್ನುತ್ತಾರೆ. ಮೃಣಾಲಿನಿಯ ಗೆಳತಿಯ ಮೇಲೆ ಒಲವು. ಬಡಕುಟುಂಬದಿಂದ ಪ್ರತಿಭಾವಂತ ಎ ಪಿ ಜೆ ಅಬ್ದುಲ್ ಕಲಾಂಗೆ ವಿಜ್ಞಾನವೇ ಎಲ್ಲ, ಮದುವೆಯಾಗಲೂ ಪುರುಸೊತ್ತಿಲ್ಲ.

ಮೂವರು ವಿಜ್ಞಾನಿಗಳ ‘ರಾಕೆಟ್ ಬಾಯ್ಸ್’ನಲ್ಲಿ ಹೆಚ್ಚು ಅವಕಾಶ ಹೋಮಿ ಭಾಭಾಗೆ ದಕ್ಕಿದೆ.ಬಾಬಾಗೆ ಎದುರಾಗಿ ಮೆಹ್ದಿ ರಾಜಾ ಎನ್ನುವ ಪಾತ್ರವನ್ನು ಸೃಷ್ಟಿಸಲಾಗಿದೆ.ಆತ ಪರಿಶ್ರಮಿ,ಶ್ರೇಷ್ಟ ವಿಜ್ಞಾನಿ.  ಭಾಭಾ ಮೇಲೆ ಅಸೂಯೆ.ಅದಕ್ಕಾಗಿ ಚುನಾವಣೆಯಲ್ಲಿ ಗೆದ್ದು ಸಂಸತ್ತಿನಲ್ಲಿ ನೆಹರೂರನ್ನು ಪ್ರಶ್ನಿಸಲು ಹಿಂಜರಿಯುವುದಿಲ್ಲ.ಆದರೆ ದೇಶಪ್ರೇಮದ ಬಗ್ಗೆ ರಾಜಿಯಿಲ್ಲ. ಸಂದರ್ಭ ಬಂದಾಗ ವೈಯಕ್ತಿಕ ಈರ್ಷ್ಯೆ ಬದಿಗಿಟ್ಟು ಭಾಭಾರ ಪರವಾಗಿ ನಿಲ್ಲುತ್ತಾರೆ.ಇದೇ ರೀತಿ ಇನ್ನೊಂದು ಕಲ್ಪಿತ ಪಾತ್ರ ಮಾಥೂರ್.ಭಾಭಾ ಸಹಾಯಕನಾದ ಈತನಿಗೆ ಸ್ವಾರ್ಥವೇ ಮುಖ್ಯವಾಗುತ್ತದೆ.

ಭಾಭಾ ನೆಹರೂರನ್ನು ಸಂಬೋಧಿಸುವುದು ಭಾಯ್ ಎಂದೇ.ಅವರಿಬ್ಬರಲ್ಲಿ ಸ್ನೇಹವಿದೆ, ಮೆಚ್ಚುಗೆಯಿದೆ. ನೆಹರೂ ಭಾಭಾ ಬಗ್ಗೆ ನಿಷ್ಠುರವಾಗಿಯೂ ಇರಬಲ್ಲರು. ಒಂದು ಸಂದರ್ಭಲ್ಲಿ ‘ಆತ್ಮನಿರ್ಭರ’ ಎನ್ನುವ ಶಬ್ದವನ್ನು ಅವರಿಂದ ಹೇಳಿಸಲಾಗಿದೆ.ಸ್ವಾವಲಂಬಿ ಭಾರತದ ನೆಹರೂರವರ ಪ್ರಾಮಾಣಿಕ ಕಾಳಜಿಯನ್ನು ಅರ್ಥಪೂರ್ಣವಾಗಿ ಬಿಂಬಿಸುವಂತೆ ಈ ಮಾತು ಬಂದಿದೆ.

ಹೋಮಿ ಭಾಭಾ ಹಲವು ಪ್ರವೃತ್ತಿಗಳ,ಛಲದ ಮನುಷ್ಯ.ಸಜ್ಜನಿಕೆಯ,ಸೌಮ್ಯ ವ್ಯಕ್ತಿ ವಿಕ್ರಂ ಸಾರಾಭಾಯ್. ಇಬ್ಬರಲ್ಲಿ ಭಿನ್ನಮತವಿದ್ದರೂ ಸಡಿಲಾಗದ ಸ್ನೇಹ. ಈ ಅಪರೂಪದ ವ್ಯಕ್ತಿಗಳಿಗೆ ದೃಶ್ಯರೂಪದಲ್ಲಿ ನ್ಯಾಯ ಸಲ್ಲಿಸುವುದು ಸುಲಭವಲ್ಲ.ಜಿಮ್ ಸರಭ್ ಮತ್ತು ಈಶ್ವಕ್ ಸಿಂಗ್ ಹೋಮಿ ಭಾಭಾ,ವಿಕ್ರಂ ಸಾರಾಭಾಯ್ ಕಣ್ಣೆದುರು ಕಾಣುವಂತೆ ನಟಿಸಿದ್ದಾರೆ.ಜಿಮ್ ಸರಭ್ ಮಾತಿನ ಶೈಲಿ,ಅಂಗಿಕ ಚಲನೆ ಭಾಭಾರವರನ್ನೇ ಹೋಲುವಂತಿದೆ. ಈ ಪ್ರಭಾವಿ ವ್ಯಕ್ತಿತ್ವದ ಎದುರು ಈಶ್ವಕ್ ಸಿಂಗ್ ಮನೋಜ್ಞವಾಗಿ ನಟಿಸಿದ್ದಾರೆ. ನೆಹರೂರನ್ನು ಹೋಲುವ ರಜಿತ್ ಕಪೂರ್ ಅಭಿನಯ,ಆ ಪಾತ್ರಕ್ಕೆ ಅವರನ್ನು ಅನಿವಾರ್ಯಗೊಳಿಸಿದೆ.

ಪರ್ವಾನ ಇರಾನಿ (ಪೆಪ್ಸಿ),ರೆಗಿನಾ ಕಾಸಂಡ್ರ (ಮೃಣಾಲಿನಿ) ಮೆಚ್ಚುವಂತೆ ನಟಿಸಿದ್ದರೆ ಅರ್ಜುನ್ ರಾಧಾಕೃಷ್ಣನ್ ಎತ್ತರ ಕಲಾಂ ಪಾತ್ರಕ್ಕೆ ಹೊಂದದಿದ್ದರೂ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.

ದೇಶ ಕಂಡ ಹೆಮ್ಮೆಯ ವಿಜ್ಞಾನಿಗಳ ಬದುಕು,ಸಾಧನೆಯ ನೋಟ ಕಣ್ತುಂಬ ನೋಡುವ ಅವಕಾಶ ಸೋನಿ ಲೈವ್ ಒದಗಿಸಿದೆ.’ಸ್ಕಾಮ್ 1992’ ಬಳಿಕ ಸೋನಿ ಸಂಸ್ಥೆ ನಿರ್ಮಿಸಿದ ಒಂದೊಳ್ಳೆಯ ವೆಬ್ ಸೀರೀಸ್ ‘ರಾಕೆಟ್ ಬಾಯ್ಸ್

ಸುದ್ದಿ ಓದಿ