ಗದ್ದೆಗಳಿಗೆ ತೆರಳಲು ದಾರಿ ಸಮಸ್ಯೆ: ಚರ್ಚೆ
ಮುಂಡಗೋಡ 17: ರೈತರ ಗದ್ದೆಗಳಿಗೆ ತೆರಳಲು ದಾರಿ ಸಮಸ್ಯೆ ತಕರಾರುಗಳ ಬಗ್ಗೆ ಸಾಕಷ್ಟು ದೂರಿನ ಹಿನ್ನೆಲೆಯಲ್ಲಿ ಮುಂಡಗೋಡ ತಹಸೀಲ್ದಾರ ಶ್ರೀಧರ ಮುಂದಲಮನಿ ಆಯಾ ಸ್ಥಳಗಳಿಗೆ ಬೇಟಿ ನೀಡಿ ಸ್ಥಳಿಯ ರೈತರು ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಚರ್ಚಿಸಿ ಪರಿಹರಿಸುವ ಕ್ರಮ ಕೈಗೊಂಡರು.
ಶನಿವಾರ ತಾಲೂಕಿನ ಗುಂಜಾವತಿ ಗ್ರಾ.ಪಂ ವ್ಯಾಪ್ತಿಯ ಉಗ್ಗಿನಕೇರಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ತಾಲೂಕಾಡಳಿತದಿಂದ ಆಯೋಜಿಸಿದ ಗ್ರಾಮ ವಾಸ್ತವ್ಯ ಸಭೆಯಲ್ಲಿ ಬಹುತೇಕ ರೈತರು ಗದ್ದೆಗಳಿಗೆ ದಾರಿ ಸಮಸ್ಯೆಗಳಿವೆ ಎಂದು ದೂರಿದರು. ದೂರು ಸ್ವೀಕರಿಸಿದ ತಹಸೀಲ್ದಾರ ಖುದ್ದಾಗಿ ಆಯಾ ಸ್ಥಳಗಳಿಗೆ ತೆರಳಿ ಸ್ಥಳಿಯ ಜನಪ್ರತಿನಿಧಿಗಳು ಹಾಗೂ ಸುತ್ತಮುತ್ತಲಿನ ರೈತರನ್ನು ಕರೆಸಿ ಯಾವುದೇ ತಂಟೆ ತಕರಾರು ಮಾಡದಂತೆ ಒಳ್ಳೆಯ ರೀತಿಯಲ್ಲಿ ಸಮಸ್ಯೆಯನ್ನು ಸ್ಥಳಿಯವಾಗಿಯೇ ಪರಿಹರಿಸಿಕೊಳ್ಳುವಂತೆ ಸೂಚಿಸಿದರು. ಇದಕ್ಕೆ ಗುಂಜಾವತಿ ಗ್ರಾ.ಪಂ ಅಧ್ಯಕ್ಷ ಬಸಯ್ಯ ನಡುವಿನಮನಿ ಸಾಥ ನೀಡಿದರು.
ಗ್ರಾ.ಪಂ ಹಾಗೂ ತಾ.ಪಂ ಗೆ ಸಂಬಂಧಿಸಿದ 54, ಕಂದಾಯ ಇಲಾಖೆಯ ಪಿಂಚಣಿ ಮಂಜೂರಿ 12 ಅರ್ಜಿ ಸೇರಿದಂತೆ 19 ಅರ್ಜಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 4, ಅರಣ್ಯ ಇಲಾಖೆಗೆ 8, ಸಮಾಜ ಕಲ್ಯಾಣ ಇಲಾಖೆಗೆ 3, ಲೋಕೋಪಯೋಗಿ ಇಲಾಖೆಗೆ 2 ಅರ್ಜಿಗಳು ಬಂದರೆ, ಶಿಕ್ಷಣ ಇಲಾಖೆ, ಚಿಕ್ಕ ನೀರಾವರಿ ಇಲಾಖೆ, ಮತ್ತು ಆರೋಗ್ಯ ಇಲಾಖೆಗೆ ಸಂಬಂಧಿಸಿ ತಲಾ 1 ಅರ್ಜಿಗಳು ಸೇರಿದಂತೆ ಒಟ್ಟು 98 ಅರ್ಜಿಗಳು ಸ್ವೀಕೃತವಾಗಿದ್ದು, ಇದರಲ್ಲಿ ಕಂದಾಯ ಇಲಖೆಗೆ ಸಂಬಂಧಿಸಿದ 12 ಪಿಂಚಣಿ ಮಂಜೂರಿ ಅರ್ಜಿಗೆ ಸಂಬಮಧಿಸಿದಂತೆ ಸ್ಥಳದಲ್ಲಿಯೇ 12 ಜನರಿಗೆ ಪಿಂಚಣಿ ಮಂಜೂರಿ ಮಾಡಿ ಪಲಾನುಭವಿಗಳಿಗೆ ಮಂಜೂರಿ ಪತ್ರ ವಿತರಿಸಲಾಯಿತು. ಬಹುತೇಕ ಗದ್ದೆಗಳ ದಾರಿ ತಕರಾರು ಮತ್ತು ಮನೆ ಮಂಜೂರಿ ಅರ್ಜಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಿದ್ದು ವಿಶೇಷವಾಗಿತ್ತು.
ಗ್ರೇಡ್2 ತಹಸೀಲ್ದಾರ ಜಿ.ಬಿ ಭಟ್ ಗ್ರಾಮ ವಾಸ್ತವ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮದ ಸುತ್ತ ಮುತ್ತ ಏನೆ ಸಮಸ್ಯೆಗಳಿದ್ದರೂ ಕೂಡ ಅರ್ಜಿ ಸಲ್ಲಿಸಿದರೆ ಸಂಬಂಧಿಸಿದ ಇಲಾಖೆಯ ಮೂಲಕ ಪರಿಹರಿಸುವುದಾಗಿ ಹೆಳಿದರು.
ಸಹಾಯಕ ಕೃಷಿ ನಿರ್ದೇಶಕ, ಎಮ್.ಎಸ್ ಕುಲಕರ್ಣಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗೋಪಾಲಕೃಷ್ಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ದೀಪಾ ಬಂಗೇರಾ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ ನಡುವಿನಮನಿ, ವಲಯ ಅರಣ್ಯಾಧಿಕಾರಿ ಸುರೇಶ ಕುಳ್ಳೊಳ್ಳಿ ಮುಂತಾದವರು ಉಪಸ್ಥಿತರಿದ್ದರು.