ಬಳ್ಳಾರಿ

ಚುನಾವಣಾ ಅಧಿಕಾರಿಗಳು, ಸಿಬ್ಬಂದಿ ರಜೆಯ ಮೇಲೆ ತೆರಳದಂತೆ ನಿರ್ಬಂಧ

ಚುನಾವಣಾ ಅಧಿಕಾರಿಗಳು, ಸಿಬ್ಬಂದಿ ರಜೆಯ ಮೇಲೆ ತೆರಳದಂತೆ ನಿರ್ಬಂಧ

ಡಿಸಿ ಪವನ್‌ಕುಮಾರ್ ಮಾಲಪಾಟಿ 

ಬಳ್ಳಾರಿ,ಮಾ.29: ಭಾರತ ಚುನಾವಣಾ ಆಯೋಗವು ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ 2023 ರ ವೇಳಾ ಪಟ್ಟಿಯನ್ನು ಹೊರಡಿಸಿದ್ದು, ಅದರಂತೆ ತಕ್ಷಣದಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಸಕ್ರಿಯರಾಗಿರುವಂತೆ ಮತ್ತು ತಮ್ಮ ಅಧೀನದಲ್ಲಿ ಬರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ರಜೆಯನ್ನು ಮಂಜೂರು ಮಾಡುವಂತಿಲ್ಲ ಹಾಗೂ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಅನುಮತಿಯಿಲ್ಲದೇ ಕೇಂದ್ರಸ್ಥಾನವನ್ನು ಬಿಡುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಅವರು ಆದೇಶಿಸಿದ್ದಾರೆ. 

ಬೇಸಿಗೆ ತರಬೇತಿ ಶಿಬಿರ ಏ.1ರಿಂದ ಪ್ರಾರಂಭ; ನೊಂದಣಿಗೆ ಆಹ್ವಾನ 

ಬಳ್ಳಾರಿ,ಮಾ.29: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಗರದ ನಲ್ಲಚೇರುವು ಪ್ರದೇಶದಲ್ಲಿರುವ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಕೋರ್ಟ್‌ ಮತ್ತು ಈಜುಕೊಳದಲ್ಲಿ ಬೇಸಿಗೆ ತರಬೇತಿ ಶಿಬಿರಗಳನ್ನು ಏಪ್ರೀಲ್ 1 ರಿಂದ ಆರಂಭವಾಗಲಿದ್ದು, ಆಸಕ್ತರು ನೊಂದಾಯಿಸಿಕೊಳ್ಳಬಹುದು. 

*ಈಜುಕೊಳ ಶಿಬಿರ:* ಈಜುಕೊಳ ಶಿಬಿರಕ್ಕೆ 21 ದಿನಗಳಂತೆ ಮೂರು ಶಿಬಿರಗಳು ನಡೆಯುತ್ತಿದ್ದು, ಒಬ್ಬರಿಗೆ ಶುಲ್ಕ ರೂ.1300 (ಪ್ರತಿ ಶಿಬಿರಕ್ಕೆ) ನಿಗದಿಪಡಿಸಲಾಗಿದೆ. ಒಂದನೇ ಶಿಬಿರವು ಏ.1 ರಿಂದ 21 ರವರೆಗೆ, ಎರಡನೇ ಶಿಬಿರವು ಏ.23 ರಿಂದ ಮೇ 14 ರವರೆಗೆ, ಮೂರನೇ ಶಿಬಿರವು ಮೇ 16 ರಿಂದ ಜೂನ್ 4 ರವರೆಗೆ ನಡೆಯಲಿವೆ. ಸಮಯವು ಸೋಮವಾರ ರಜೆಯನ್ನು ಹೊರತುಪಡಿಸಿ ಮಂಗಳವಾರದಿಂದ ಭಾನುವಾರದವರೆಗೆ ಬ್ಯಾಚ್ ವಾರು ಬೆಳಗ್ಗೆ 9ರಿಂದ 10, 10ರಿಂದ 11, 11ರಿಂದ 12 ರವರಿಗೆ ನಡೆಯಲಿವೆ ಹಾಗೂ ಮಹಿಳಾ ಬ್ಯಾಚ್ ಬೆಳಗ್ಗೆ 8 ರಿಂದ 9 ಮತ್ತು ಸಂಜೆ 5 ರಿಂದ 6 ರವರೆಗೆ ನಡೆಯಲಿವೆ. 

*ಬ್ಯಾಡ್ಮಿಂಟನ್‌:* ಬ್ಯಾಡ್ಮಿಂಟನ್ ಶಿಬಿರವು 21 ದಿನಗಳಂತೆ ಎರಡು ಶಿಬಿರಗಳಲ್ಲಿ ಏ.1 ರಿಂದ 21 ರವರೆಗೆ ಮತ್ತು ಮೇ 1 ರಿಂದ 21 ರವರೆಗೆ ನಡೆಯಲಿವೆ. ಒಬ್ಬರಿಗೆ ಶುಲ್ಕ ರೂ.1850 (ಪ್ರತಿ ಶಿಬಿರಕ್ಕೆ) ನಿಗದಿಪಡಿಸಲಾಗಿದೆ. ಸಮಯ ಮಂಗಳವಾರದಿಂದ ಭಾನುವಾರದವರೆಗೆ (ಸೋಮವಾರ ರಜೆ) ನಡೆಯಲಿದ್ದು, ಬ್ಯಾಚ್ ವಾರು ಆಯಾ ಸಮಯದಲ್ಲಿ ಪ್ರಾರಂಭವಾಗಲಿವೆ. 

ಸೀಮಿತ ಸೀಟುಗಳು ಮಾತ್ರ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಮೊ.7899935141, 8880999815, 9739852460 ಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಹರಿಸಿಂಗ್ ರಾಥೋಡ್ ಅವರು ತಿಳಿಸಿದ್ದಾರೆ. 

------- 

ಮಹಾತ್ಮಗಾಂಧಿ ನರೇಗಾ ಕೂಲಿ ಏ.1ರಿಂದ 316 ರೂ.ಗೆ ಹೆಚ್ಚಳ 

ಬಳ್ಳಾರಿ,ಮಾ.29: ಕೇಂದ್ರ ಸರ್ಕಾರವು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಸ್ತುತ ವರ್ಷದಲ್ಲಿ ನೀಡುತ್ತಿರುವ ಕೂಲಿ ರೂ.309 ಗಳಿಂದ ರೂ.316 ಗಳಿಗೆ ಪರಿಷ್ಕರಿಸಿ 2023-24ನೇ ಸಾಲಿಗೆ ಆರ್ಥಿಕ ವರ್ಷ ಏಪ್ರೀಲ್ 1 ರಿಂದ ಅನ್ವಯವಾಗುವಂತೆ ಪಾವತಿಸಲು ಕ್ರಮವಹಿಸಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ತಿಳಿಸಿದ್ದಾರೆ. 

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರವಾಗಿ ಕೂಲಿ ಕೆಲಸ ನೀಡಲಾಗುವುದು ಮತ್ತು ಜನರು ವಲಸೆ ಹೋಗುವುದನ್ನು ತಡೆಗಟ್ಟಲು ಗ್ರಾಮದ ಬಡ ಕೂಲಿ ಕಾರ್ಮಿಕರು ನಮೂನೆ-6 ರಲ್ಲಿ ಅರ್ಜಿಯನ್ನು ಗ್ರಾಮಪಂಚಾಯಿತಿಗೆ ಸಲ್ಲಿಸಿ, ಕೂಲಿ ಕೆಲಸವನ್ನು ತಮ್ಮ ಗ್ರಾಮದಲ್ಲಿಯೇ ಪಡೆದುಕೊಳ್ಳಬಹುದಾಗಿದೆ. 

*ದೊರಕುವ ಸೌಲಭ್ಯಗಳು:* ನಮೂನೆ-1ರಲ್ಲಿ 18 ವರ್ಷ ಮೇಲ್ಪಟ್ಟ ಕುಟುಂಬದ ಸದಸ್ಯರು ಉದ್ಯೋಗ ಚೀಟಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಜೊತೆಗೆ ಪಾಸ್‌ಪೋರ್ಟ್‌ ಅಳತೆಯ ಫೋಟೋ, ಆಧಾರ್‌ಕಾರ್ಡ್‌, ರೇಷನ್‌ಕಾರ್ಡ್‌, ಬ್ಯಾಂಕ್ ಖಾತೆ ಮಾಹಿತಿಯನ್ನು ಗ್ರಾಮ ಪಂಚಾಯತಿಗೆ ನೀಡಿ, ಉದ್ಯೋಗ ಚೀಟಿಯನ್ನು ಪಡೆದುಕೊಳ್ಳಬಹುದು. ವಿಶೇಷ ಚೇತನರು ಮತ್ತು ಹಿರಿಯ ನಾಗರೀಕರಿಗೆ ಕೆಲಸದ ಪ್ರಮಾಣದಲ್ಲಿ ಶೇ.50 ರಷ್ಟು ರಿಯಾಯಿತಿ ಇರುತ್ತದೆ. ಕಾಮಗಾರಿ ನಿರ್ವಹಿಸುವ 6 ತಿಂಗಳು ತುಂಬಿದ ಗರ್ಭೀಣಿಯರಿಗೆ ಮಗುವಿನ ಜನನದವರೆಗೆ ಹಾಗೂ ಬಾಣಂತಿಯವರಿಗೆ ಮಗುವಿನ ಜನನ ದಿನಾಂಕದಿಂದ 6 ತಿಂಗಳವರೆಗೆ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿಗದಿತ ಕೂಲಿ ಪಡೆಯಲು ನಿಗದಿಪಡಿಸಿದ ಪ್ರಮಾಣದಲ್ಲಿ ಶೇ.50 ರಷ್ಟು ರಿಯಾಯಿತಿ ಇದೆ. ಯೋಜನೆಯ ಕಾಮಗಾರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವಂತೆ ಮಾಡಲು ಈಗಾಗಲೇ ಶೇ.60ಕ್ಕಿಂತ ಹೆಚ್ಚಿನ ಪ್ರಮಾಣದ ಮಹಿಳೆಯರನ್ನು ಹೊಂದಿರುವ ಕಾಮಗಾರಿಗಳಲ್ಲಿ ಮಹಿಳೆಯರು ನಿರ್ವಹಿಸಬೇಕಾದ ಕೆಲಸದ ಪ್ರಮಾಣದಲ್ಲಿ ಶೇ.10 ರಷ್ಟು ರಿಯಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

ಯುವ ಸಂವಾದ್ ಕಾರ್ಯಕ್ರಮ: ಅರ್ಜಿ ಆಹ್ವಾನ 

ಬಳ್ಳಾರಿ,ಮಾ.29: ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಮತ್ತು ಸ್ವಾಯತ್ತ ಸಂಸ್ಥೆ ನೆಹರು ಯುವ ಕೇಂದ್ರದಿಂದ ಏಪ್ರೀಲ್ 1 ರಿಂದ ಮೇ 31 ರವರೆಗೆ ದೇಶಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಸಮುದಾಯ ಆಧಾರಿತ ಸಂಸ್ಥೆಗಳ ಮೂಲಕ ಯುವ ಸಂವಾದ್ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. 

ಜಿಲ್ಲಾ ನೆಹರು ಯುವ ಕೇಂದ್ರದಿಂದ ಜಿಲ್ಲೆಯ ವಿವಿಧ ಎಲ್ಲಾ ಸಮುದಾಯ ಆಧಾರಿತ ಸಂಸ್ಥೆಗಳ ಸಹಕಾರ ಮತ್ತು ಬೆಂಬಲದೊಂದಿಗೆ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಲಾಗಿದ್ದು, ಅರ್ಹ ಸಮುದಾಯ ಆಧಾರಿತ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

ಅರ್ಜಿ ಸಲ್ಲಿಸಲು ಬಯಸುವ ಸಂಸ್ಥೆಗಳು ರಾಜಕೀಯೇತರ, ಪಕ್ಷಾತೀತವಾಗಿ ಹಿನ್ನಲೆ ಹೊಂದಿರುವ ಮತ್ತು ಯುವ ಸಂವಾದ್ ಕಾರ್ಯಕ್ರಮವನ್ನು ನಡೆಸಲು ಸಾಕಷ್ಟು ಸಾಂಸ್ಥಿಕ ಶಕ್ತಿಯನ್ನು ಹೊಂದಿರಬೇಕು. ಸಂಸ್ಥೆಗಳ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ಬಾಕಿ ಇರಬಾರದು. ಕಾರ್ಯಕ್ರಮಗಳ ಸಂಘಟನೆಗಾಗಿ ಪ್ರತಿ ಜಿಲ್ಲೆಗೆ 3 ಸಮುದಾಯ ಆಧಾರಿತ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತದೆ. 

ಆಸಕ್ತ ಸಂಸ್ಥೆಗಳು ಅರ್ಜಿಗಳನ್ನು ಜಿಲ್ಲಾ ನೆಹರು ಯುವ ಕೇಂದ್ರದಿಂದ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ನೆಹರು ಯುವ ಕೇಂದ್ರ ಕಚೇರಿ ಅಥವಾ ದೂ.08392-276839 ಗೆ ಸಂಪಕಿಸಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮೊಂಟು ಪಾತರ್ ಅವರು ತಿಳಿಸಿದ್ದಾರೆ. 

------ 

ಕುಡತಿನಿ: ಆಸ್ತಿ ತೆರಿಗೆ ಪರಿಷ್ಕರಣೆ  

ಬಳ್ಳಾರಿ,ಮಾ.29(ಕರ್ನಾಟಕ ವಾರ್ತೆ): ಕುಡುತಿನಿ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಸಭೆಯ ನೀರೀಕ್ಷಣೆ ಮೇರೆಗೆ 2023-24 ನೇ ಸಾಲಿಗೆ ಶೇ.3 ರಷ್ಟು ತೆರಿಗೆಯನ್ನು ಹೆಚ್ಚುವರಿ ಮಾಡಲು ಅನುಮೋದಿಸಿದ್ದು, 2023-24 ನೇ ಸಾಲಿಗೆ ಶೇ.3 ರಷ್ಟು ಹೆಚ್ಚಾಗಿ ಪರಿಷ್ಕರಣೆ ಮಾಡಲಾಗಿರುತ್ತದೆ ಎಂದು ಮುಖ್ಯಾಧಿಕಾರಿ ತೀರ್ಥಪ್ರಸಾದ್ ಅವರು ತಿಳಿಸಿದ್ದಾರೆ. 

2023-24 ನೇ ಆರ್ಥಿಕ ಸಾಲಿನಲ್ಲಿ ಮಾರುಕಟ್ಟೆ ದರಸೂಚಿಗಳು ಪರಿಷ್ಕರಣೆಯಾಗದಿದ್ದಲ್ಲಿ ಶೇ.3ರಿಂದ ಶೇ.5 ರಷ್ಟು ಆಸ್ತಿ ತೆರಿಗೆ ದರ ಪರಿಷ್ಕಕರಣೆ ಮಾಡಲು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಆದೇಶಿಸಿರುತ್ತಾರೆ. ಇದರನ್ವಯ ಪರಿಷ್ಕರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

----- 

ವ್ಯಕ್ತಿ ಕಾಣೆ 

ಬಳ್ಳಾರಿ,ಮಾ.29: ನಗರದ ಸಿರುಗುಪ್ಪ ರಸ್ತೆಯ ಬಸ್ ಸ್ಟ್ಯಾಂಡ್ ಪಕ್ಕದ ನಿವಾಸಿ ವೀರೇಶ್ ಪಿ.ವೈ ಎನ್ನುವ 38 ವರ್ಷದ ವ್ಯಕ್ತಿಯು ಮಾ.23ರಂದು ಕಾಣೆಯಾಗಿರುವ ಕುರಿತು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರು ತಿಳಿಸಿದ್ದಾರೆ. ಚಹರೆ ಗುರುತು: 5.7 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ತೆಳುವಾದ ಮೈಕಟ್ಟು, ಹಸಿರು ಬಣ್ಣದ ಟೀ ಶರ್ಟ್‌, ಗ್ರೇ ಕಲರ್ ಜೀನ್ಸ್‌ ಪ್ಯಾಂಟ್ ಹಾಗೂ ಕನ್ನಡಕ ಧರಿಸಿರುತ್ತಾನೆ. 

ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಕೌಲ್‌ಬಜಾರ್ ಪೊಲೀಸ್ ಠಾಣೆಯ ದೂ.08392-240731, ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100, ಕೌಲ್ ಬಜಾರ್ ಠಾಣೆಯ ಪಿಐ ಮೊ.9480803047, ಪಿಎಸ್‌ಐ ಮೊ.94808203085 ಗೆ ಸಂಪರ್ಕಿಸಬಹುದಾಗಿದೆ 


ಸುದ್ದಿ ಓದಿ