ಬಳ್ಳಾರಿ

ಗ್ರಾಮೀಣ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ: ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು

ಗ್ರಾಮೀಣ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ: ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು

ಬಳ್ಳಾರಿ 15: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಪಂಗಳಲ್ಲಿದ್ದುಕೊಂಡು ಗ್ರಾಮದ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು. 

ನಗರದ ಜಿಪಂನ ನಜೀರ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಳ್ಳಾರಿ ಜಿಲ್ಲೆಯಲ್ಲಿರುವ ಗ್ರಾಪಂಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಗ್ರಾಮೀಣ ಪ್ರದೇಶದ ಜನರು ಪಿಡಿಒಗಳು ಯಾವುದೇ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಮತ್ತು ಕೇಂದ್ರಸ್ಥಾನದಲ್ಲಿರಲ್ಲ ಎಂಬ ದೂರುಗಳು ಸೇರಿದಂತೆ ವಿವಿಧ ರೀತಿಯ ದೂರುಗಳು ಕೇಳಿಬರುತ್ತಿದ್ದು,ಇದಕ್ಕೆ ಯಾವುದೇ ರೀತಿಯ ಅವಕಾಶ ನೀಡದೇ ಪಂಚಾಯ್ತಿಯಲ್ಲಿದ್ದುಕೊಂಡು ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ;ತಳಹಂತದಲ್ಲಿರುವ ತಾವು ಸರಿಯಾಗಿ ಕೆಲಸ ಮಾಡಿದರೇ ಸರಕಾರಕ್ಕೆ ಒಳ್ಳೆಯ ಹೆಸರು ಬರಲು ಸಾಧ್ಯ ಎಂದರು. 

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ, ಸ್ವಚ್ಛ ಭಾರತ ಮಿಶನ್, ತೆರಿಗೆ ವಸೂಲಾತಿ,15ನೇ ಹಣಕಾಸು ಯೋಜನೆ,ವಸತಿ ಯೋಜನೆ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ವಿವಿಧ ಯೋಜನೆಗಳನ್ನು ವಿಶೇಷ ಮುತುವರ್ಜಿ ವಹಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕೆಲಸವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಾಡಬೇಕು; ಪ್ರಗತಿ ವಿಷಯದಲ್ಲಿ ನಿರ್ಲಕ್ಷ್ಯ ತೋರಿದಲ್ಲಿ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. 

ನಿಯಮಿತವಾಗಿ ಸಭೆ ನಡೆಸಿ ನರೇಗಾದಲ್ಲಿ ಪ್ರಗತಿ ಸಾಧಿಸಬೇಕು.ಕಡಿಮೆ ಪ್ರಗತಿ ಸಾಧಿಸಿದ ಗ್ರಾಪಂ ಪಿಡಿಒಗಳಿಗೆ ನೋಟಿಸ್ ಜಾರಿ ಮಾಡುವಂತೆ ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಸ್ತಿಸೃಜನೆಯಾಗುವಂತ ಕೆಲಸಗಳನ್ನು ನರೇಗಾದಡಿ ಕೈಗೆತ್ತಿಕೊಳ್ಳಲು ಇದೇ ಸಂದರ್ಭದಲ್ಲಿ ನಿರ್ದೇಶನ ನೀಡಿದರು. 

*ನರೇಗಾ ಅನುಷ್ಠಾನ ಸಂಡೂರು ಬಗ್ಗೆ ಅಸಮಾಧಾನ:ನರೇಗಾ ಅನುಷ್ಠಾನದಲ್ಲಿ ಸಂಡೂರು ತಾಲೂಕಿನ ಎಲ್ಲ ಗ್ರಾಪಂಗಳ ಪ್ರಗತಿ ಪರೀಶೀಲಿಸಿದ ಸಚಿವ ಬಿ.ಶ್ರೀರಾಮುಲು ಅವರು ಅಸಮಾಧಾನ ವ್ಯಕ್ತಪಡಿಸಿದರು. 

ಕಾರಖಾನೆಗಳಿಗೆ,ಕಾರ್ಮಿಕರು ಬರುತ್ತಿಲ್ಲ ಮತ್ತು ಅರಣ್ಯ ಜಾಸ್ತಿ ಇದೇ ಎಂಬ ಸಬೂಬುಗಳೆಲ್ಲ ನನ್ನೆದರು ಹೇಳಬೇಡಿ;15 ದಿನಗಳಲ್ಲಿ ನಿಗದಿಪಡಿಸಿದ ಪ್ರಗತಿ ಸಾಧಿಸದಿದ್ದಲ್ಲಿ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 

ಸಿರಗುಪ್ಪ ತಾಲೂಕಿನ ಗ್ರಾಪಂಗಳು ನರೇಗಾ ಅನುಷ್ಠಾನದಲ್ಲಿ ತೋರಿದ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇದೇ ರೀತಿಯ ಕಾರ್ಯ ಮುಂದುವರಿಸಿಕೊಂಡು ಹೋಗುವಂತೆ ಸೂಚಿಸಿದರು. 

*ಪ್ರತಿ ಮನೆಗೂ ನಳದ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಿ: ಜಲಜೀವನ್ ಮಿಶನ್ ಯೋಜನೆಯು ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿ ನೋಡಿದ್ರೇ ನಮ್ಮ ಜಿಲ್ಲೆಯಲ್ಲಿ ಪ್ರಗತಿ ಅಷ್ಟೇನು ಇಲ್ಲ ಎಂದು ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಜಲಜೀವನ್ ಮಿಶನ್‌ಗೆ ಜಿಲ್ಲೆಯಲ್ಲಿರುವ ಅಡೆತಡೆಗಳನ್ನು ನಿವಾರಿಸಿ ಪ್ರತಿ ಮನೆಗೂ ನಳದ ಮೂಲಕ ಶುದ್ಧ ಕುಡಿಯುವ ನೀರು ಒದಗಿಸುವ ಕೆಲಸವನ್ನು ಪಿಡಿಒಗಳು ಮಾಡುವಂತೆ ಅವರು ಸೂಚನೆ ನೀಡಿದರು. 

ಜಲಜೀವನ್ ಮಿಶನ್ ಯೋಜನೆಯ ಮೊದಲ ಹಂತದಡಿ 92 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು,57ಪೂರ್ಣಗೊಂಡಿದ್ದು,7-8 ಕಾಮಗಾರಿಗಳನ್ನು ಹೊರತುಪಡಿಸಿ ಉಳಿದೆಲ್ಲ ಕಾಮಗಾರಿಗಳನ್ನು ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು ಎಂದು ಜಲಜೀವನ್ ಮಿಶನ್ ಅಧಿಕಾರಿ ಸಭೆಗೆ ತಿಳಿಸಿದರು. 

ಜಲಜೀವನ್ ಮಿಶನ್ ಯೋಜನೆಯ ಎರಡು,ಮೂರು ಮತ್ತು ನಾಲ್ಕನೇ ಹಂತದಡಿ ಕೈಗೆತ್ತಿಕೊಳ್ಳಲಾಗುವ ಕಾಮಗಾರಿಗಳಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ ಅಧಿಕಾರಿ, ಮೊದಲ ಹಂತದಲ್ಲಿ 7-8 ಕಾಮಗಾರಿಗಳಿಗೆ ಸಮಸ್ಯೆ ಇದ್ದು,ಅವುಗಳನ್ನು ಬಗೆಹರಿಸಿಕೊಡುವಂತೆ ಸಚಿವರಲ್ಲಿ ವಿನಂತಿಸಿದರು. 

ಬಳ್ಳಾರಿ ಜಿಲ್ಲೆಯಲ್ಲಿರುವ 62 ಕುಡಿಯುವ ನೀರಿನ ಕೆರೆಗಳಿಗೆ ಸಂಪರ್ಕಿಸಲು ರಸ್ತೆಗಳಿಲ್ಲ;ಇದರಿಂದ ಸಮಸ್ಯೆಯಾಗುತ್ತಿದ್ದು ನರೇಗಾ ಯೋಜನೆ ಅಡಿ ಸಂಪರ್ಕ ರಸ್ತೆಗಳನ್ನು ನಿರ್ಮಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಸೂಚನೆ ನೀಡಿದರು. 

546 ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಗ್ರಾಪಂಗಳಿಗೆ ಹಸ್ತಾಂತರಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. 

*ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ 10 ಗ್ರಾಪಂಗಳ ಪಿಡಿಒ ಮತ್ತು ಅಧ್ಯಕ್ಷರಿಗೆ ಸನ್ಮಾನ: ಮುಂದಿನ ದಿನಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ 10 ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷರಿಗೆ ವಿಶೇಷ ಬಹುಮಾನ ನೀಡಲಾಗುವುದು ಮತ್ತು ಸನ್ಮಾನಿಸಿ ಗೌರವಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು. 

ಹಳ್ಳಿಗಳ ಕಟ್ಟಕಡೆಯ ಮನುಷ್ಯನಿಗೂ ಸೌಲಭ್ಯ ಕಲ್ಪಿಸುವವರೆಂದರೇ ಪಿಡಿಒಗಳು ಮತ್ತು ಕಾರ್ಯದರ್ಶಿಗಳು ಎಂದು ಹೇಳಿದ ಅವರು ಗ್ರಾಮಗಳಲ್ಲಿ ಸ್ವಚ್ಛತೆ,ನರೇಗಾ,ಕುಡಿಯುವ ನೀರಿನ ಸೌಲಭ್ಯ,ಶಾಲೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನ ಮತ್ತು ಸಮಸ್ಯೆಗಳ ಕುರಿತು ಚರ್ಚಿಸಲು ಈ ಸಭೆ ಕರೆಯಲಾಗಿದೆ ಎಂದು ಹೇಳಿದರು.  

ನರೇಗಾ ಅನುಷ್ಠನದಲ್ಲಿ ನಮ್ಮ ಜಿಲ್ಲೆ ರಾಜ್ಯದಲ್ಲಿಯೇ 2ನೇ ಸ್ಥಾನದಲ್ಲಿರುವುದಕ್ಕೆ ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ ಅವರು ಬಳ್ಳಾರಿ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವುದಲ್ಲದೇ ಯೋಜನೆಗಳ ಸದುಪಯೋಗ ಪ್ರತಿಯೊಬ್ಬರಿಗೂ ಸಿಗಬೇಕು;ಆ ಮೂಲಕ ಜನರಿಗೆ ವಿಶ್ವಾಸ ಮೂಡಿಸಬೇಕು;ಇದು ತಮ್ಮ ಜವಾಬ್ದಾರಿಯಾಗಿದೆ ಎಂದರು. 

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಜಿಪಂ ಸಿಇಒ ಜಿ.ಲಿಂಗಮೂರ್ತಿ, ಬುಡಾ ಅಧ್ಯಕ್ಷ ಪಾಲನ್ನ, ಎಪಿಎಂಸಿ ಅಧ್ಯಕ್ಷ ಉಮೇಶ ಸೇರಿದಂತೆ ಬಳ್ಳಾರಿ,ಸಿರಗುಪ್ಪ,ಸಂಡೂರು,ಕುರುಗೋಡು ಮತ್ತು ಕಂಪ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು,ಜಿಪಂ ಅಧಿಕಾರಿಗಳು ಹಾಗೂ 100 ಗ್ರಾಪಂಗಳ ಪಿಡಿಒಗಳು ಇದ್ದರು. 


ಸುದ್ದಿ ಓದಿ