ತಾತ್ಕಾಲಿಕ ಗೋಶಾಲೆ ಆರಂಭಿಸಬೇಕೆಂದು ಒತ್ತಾಯಿಸಿ ಮನವಿ
ಲೋಕದರ್ಶನ ವರದಿ,
ಜಮಖಂಡಿ5: ನಗರದ ಕುಡಚಿ ರಸ್ತೆಯಲ್ಲಿನ ತಾಲೂಕ ಆಡಳಿತ ಸೌಧದಲ್ಲಿ ತಹಶೀಲ್ದಾರ ಸದಾಶಿವ ಮಕ್ಕೋಜಿ ಅವರಿಗೆ ಗದ್ಯಾಳ ಗ್ರಾಮದ ರೈತರು ಬರಗಾಲದ ಹಿನ್ನಲೆಯಲ್ಲಿ ತಾತ್ಕಾಲಿಕ ಗೋಶಾಲೆ ಆರಂಭಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಮಳೆ ಅಭಾವದಿಂದ ಬೆಳೆಗಳು ಒಣಗಿ ಹೋಗುತ್ತಿದ್ದು, ಜಾನುವಾರುಗಳಿಗೆ ನೀರು ಮತ್ತು ಮೇವು ಕೊರತೆ ಉಂಟಾಗುತ್ತಿರುವುದರಿಂದ ತಾಲೂಡಳಿತ ಕೂಡಲೆ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಬರಗಾಲದಿಂದ ಕಬ್ಬು ಮತ್ತು ದ್ರಾಕ್ಷಿ ಬೆಳೆ ಹಾನಿಯಾಗುತ್ತಿದ್ದು, ರೈತರಿಗೆ ಪರಿಹಾರ ನೀಡಬೇಕು. ಮುಂಗಾರು ಮಳೆ ಪ್ರಾರಂಭವಾಗಿ 2 ತಿಂಗಳ ಕಳೆದರು ನಮ್ಮ ಭಾಗದಲ್ಲಿ ಯಾವುದೇ ರೀತಿಯ ಮಳೆಯಾಗುವ ಸೂಚನೆಗಳಿಲ್ಲ. ಮಳೆಯನ್ನೆ ನಂಬಿ ಜೀವನ ಸಾಗಿಸುತ್ತಿರುವ ರೈತರ ಬದುಕು ಚಿಂತಾದಾಯಕವಾಗಿದೆ. ಬರಗಾಲದ ಭಯದ ವಾತಾವರಣ ಹಿನ್ನಲೆಯಲ್ಲಿ ಜಾನುವಾರುಗಳಿಗೆ ಮೇವು ಮತ್ತು ನೀರಿನ ಕೊರತೆ ಉಂಟಾಗಲಿದೆ. ರಾಜ್ಯ ಸರ್ಕಾರ ರೈತರ ಪ್ರತಿ ಎಕರೆಗೆ 50 ಸಾವಿರ ಮತ್ತು ದಾಕ್ಷಿ ಬೆಳೆಗೆ 1 ಲಕ್ಷ ಪರಿಹಾರ ನೀಡಬೇಕು. ತಾಲೂಕಾಡಳಿತ ಮೇವು ಮತ್ತು ನೀರಿನ ಸಮಸ್ಯೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಗದ್ಯಾಳ ಗ್ರಾಮದಲ್ಲಿ ತಾತ್ಕಾಲಿಕವಾಗಿ ಗೋಶಾಲೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ರೈತರಾದ ಶಿವಾಜಿ ಕದಮ, ಪರಶುರಾಮ ಸಾಠೆ, ಜಗದೀಶ ಅಥಣಿ, ರಾಜು ತೇಲಿ, ಬಸವರಾಣಿ ಲವಗಿ, ಅಪ್ಪಣ್ಣ ಕದಮ ಇದ್ದರು.