ಮುಂದಗೋಡ

ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸುವಂತೆ ಮನವಿ

ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸುವಂತೆ ಮನವಿ

ಮುಂಡಗೋಡ:ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸುವಂತೆ ಒತ್ತಾಯಿಸಿ ತಾಲೂಕಾ ವಕೀಲರ ಸಂಘದವರು ತಹಶೀಲ್ದಾರರ ಮೂಲಕ ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.  

ವಕೀಲರ ಮೇಲೆ ಪದೇಪದೇ ಆಗುತ್ತಿರುವ ಹಲ್ಲೆಗಳನ್ನು ನಿಯಂತ್ರಿಸಲು ಶೀಘ್ರ ವಕೀಲರ ರಕ್ಷಣಾ ಕಾಯ್ದೆಯನ್ನು ರಚಿಸಿ ಜಾರಿಗೆ ತರಬೇಕು. ವಕೀಲರ ಮೇಲೆ ನಡೆಯುವ ಯಾವುದೇ ದೌರ್ಜನ್ಯ ಅವರಿಗೆ ಮಾತ್ರ ಸೀಮಿತಗೊಳ್ಳದೆ ಅವರ ಕುಟುಂಬ ಹಾಗೂ ಸಹೋದ್ಯೋಗಿಗಳಿಗೂ ತಟ್ಟುತ್ತದೆ. ವಕೀಲರು ತಮ್ಮನ್ನು ನಂಬಿಕೊಂಡು ಬಂದ ಕ್ಷಕಿದಾರರನ್ನು ರಕ್ಷಿಸುವ ಪ್ರಯತ್ನದಲ್ಲಿ ತಿಳಿದೋ ತಿಳಿಯದೆಯೋ ದುರುದ್ದೇಶಪೂರಿತ ದಾಳಿಗಳಿಗೆ ತುತ್ತಾಗುತ್ತಿದ್ದಾರೆ. ಕಕ್ಷಿದಾರರ ಹಿತರಕ್ಷಣೆ ಮಾಡುವಾಗ ಎದುರಾಗುವ ಸಂಕಟಗಳಲ್ಲಿ ಅವರು ತಮ್ಮನ್ನು ರಕ್ಷಿಸಿಕೊಳ್ಳುವ ಅಗತ್ಯವನ್ನು ಮನಗಾಣುವುದಿಲ್ಲ. ನ್ಯಾಯಾಂಗದ ಪ್ರಾಣವಾಯು ಎಂದು ಪರಿಗಣಿಸಲಾಗುವ ವಕೀಲರ ರಕ್ಷಣೆಗೆ ಕಾಯ್ದೆ ರಚನೆ ಮತ್ತು ಜಾರಿ ಅತ್ಯಂತ ಅನಿವಾರ್ಯವಾಗಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಕರಡು ವಿಧೇಯಕ ಜಾರಿಯಾಗಬೇಕು. ಈ ಕುರಿತು ಶೀಘ್ರ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.  

ಇದಕ್ಕೂ ಮುನ್ನ ವಕೀಲರ ಸಂಘದವರು ಪಟ್ಟಣದ ಶಿವಾಜಿ ಸರ್ಕಲ್‌ನಲ್ಲಿ ಕೆಲಹೊತ್ತು ವಾಹನ ಸಂಚಾರ ತಡೆ ನಡೆಸಿ ಘೋಷಣೆ ಕೂಗಿದರು. ಈ ವೇಳೆ ಸಂಘದ ಅಧ್ಯಕ್ಷ ನಟರಾಜ ಕಾತೂರ, ಉಪಾಧ್ಯಕ್ಷ ನಂದೀಶ ನಿಂಬಾಯಿ, ಕಾರ್ಯದರ್ಶಿ ರಾಜಶೇಖರ ಹುಬ್ಬಳ್ಳಿ, ಖಜಾಂಚಿ ಕೃಷ್ಣ ಹಂಚಿನಮನಿ, ನಿಕಟಪೂರ್ವ ಅಧ್ಯಕ್ಷ ಮಹಮ್ಮದ್‌ಸಲೀಮ್ ನಂದಿಕಟ್ಟಿ, ಶಿವಪುತ್ರ ಮಲವಳ್ಳಿ, ಗುಡ್ಡಪ್ಪ ಕಾತೂರ, ವಿಶ್ವನಾಥ ಪವಾಡಶೆಟ್ಟರ, ರಾಘವೇಂದ್ರ ಮಳಗೀಕರ ಹಾಗೂ ಮುಂತಾದವರು ಉಪಸ್ಥಿತರಿದ್ದರು. ಕೋರ್ಟ್‌ ಕಲಾಪಗಳಿಂದ ವಕೀಲರ ಸಂಘದವರು ದೂರ ಉಳಿದರು. ಗ್ರೇಡ್‌-2 ತಹಶೀಲ್ದಾರ ಜಿ.ಬಿ.ಭಟ್ ಮನವಿ ಸ್ವೀಕರಿಸಿದರು. 


ಸುದ್ದಿ ಓದಿ