ಅತಿಥಿ ಉಪನ್ಯಾಸಕರನ್ನೂ ಕೂಡಲೇ ಸೇವೆಗೆ ನಿಯೋಜಿಸಲು ಆಗ್ರಹ
ಬಳ್ಳಾರಿ 22: ಬಳ್ಳಾರಿಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಉನ್ನತ ಶಿಕ್ಷಣ ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯ ಜಿಲ್ಲಾ ನಾಯಕರಾದ ಜಗದೀಶ್ ನೇಮಕಲ್ ಮಾತನಾಡಿ, ಪದವಿ ಕಾಲೇಜುಗಳು ತಡವಾಗಿ ಆರಂಭವಾದ್ದರಿಂದ ಅತಿಥಿ ಉಪನ್ಯಾಸಕರ ಸಮಸ್ಯೆಗಳು ಹಲವು ಪಟ್ಟು ಉಲ್ಬಣಗೊಂಡಿದೆ. ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ, 15 ಅತಿಥಿ ಉಪನ್ಯಾಸಕರು ಆತ್ಮಹತ್ಯೆಯಿಂದಲೂ ಮತ್ತು ಗಂಭೀರ ಖಾಯಿಲೆಗಳಿಂದಲೂ ನರಳಿ ಸಾವಿಗೀಡಾಗಿದ್ದಾರೆ. ಎಷ್ಟೋ ಅತಿಥಿ ಉಪನ್ಯಾಸಕರು ತಳ್ಳುವ ಗಾಡಿಯಲ್ಲಿ ಹಣ್ಣು-ಹಂಪಲು, ತರಕಾರಿ ಮಾರುತ್ತ ಜೀವನ ಸಾಗಿಸುತ್ತಿದ್ದಾರೆ, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ.
ಇದೀಗ, ನವೆಂಬರ್ 17ರಿಂದ 2020-21ನೇ ಸಾಲಿನ ಪದವಿ ತರಗತಿಗಳು ಪ್ರಾರಂಭವಾಗಿದ್ದು, ಕಳೆದ ವರ್ಷ ಸೇವೆ ಸಲ್ಲಿಸಿದ್ದ ಶೇ.50ರಷ್ಟು ಉಪನ್ಯಾಸಕರನ್ನು ಸೇವೆಗೆ ತೆಗೆದುಕೊಂಡು 15,000ಕ್ಕೂ ಹೆಚ್ಚು ಇರುವ ಅತಿಥಿ ಉಪನ್ಯಾಸಕರನ್ನು ಕೈಬಿಡಲಾಗಿದೆ. ತಕ್ಷಣ ಈ ಸುತ್ತೋಲೆ ಹಿಂಪಡೆಯಬೇಕೆಂದು ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ಆಗ್ರಹಿಸಿದೆ.
ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯ ಜಿಲ್ಲಾ ನಾಯಕರಾದ ಎ.ಪಂಪಾಪತಿ ಮತ್ತು ಬಳ್ಳಾರಿಯ ಅತಿಥಿ ಉಪನ್ಯಾಸಕರುಗಳಾದ ಡಾ.ದುರುಗಪ್ಪ, ಮಹ್ಮದ್ ರಫೀಕ್, ಸುಂಕಣ್ಣ, ಶರಣಪ್ಪ ಇನ್ನಿತರು ಭಾಗವಹಿಸಿದ್ದರು.