ಗೌರವಧನ ಹೆಚ್ಚಳದೊಂದಿಗೆ ಶೀಘ್ರ ನೀಡುವಂತೆ ಒತ್ತಾಯಿಸಿ ಮನವಿ
ಮುಂಡಗೋಡ:ಅತಿಥಿ ಶಿಕ್ಷಕರ ಗೌರವಧನ ಹೆಚ್ಚಳದೊಂದಿಗೆ 2022-23ರ ಶೈಕ್ಷಣಿಕ ವರ್ಷದ ಗೌರವಧನವನ್ನು ಶೀಘ್ರವಾಗಿ ನೀಡುವಂತೆ ಒತ್ತಾಯಿಸಿ ಪ್ರಾಥಮಿಕ ಮತ್ತು ಪೌಢಶಾಲಾ ಅತಿಥಿ ಶಿಕ್ಷಕರ ಸಂಘ ತಾಲೂಕು ಘಟಕದವರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಶಿಕ್ಷಣ ಇಲಾಖೆಯ ಗುರಿ ಸಾಧನೆಗಾಗಿ ಹಾಗೂ ಮಕ್ಕಳ ಕಲಿಕಾ ಹಿತ ದೃಷ್ಟಿಯಿಂದ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದ್ದು ಸರ್ಕಾರವು ನಿಗದಿ ಪಡಿಸಿದ ಗೌರವಧನದಿಂದ ದೈನಂದಿನ ಜೀವನ ನಿರ್ವಹಣೆ ಕಷ್ಟಕರವಾಗಿದ್ದು ಕನಿಷ್ಠ 25ಸಾವಿರ ಗೌರವಧನ ನಿಗದಿಯೊಂದಿಗೆ 2022-23ರ ಶೈಕ್ಷಣಿಕ ವರ್ಷದಲ್ಲಿ ಅತಿಥಿ ಶಿಕ್ಷಕರಾಗಿ ನೇಮಕಗೊಂಡು 2ತಿಂಗಳು ಕಳೆಯುತ್ತಿದ್ದು ಗೌರವಧನ ಕೈಸೇರದೆ ತುಂಬಾ ಕಷ್ಟದಲ್ಲಿರುವ ನಮಗೆ ಗೌರವಧನ ಹೆಚ್ಚಳದೊಂದಿಗೆ ಶೀಘ್ರವಾಗಿ ಗೌರವಧನ ಬಿಡುಗಡೆ ಮಾಡುವ ಮೂಲಕ ಸಹಕರಿಸಬೇಕು. ಗೌರವಧನ ಬಿಡುಗಡೆ ನಂತರ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ವೇತನ, ತಿಂಗಳಿಗೆ ಒಂದು ರಜೆ ಪಡೆಯಲು ಅವಕಾಶ ಮತ್ತು ಅತಿಥಿ ಶಿಕ್ಷಕರಿಗೂ ಗುರುತಿನ ಚೀಟಿ ವಿತರಣೆ ಮಾಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಗಣೇಶ ಕುರಡೇಕರ, ಕಾರ್ಯದರ್ಶಿ ವಿದ್ಯಾ ಸುರಗಿಮಠ, ರೂಪಾ ಎಮ್., ಪಾಂಡುರಂಗ ಪಿ., ಪ್ರಕಾಶ ಕೋಟಿ, ಅನನ್ಯ ನಿಡಗುಂದಿ, ವಿರೂಪಾಕ್ಷ ಬಿ., ಶೋಭಾ ಕಾಂಬಳೆ ಹಾಗೂ ಮುಂತಾದವರು ಉಪಸ್ಥಿತರಿದ್ದರು.