ವಕೀಲರ ರಕ್ಷಣಾ ಕಾಯ್ದೆ ಶೀಘ್ರ ಜಾರಿಗೊಳಿಸುವಂತೆ ಮನವಿ
ಲೋಕದರ್ಶನ ವರದಿ
ಮುಂಡಗೋಡ: ವಕೀಲರ ರಕ್ಷಣಾ ಕಾಯ್ದೆಯನ್ನು ಶೀಘ್ರವಾಗಿ ಜಾರಿಗೊಳಿಸುವಂತೆ ಒತ್ತಾಯಿಸಿ ಇಲ್ಲಿನ ವಕೀಲರ ಸಂಘದವರು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ವಕೀಲರ ಮೇಲೆ ಪದೆ-ಪದೆ ಆಗುತ್ತಿರುವ ಹಲ್ಲೆಗಳನ್ನು ಮನಗಂಡು ವಕೀಲರ ಮೇಲೆ ಆಗುತ್ತಿರುವ ಹಲ್ಲೆಗಳನ್ನು ನಿಯಂತ್ರಿಸಲು ಶೀಘ್ರ ವಕೀಲರ ರಕ್ಷಣಾ ಕಾಯ್ದೆಯನ್ನು ರಚಿಸಿ ಜಾರಿಗೆ ತರಬೇಕು. ವಕೀಲರ ಮೇಲೆ ನಡೆಯುವ ಯಾವುದೇ ದೌರ್ಜನ್ಯ ಅವರಿಗೆ ಮಾತ್ರ ಸೀಮಿತಗೊಳ್ಳದೆ ಅವರ ಕುಟುಂಬ ಹಾಗೂ ಸಹದ್ಯೋಗಿಗಳಿಗೂ ತಟ್ಟುತ್ತದೆ. ವಕೀಲರು ತಮ್ಮನ್ನು ನಂಬಿಕೊಂಡು ಬಂದ ಕಕ್ಷಿದಾರರನ್ನು ರಕ್ಷಿಸುವ ಪ್ರಯತ್ನದಲ್ಲಿ ತಿಳಿದೋ ತಿಳಿಯದೆ ಕೆಟ್ಟ ಮತ್ತು ದುರುದ್ದೇಶಪೂರಿತ ದಾಳಿಗಳಿಗೆ ತುತ್ತಾಗುವುದು ಹೊಸದೇನಲ್ಲಾ. ಕಕ್ಷಿದಾರರ ಹಿತರಕ್ಷಣೆ ಮಾಡುವಾಗ ಎದುರಾಗುವ ಸಂಕಟಗಳಲ್ಲಿ ಅವರು ತಮ್ಮನ್ನು ರಕ್ಷಿಸಿಕೊಳ್ಳುವ ಅಗತ್ಯವನ್ನು ಮನಗಾಣುವುದಿಲ್ಲ. ನ್ಯಾಯಾಂಗದ ಪ್ರಾಣವಾಯು ಎಂದು ಪರಿಗಣಿಸಲಾಗುವ ವಕೀಲರ ರಕ್ಷಣೆಗೆ ಕಾಯ್ದೆ ರಚನೆ ಮತ್ತು ಜಾರಿ ಅತ್ಯಂತ ಅನಿವಾರ್ಯ. ಈಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಕರಡು ವಿಧೇಯಕ ಜಾರಿಯಾಗಬೇಕು. ತಾವು ಶೀಘ್ರ ಈ ಕುರಿತು ಕ್ರಮ ಕೈಗೊಳ್ಳಬೇಕು. ಅದಕ್ಕೆ ತಪ್ಪಿದಲ್ಲಿ ಈ ಕುರಿತು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ವೇಳೆ ವಕೀಲರಾದ ನಟರಾಜ ಕಾತೂರ, ಕೃಷ್ಣ ಹಂಚಿನಮನಿ, ಎಮ್.ಎ.ನಂದಿಕಟ್ಟಿ, ಶಿವಪುತ್ರ ಮಲವಳ್ಳಿ, ಗುಡ್ಡಪ್ಪ ಕಾತೂರ, ಗೀತಾ ಕೆಂಚಗೊಣ್ಣವರ, ವಿಶ್ವನಾಥ ಪವಾಡಶೆಟ್ಟರ, ನಾಗರಾಜ ಬಾರ್ಕಿ, ಬಿ.ಎಫ್.ಪೂಜಾರ ಹಾಗೂ ಮುಂತಾದವರು ಉಪಸ್ಥಿತರಿದ್ದರು.