ಚಿಕ್ಕೋಡಿ

ಕೇಂದ್ರೀಯ ಮಹಾವಿದ್ಯಾಲಯ ಮಂಜೂರು ಮಾಡುವಂತೆ ಮನವಿ

ಕೇಂದ್ರೀಯ ಮಹಾವಿದ್ಯಾಲಯ ಮಂಜೂರು ಮಾಡುವಂತೆ ಮನವಿ

ಚಿಕ್ಕೋಡಿ 06: ಬರುವ ಶೈಕ್ಷಣಿಕ ವರ್ಷದಿಂದ ತಾಲೂಕಿನ ಸದಲಗಾ ಪಟ್ಟಣದಲ್ಲಿ ಕೇಂದ್ರೀಯ ಮಹಾವಿದ್ಯಾಲಯ ಆರಂಭವಾಗಲಿದೆ ಎಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹೇಳಿದರು.

ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ತಾವು ಲೋಕಸಭೆ ಸದಸ್ಯರಾಗಿದ್ದ ವೇಳೆಯಲ್ಲಿ ಚಿಕ್ಕೋಡಿ ಹಾಗೂ ಸದಲಗಾ ಪಟ್ಟಣದಲ್ಲಿ ಕೇಂದ್ರೀಯ ಮಹಾವಿದ್ಯಾಲಯ ಮಂಜೂರು ಮಾಡಬೇಕೆಂದು ಮನವಿ ಮಾಡಲಾಗಿತ್ತು. ಚಿಕ್ಕೋಡಿಯಲ್ಲಿ ಈಗಾಗಲೇ ೧ ಮತ್ತು ೨ ಕೇಂದ್ರಿಯ ಮಹಾವಿದ್ಯಾಲಯ ಹಲವು ವರ್ಷಗಳಿಂದ ಶೈಕ್ಷಣಿಕ ವರ್ಷ ಆರಂಭಿಸಿದೆ. ಬರುವ ಶೈಕ್ಷಣಿಕ ವರ್ಷದಿಂದ ಸದಲಗಾದಲ್ಲಿ ೧ ರಿಂದ ೫ನೆಯ ತರಗತಿಯವರಿಗೆ ಕೇಂದ್ರಿಯ ವಿದ್ಯಾಲಯ ಆರಂಭಿಸಲಾಗುತ್ತದೆ ಎಂದು ತಿಳಿಸಿದರು.

ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಐದು ಮೋರಾರ್ಜಿ ವಸತಿ ಶಾಲೆ ಮತ್ತು ಮೂರು ಕೇಂದ್ರಿ ವಿದ್ಯಾಲಯದಲ್ಲಿ ಸುಮಾರು ೩೭೦೦ ಮಕ್ಕಳು ವಿದ್ಯಾಭ್ಯಾಸ ಮಾಡಲಿದ್ದು, ಇದರಿಂದ ಆರ್ಥಿಕ ಹಿಂದುಳಿದ ವರ್ಗದ ಜನರಿಗೆ ಮತ್ತು ಬಡ ಕೂಲಿಕಾರ್ಮಿಕರ ಮಕ್ಕಳ ಶೈಕ್ಷಣಿಕವಾಗಿ ಅನುಕೂಲವಾಗಲಿದೆ. ಅಧಿಕಾರಿ ವರ್ಗದ ಮಕ್ಕಳಿಗೆ ಕೇಂದ್ರಿಯ ವಿದ್ಯಾಲಯ ಮಹತ್ತರ ಪಾತ್ರ ವಹಿಸಲಿದೆ ಎಂದರು.

ಚಿಕ್ಕೋಡಿಯಲ್ಲಿ ಮಂಜೂರಾಗಿರುವ ಕೇಂದ್ರಿಯ ವಿದ್ಯಾಲಯಕ್ಕೆ ಎಲ್ಲ ಮೂಲಭೂತ ಸೌಲಭ್ಯ ಒದಗಿಸಲಾಗಿದೆ. ನಗರದ ಹೊರವಲಯದಲ್ಲಿ ಹೈಟಿಕ್ ಕಟ್ಟಡ ನಿರ್ಮಾಣವಾಗಿದೆ. ಶೀಘ್ರವಾಗಿ ಉದ್ಘಾಟಿಸಿ ಮಕ್ಕಳಿಗೆ ಅನುಕೂಲ ಕಲ್ಪಿಸಲಾಗುವುದು. ಸದಲಗಾ ಪಟ್ಟಣದಲ್ಲಿ ಶಾಸಕರ ಅನುದಾನದಲ್ಲಿ ಮೂಲಭೂತ ಸೌಲಭ್ಯ ಒದಗಿಸಿರುವ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ಹೋದ ಬಳಿಕ ಸರ್ಕಾರವು ಬರುವ ಶೈಕ್ಷಣಿಕ ವರ್ಷದಿಂದ ತರಗತಿ ಆರಂಭಿಸಲು ಅನುಮತಿ ನೀಡಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ ಇದ್ದರು.

ಸುದ್ದಿ ಓದಿ