ರಸ್ತೆ, ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಮನವಿ
ಬಳ್ಳಾರಿ 31: ನಗರದ ಆಂಧ್ರಾಳ್ ರಸ್ತೆಯಲ್ಲಿರುವ ಹರಿಚಂದ್ರ ಘಾಟ್ ಹತ್ತಿರ ಬಹುತೇಕವಾಗಿ ಬಡವರು, ದುಡಿಯುವ ಜನರೇ ವಾಸವಾಗಿದ್ದು, ಹಲವು ಮೂಲಭೂತ ಸೌಕರ್ಯದ ಕೊರತೆಯಿಂದ ಶೋಚನೀಯ ಪರಿಸ್ಥಿತಿಗೆ ಒಳಗಾಗಿದ್ದಾರೆ. ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದೆ ಕೆಟ್ಟ ಪರಿಸ್ಥಿತಿ ಉಂಟಾಗಿದೆ ಹಾಗೂ ಸಮರ್ಪಕ ರಸ್ತೆ ಇಲ್ಲದೆ ಸಾರ್ವಜನಿಕರಿಗೆ ಅತೀವ ತೊಂದರೆಯಾಗಿದೆ. ಸಾಕಷ್ಟು ಜನರು ಬಿದ್ದು ಗಾಯ ಮಾಡಿಕೊಂಡಿದ್ದಾರೆ, ಅಪಘಾತಕ್ಕೀಡಾಗಿದ್ದಾರೆ. ಮತ್ತೊಂದೆಡೆ ಬಹುತೇಕೆವಾಗಿ ದುಡಿಯುವ ಜನರೆ ವಾಸವಾಗಿರುವ ನಗರದ ಹೊರ ವಲಯದಲ್ಲಿರುವ ಮುಂಡ್ರಗಿ ಬಡಾವಣೆಯ ಆಶ್ರಯ ಕಾಲನಿಯಲ್ಲಿ ಅನೇಕಾನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆಶ್ರಯ ಕಾಲನಿಯಲ್ಲಿ ಬಹುತೇಕವಾಗಿ ಸಿಸಿ ರೋಡ್ ಹಾಕಲಾಗಿದ್ದು, ಒಂದು ರಸ್ತೆಗೆ ಮಾತ್ರ ಸಿಸಿ ರೋಡ್ ಹಾಕಿಲ್ಲ. ಅಂಕು ಡೊಂಕಾದ ರಸ್ತೆಯಲ್ಲಿ ಮಕ್ಕಳು, ವಯಸ್ಸಾಗಿರುವವರಿಗೆ ಓಡಾಲು ಕಷ್ಟವಾಗಿದೆ. ಆಶ್ರಯ ಕಾಲನಿಯಲ್ಲಿರುವ ಮುಖ್ಯ ರಸ್ತೆಯಲ್ಲಿರುವ ಪ್ರಮುಖ ಮಳೆ ನೀರಿನ ಕಾಲುವೆಯಲ್ಲಿ ಚರಂಡಿ ನೀರು ಹರಿಯಲು ಅವಕಾಶ ಮಾಡಿಕೊಡಲಾಗಿದೆ. ಅಲ್ಲದೆ ಈ ಕಾಲುವೆಯಲ್ಲಿ ಅಡಚಣೆ ಉಂಟಾಗಿದ್ದು, ಚರಂಡಿ ನೀರು ನಿಂತಲ್ಲಿಯೆ ನಿಂತು, ಗೊಬ್ಬು ನಾತ ಬೀರುತ್ತಿದೆ. ರೋಗ ರುಜಿನಗಳಿಗೆ ಕಾರಣವಾಗಿದೆ. ಇದಲ್ಲದೆ ಆಶ್ರಯ ಕಾಲನಿಯ ಕೆಲವು ರಸ್ತೆಗಳಲ್ಲಿ ಒಳಚರಂಡಿ ಪದೇ ಪದೇ ಅಡಚಣೆಗೆ ಒಳಗಾಗಿ ಚರಂಡಿ ನೀರು ಮನೆ ಒಳಗೂ ನುಗ್ಗುತ್ತದೆ. ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ. ಕುಡಿಯುವ ನೀರಿನಲ್ಲಿ ಚರಂಡಿ ನೀರು ಮಿಶ್ರಿತವಾಗಿ ಬರುವುದರಿಂದ ಜನರು ಹಲವು ರೋಗಗಳಿಗೆ ತುತ್ತಾಗಿದ್ದಾರೆ. ದುಡಿದಿದ್ದೆಲ್ಲಾ ಆಸ್ಪತ್ರೆಗೆ ಇಡಬೇಕಾದ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಈ ಕೂಡಲೇ ಮಹನಗರಪಾಲಿಕೆಯು ಮುಂಡ್ರಿಗಿ ಹಾಗೂ ಹರಿಶ್ಚಂದ್ರ ಘಾಟ್ ಬಳಿಯ ಪ್ರದೇಶಗಳಿಗೆ ಸಮರ್ಪಕ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ನಗರ ಸ್ಥಳೀಯ ಸಮಿತಿಯು ಮನವಿ ಮಾಡಿದ್ದಾರೆ.